Advertisement

ಕೇರಳದಲ್ಲಿ 7.62 ಎಂಎಂ ಅಳತೆಯ ಪಾಕ್‌ ಬುಲೆಟ್‌ ಪತ್ತೆ!

10:07 AM Feb 25, 2020 | Team Udayavani |

ಕೊಲ್ಲಂ: ಕೇರಳದ ಕೊಲ್ಲಂ ಜಿಲ್ಲೆಯ ಕುಳತ್ತುಪುಳದಲ್ಲಿ 7.62 ಎಂಎಂ ಅಳತೆಯ 14 ಸಜೀವ ಗುಂಡುಗಳು ದೊರೆತಿದ್ದು, ಅವು ಪಾಕಿಸ್ಥಾನದಿಂದ ಬಂದಿವೆ ಎಂಬ ಬಲವಾದ ಅನುಮಾನವನ್ನು ಕೇರಳ ಪೊಲೀಸರು ವ್ಯಕ್ತಪಡಿಸಿದ್ದಾರೆ.

Advertisement

ಈಗ ದೊರೆತಿರುವ ಎಲ್ಲ ಗುಂಡುಗಳ ಮೇಲೆ “ಪಿಒಎಫ್’ (ಪಾಕಿಸ್ಥಾನ್‌ ಆರ್ಡಿನೆನ್ಸ್‌ ಫ್ಯಾಕ್ಟರೀಸ್‌) ಎಂಬ ಗುರುತಿರುವುದು ಈ ಅನುಮಾನಕ್ಕೆ ಕಾರಣ ವಾಗಿದೆ. ಈ ಆಘಾತಕಾರಿ ಬೆಳವಣಿಗೆಯ ಬೆನ್ನಲ್ಲೇ ಪ್ರಕರಣದ ತನಿಖೆ ನಡೆಸಲು ಉಗ್ರ ನಿಗ್ರಹ ದಳದ ಡಿಐಜಿ ನೇತೃತ್ವದಲ್ಲಿ ಕೇಂದ್ರ ಮತ್ತು ಇತರ ರಾಜ್ಯಗಳ ತನಿಖಾ ಸಂಸ್ಥೆಗಳ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಿ ಸರಕಾರ ಆದೇಶ ಹೊರಡಿಸಿದೆ.

ತಮಿಳುನಾಡು ಗಡಿ ಭಾಗದಿಂದ 60 ಕಿ.ಮೀ. ದೂರದಲ್ಲಿರುವ ಕುಳತ್ತುಪುಳದ ಸೇತುವೆ ಮೇಲೆ ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರು ವ್ಯಕ್ತಿಗಳಿಗೆ ಅನುಮಾನಾಸ್ಪದ ಕವರ್‌ ಒಂದು ದೊರೆತಿದ್ದು, ಅದರೊಳಗೆ ಗುಂಡುಗಳಿದ್ದವು. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ತೆರಳಿದ ಸ್ಥಳೀಯ ಪೊಲೀಸರು ಸಜೀವ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬುಲೆಟ್‌ಗಳನ್ನು ಲಾಂಗ್‌-ರೇಂಜ್‌ ರೈಫ‌ಲ್‌ಗ‌ಳಲ್ಲಿ ಬಳಸಲಾಗುತ್ತದೆ ಎಂದು ಡಿಜಿಪಿ ಲೋಕನಾಥ್‌ ಬೆಹೆರಾ ಮಾಹಿತಿ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಯನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ನೀಡಲಾಗಿದೆ. ವಿವಿಧ ರಾಜ್ಯಗಳ ಜತೆಗೂ ಚರ್ಚಿಸಿ ತನಿಖಾ ತಂಡ ರಚಿಸಲಾಗಿದೆ ಎಂದು ಡಿಜಿಪಿ ತಿಳಿಸಿದ್ದು, ಕೇರಳ ದೊಂದಿಗೆ ಗಡಿ ಹಂಚಿಕೊಂಡಿರುವ ಕರ್ನಾಟಕ ಮತ್ತು ತಮಿಳುನಾಡು ಅಧಿಕಾರಿಗಳು ತನಿಖಾ ತಂಡದಲ್ಲಿರುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next