Advertisement

ಹಂತಕರಿಗೆ ಪಾಕ್‌ ಸಂದೇಶ: ಪಾಕಿಸ್ಥಾನದ ಸಲ್ಮಾನ್‌ ಭಾಯಿ ಎಂಬ ವ್ಯಕ್ತಿಯಿಂದ ಸೂಚನೆ: ಎನ್‌ಐಎ

01:20 AM Jul 03, 2022 | Team Udayavani |

ಹೊಸದಿಲ್ಲಿ: “ಸುಮ್ಮನೇ ಸಣ್ಣಪುಟ್ಟ ಕೃತ್ಯಗಳನ್ನು ಮಾಡಬೇಡಿ… ಏನಾದರೂ ದೊಡ್ಡದು, ಇಡೀ ದೇಶವೇ ಬೆಚ್ಚಿ ಬೀಳುವಂಥದ್ದು ಮಾಡಿ….’

Advertisement

ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯ ಲಾಲ್‌ ಎಂಬ ಟೈಲರ್‌ ಅನ್ನು ಕೊಂದ ಆರೋಪಿಗಳಾದ ರಿಯಾಜ್‌ ಅಖಾ¤ರಿ ಹಾಗೂ ಗೌಸ್‌ ಮೊಹಮ್ಮದ್‌ ಗೆ ಪಾಕಿಸ್ಥಾನದ ವ್ಯಕ್ತಿಯೊಬ್ಬ ಹೀಗೊಂದು ಸಂದೇಶವನ್ನು ಕಳುಹಿಸಿದ್ದ ಎಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಿಳಿಸಿದೆ.

ಅಲ್ಲಿಗೆ, ಟೈಲರ್‌ ಹತ್ಯೆ ಘಟನೆ, ಆತ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ನಾಯಕಿ ನೂಪುರ್‌ ಶರ್ಮಾರನ್ನು ಬೆಂಬಲಿಸಿದ ಮಾತ್ರಕ್ಕೆ ಉದ್ವೇಗದಿಂದ ಏಕಾಏಕಿ ನಡೆದ ಘಟನೆಯಲ್ಲ, ಬದಲಿಗೆ ಪೂರ್ವಯೋಜಿತವಾಗಿ, ಹೀಗೇ ಮಾಡಬೇಕು ಎಂಬ ಸೂಕ್ತ ನಿರ್ದೇಶನದ ಅಡಿಯಲ್ಲಿ ನಿರ್ವಹಿಸಲಾಗಿರುವ ಕೃತ್ಯ ಎಂದು ಎನ್‌ಐಎ ತಿಳಿಸಿದೆ.

ಮೂಲಗಳ ಪ್ರಕಾರ, ಆರೋಪಿಗಳಲ್ಲೊಬ್ಬ­ನಾದ ಗೌಸ್‌, 2014ರ ಡಿಸೆಂಬರ್‌ನಲ್ಲಿ ಪಾಕಿಸ್ಥಾನಕ್ಕೆ ಹೋಗಿ ಬಂದಿದ್ದ. ಆಗ ಆತ ಅಲ್ಲಿನ ರ್ಯಾಡಿಕಲ್‌-ಎ-ಇಸ್ಲಾಮಿ ಎಂಬ ಸಂಘಟನೆ ಆಯೋಜಿಸಿದ್ದ 45 ದಿನಗಳ ವಿಚಾರ ಸಂಕಿರಣವೊಂದರಲ್ಲಿ ಭಾಗವಹಿಸಿದ್ದ.

2015ರ ಜನವರಿಯಲ್ಲಿ ಭಾರತಕ್ಕೆ ವಾಪಸ್ಸಾಗಿದ್ದ ಈತ, ರಾಜಸ್ಥಾನದ ಉದಯಪುರ ಹಾಗೂ ಸುತ್ತಲಿನ ಪ್ರಾಂತಗಳಲ್ಲಿರುವ ಕೆಲವು ವಾಟ್ಸ್‌ಆ್ಯಪ್‌ ಗುಂಪುಗಳಲ್ಲಿ ಸೇರ್ಪಡೆಗೊಂಡಿದ್ದ ಹಾಗೂ ಪಾಕಿಸ್ಥಾನದಲ್ಲಿ ಸಲ್ಮಾನ್‌ ಭಾಯಿ ಎಂದು ಕರೆಯಿಸಿಕೊಳ್ಳುವ ಅಬು ಇಬ್ರಾಹೀಂ ಎಂಬ ವ್ಯಕ್ತಿಯೊಡನೆ ಸಂಪರ್ಕದಲ್ಲಿದ್ದ.

Advertisement

“ಪ್ಲಾನ್‌ ಬಿ’ ಮಾಡಿಕೊಂಡಿದ್ದ ಹಂತಕರು!: ಉದಯಪುರದಲ್ಲಿ ಜೂ. 28ರಂದು ಕನ್ಹಯ್ಯ ಲಾಲ್‌ ಅವರನ್ನು ಗೌಸ್‌ ಮತ್ತು ರಿಯಾಜ್‌ ಎಂಬುವರು ಹತ್ಯೆ ಮಾಡಿದ್ದರು. ಟೈಲರ್‌ ಅಂಗಡಿಯೊಳಗೆ ಬಟ್ಟೆ ಹೊಲಿಸಿಕೊಳ್ಳುವವರ ಸೋಗಿನಲ್ಲಿ ಹೋಗಿದ್ದ ಇಬ್ಬರೂ ಅವರನ್ನು ಹತ್ಯೆ ಮಾಡಿದ್ದರು. ಆದರೆ ಕನ್ಹಯ್ಯರನ್ನು ಹತ್ಯೆ ಮಾಡಲು ಅವರಿಬ್ಬರೂ ಅಂಗಡಿಯೊಳಗೆ ಹೋದಾಗ ಅಂಗಡಿಯ ಹೊರಗೆ ಮತ್ತಿಬ್ಬರು ನಿಂತು ಪ್ಲಾನ್‌ ಬಿ ಮಾಡಿಕೊಂಡು ಕಾಯುತ್ತಿದ್ದರು ಎಂಬ ವಿಚಾರ ತಿಳಿದುಬಂದಿದೆ.

ಅಂಗಡಿಯೊಳಗೆ ಹೋಗಿದ್ದ ಗೌಸ್‌ ಮತ್ತು ರಿಯಾಜ್‌ ಅವರ ಕೈಯಿಂದ ತಪ್ಪಿಸಿಕೊಂಡು ಕನ್ಹಯ್ಯ ಏನಾದರೂ ಹೊರಗೆ ಓಡಿ ಬಂದರೆ ಆತನನ್ನು ಅಲ್ಲೇ ಮುಗಿಸಲು ಮತ್ತಿಬ್ಬರು ಕನ್ಹಯ್ಯ ಅವರ ಟೈಲರ್‌ ಅಂಗಡಿಯ ಬಾಗಿ­ಲಲ್ಲೇ ಕಾಯುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗೆ, ಪ್ಲಾನ್‌ “ಬಿ’ ಮಾಡಿಕೊಂಡಿದ್ದ ಮೂವರನ್ನೂ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಆರೋಪ ತಳ್ಳಿಹಾಕಿದ ಬಿಜೆಪಿ: ಟೈಲರ್‌ ಕನ್ಹಯ್ಯ ಲಾಲ್‌ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರಿಯಾಜ್‌ ಅಖಾ¤ರಿ ಬಿಜೆಪಿ ಸದಸ್ಯ ಎಂಬ ಕಾಂಗ್ರೆಸ್‌ನ ಆರೋಪವನ್ನು ರಾಜಸ್ಥಾನದ ಬಿಜೆಪಿ ಮೋರ್ಚಾ ತಳ್ಳಿಹಾಕಿದೆ. ಸ್ಥಳೀಯ ಬಿಜೆಪಿ ನಾಯಕರೊಂದಿಗೆ ರಿಯಾಜ್‌ ಖಾನ್‌ ಇರುವಂಥ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಕಾಂಗ್ರೆಸ್‌ ಕೂಡ ಈ ಫೋಟೋವನ್ನು ಅಪ್‌ಲೋಡ್‌ ಮಾಡಿತ್ತು. “ರಿಯಾಜ್‌ ಬಿಜೆಪಿ ಸದಸ್ಯನಾಗಿರುವ ಕಾರಣಕ್ಕೇ ಕೇಂದ್ರ ಸರಕಾರ ಅಷ್ಟೊಂದು ಕ್ಷಿಪ್ರವಾಗಿ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿ­ಸಿತೇ’ ಎಂದು ಕಾಂಗ್ರೆಸ್‌ ಪ್ರಶ್ನಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, “ಆತ ಬಿಜೆಪಿ ಸದಸ್ಯನಲ್ಲ. ಯಾವುದೇ ನಾಯಕನ ಜತೆ ಯಾರು ಬೇಕಾದರೂ ಫೋಟೋ ಕ್ಲಿಕ್ಕಿಸಿಕೊಳ್ಳ­ಬಹುದು. ಅದೆಲ್ಲ ಸಾಮಾನ್ಯ. ಒಂದು ಫೋಟೋದಿಂದ ಆತ ಬಿಜೆಪಿ ಸದಸ್ಯ ಎಂದು ಹೇಳಲು ಬರುವುದಿಲ್ಲ’ ಎಂದಿದೆ.

ಛತ್ತೀಸ್‌ಗಢ‌ದ ವ್ಯಕ್ತಿಯಿಂದ ದೂರು: ಎರಡು ಹತ್ಯೆಯ ಬೆನ್ನಲ್ಲೇ ಛತ್ತೀಸ್‌ಗಢದ 22 ವರ್ಷದ ಯುವಕನೊಬ್ಬ ತನ್ನ ಜೀವಕ್ಕೆ ಬೆದರಿಕೆ ಇದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾನೆ. ತಾನೂ ನೂಪುರ್‌ ಶರ್ಮಾರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿದ್ದೆ. ಬಳಿಕ ನನ್ನ ಎರಡೂ ಮೊಬೈಲ್‌ ಸಂಖ್ಯೆಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆತ ದೂರಿನಲ್ಲಿ ತಿಳಿಸಿದ್ದಾನೆ.

ಸ್ಯಾಮ್‌ಸಂಗ್‌ ಕಚೇರಿ ಮೇಲೆ ದಾಳಿ: ಪಾಕಿಸ್ಥಾನದ ಕರಾಚಿಯ ಮಾಲ್‌ವೊಂದರಲ್ಲಿ ಅಳವಡಿಸಲಾಗಿದ್ದ ವೈಫೈ ಡಿವೈಸ್‌ವೊಂದರಲ್ಲಿ ಪ್ರವಾದಿ ಮೊಹಮ್ಮದ್‌ರ ಸಹಚರರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿ ಗುಂಪೊಂದು ಸ್ಯಾಮ್‌ಸಂಗ್‌ ಮಳಿಗೆ ಮೇಲೆ ದಾಳಿ ನಡೆಸಿದೆ. ಸ್ಯಾಮ್‌ಸಂಗ್‌ನ ಬಿಲ್‌ಬೋರ್ಡ್‌ಗಳನ್ನು ಕಿತ್ತೆಸೆದು ದಾಂದಲೆ ಮಾಡಿ, ಪ್ರತಿಭಟನೆಯನ್ನೂ ನಡೆಸಿದೆ. ಕೂಡಲೇ ಪೊಲೀಸರು, ವೈಫೈ ಸಾಧನವನ್ನು ಬಂದ್‌ ಮಾಡಿ, ಮಳಿಗೆಯ 20 ಸಿಬಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಮೋದಿ, ಯೋಗಿ ಚಿತ್ರಗಳ ಮೇಲೆ ಎಕ್ಸ್‌ ಚಿಹ್ನೆ
2018ರಲ್ಲಿ ಸಾಮಾಜಿಕ ಜಾಲತಾಣ­ವೊಂದ­ರಲ್ಲಿ ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರ ವಿರುದ್ಧ ಹೇಳಿಕೆಯೊಂದನ್ನು ಪೋಸ್ಟ್‌ ಮಾಡಿದ್ದಕ್ಕೆ ಹತ್ಯೆಗೀಡಾಗಿದ್ದ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಕಮಲೇಶ್‌ ತಿವಾರಿಯವರ ಪತ್ನಿ ಕಿರಣ್‌ ತಿವಾರಿಯವರಿಗೆ ಕೊಲೆ ಬೆದರಿಕೆ ಪತ್ರ­ ವೊಂದು ಬಂದಿದೆ ಎಂದು ಖುದ್ದು ಕಿರಣ್‌ ತಿವಾರಿಯವರೇ ತಿಳಿಸಿದ್ದಾರೆ. ಅವರಿಗೆ ಬಂದಿರುವ ಪತ್ರದಲ್ಲಿ ಪ್ರಧಾನಿ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಅವರ ಚಿತ್ರಗಳೂ ಇದ್ದು ಆ ಚಿತ್ರಗಳ ಮೇಲೆ ದೊಡ್ಡದಾಗಿ ಎಕ್ಸ್‌ ಚಿಹ್ನೆಯನ್ನು ಹಾಕಲಾಗಿದೆ ಎಂದು ಅವರು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next