ಇಸ್ಲಾಮಾಬಾದ್: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಕಂಗೆಟ್ಟಿರುವ ಪಾಕಿಸ್ಥಾನ ಕಂಡ ಕಂಡಲ್ಲಿ ಭಾರತ ಮತ್ತು ಭಾರತೀಯರನ್ನು ಹಣಿಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ.
ಇದಕ್ಕೆ ಹೊಸ ಸೇರ್ಪಡೆಯಾಗಿ ಯುನಿಸೆಫ್ ನ ಸದ್ಭಾವನಾ ರಾಯಭಾರಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ವಜಾಗೊಳಿಸಬೇಕು ಎಂದು ವಿಶ್ವಸಂಸ್ಥೆಗೆ ಪಾಕ್ ಒತ್ತಾಯಿಸಿದೆ.
ಪ್ರಿಯಾಂಕಾ ಬಾಲಾಕೋಟ್ ದಾಳಿ ಸಂದರ್ಭ (ಫೆಬ್ರವರಿಯಲ್ಲಿ) ಭಾರತೀಯ ಸಶಸ್ತ್ರ ಪಡೆಗಳನ್ನು ಉದ್ದೇಶಿಸಿ ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದರು. ಇದೇ ಟ್ವೀಟ್ ಅನ್ನು ನೆವವಾಗಿರಿಸಿ, ಈಗ ಎಚ್ಚೆತ್ತಿರುವ ಪಾಕ್, ಮೋದಿ ಸರಕಾರದ ನಡೆಯನ್ನು ಪ್ರಿಯಾಂಕಾ ಬೆಂಬಲಿಸುತ್ತಿದ್ದಾರೆ. ಕಾಶ್ಮೀರ ವಿಚಾರದಲ್ಲಿ ಯುದ್ಧಕ್ಕೆ, ಅಣ್ವಸ್ತ್ರ ಯುದ್ಧಕ್ಕೂ ಬೆಂಬಲ ನೀಡುತ್ತಿದ್ದಾರೆ. ಇದು ಅವರು ವಿಶ್ವಸಂಸ್ಥೆಯಲ್ಲಿ ಹೊಂದಿರುವ ಶಾಂತಿ ರಾಯಭಾರಿ ಹುದ್ದೆಗೆ ಅವಮಾನಕರ. ಆದ್ದರಿಂದ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಹೇಳಿದೆ.
ಪಾಕಿಸ್ಥಾನದ ಮಾನವ ಹಕ್ಕು ಸಚಿವೆ ಶೈರೀನ್ ಮಝಾರಿ ಅವರು ಈ ಕುರಿತ ಪತ್ರಿಕಾ ಹೇಳಿಕೆ ನೀಡಿದ್ದು, ಟ್ವೀಟ್ ಮಾಡಿದ್ದಾರೆ. ಅವರು ಹೀಗೆ ಟ್ವೀಟ್ ಮಾಡುತ್ತಿದ್ದಂತೆ, ಭಾರತೀಯ ಟ್ವೀಟಿಗರು ಲೇವಡಿ ಮಾಡಿದ್ದಾರೆ. ಇನ್ನಷ್ಟು ದಿನ ಕಳೆದ ಬಳಿಕ ನೀವು ಹೀಗೆ ಆಗ್ರಹ ಮಾಡಬಹುದಿತ್ತು ಎಂದರೆ, ಇನ್ನು ಕೆಲವರು ಪಾಕ್‌ನಲ್ಲಿ ಮಾನವ ಹಕ್ಕು ಎಂದೇನಾದರೂ ಇದೆಯೇ ಎಂದು ಕಾಲೆಳೆದಿದ್ದಾರೆ.