ಲಾಹೋರ್ : ಭಾರತದ ಪ್ರಭಾವೀಕರಣದ ಅಭಿಯಾನದಿಂದಾಗಿ (lobbying) ಹಣಕಾಸು ಕಾರ್ಯ ಪಡೆ (FATF) ಪಾಕಿಸ್ಥಾನವನ್ನು ಕಪ್ಪು ಪಟ್ಟಿಗೆ ಸೇರಿಸುವ ಸಾಧ್ಯತೆ ಇದೆ ಎಂಬ ಭೀತಿ, ಆತಂಕವನ್ನು ಪಾಕ್ ವಿದೇಶ ಸಚಿವ ಶಾ ಮಹಮೂದ್ ಕುರೇಶಿ ವ್ಯಕ್ತಪಡಿಸಿದ್ದಾರೆ.
ಒಂದೊಮ್ಮೆ ಹಣಕಾಸು ಕಾರ್ಯಪಡೆಯ (FATF) ಕಪ್ಪು ಪಟ್ಟಿಗೆ ಸೇರಿದಲ್ಲಿ ಪಾಕಿಸ್ಥಾನವು ವರ್ಷಕ್ಕೆ 10 ಶತಕೋಟಿ ಅಮೆರಿಕನ್ ಡಾಲರ್ ನಷ್ಟವನ್ನು ಅನುಭವಿಸಬೇಕಾದೀತು ಎಂದು ಕುರೇಶಿ ಹೇಳಿದ್ದಾರೆ.
ಕಳೆದ ವರ್ಷ ಜೂನ್‌ನಲ್ಲಿ ಪ್ಯಾರಿಸ್ ನ ಎಫ್ಎಟಿಎಫ್ ಪಾಕಿಸ್ಥಾನವನ್ನು ಗ್ರೇ ಲಿಸ್ಟ್ ಗೆ ಹಾಕಿತ್ತು. ಹೀಗೆ ಮಾಡುವುದರ ಅರ್ಥವೇನೆಂದರೆ ಈ ಪಟ್ಟಿಗೆ ಸೇರಿಸಲಾಗಿರುವ ದೇಶದಲ್ಲಿನ ಕಾನೂನುಗಳು ಹಣ ಅಕ್ರಮ ಮತ್ತು ಭಯೋತ್ಪಾದನೆಗೆ ಹಣ ಒದಗುವ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸುವಲ್ಲಿ ದುರ್ಬಲವಾಗಿವೆ ಎಂಬುದೇ ಆಗಿದೆ.
ಒಂದೊಮ್ಮೆ ಎಫ್ಎಟಿಎಫ್ ಪಾಕಿಸ್ಥಾನವನ್ನು ಕಪ್ಪು ಪಟ್ಟಿಗೆ ಸೇರಿಸಿದಲ್ಲಿ ಅದರಿಂದಾಗುವ ವಾರ್ಷಿಕ ನಷ್ಟ ಎಷ್ಟೆಂಬುದನ್ನು ಈಗ ಲೆಕ್ಕ ಹಾಕಲಾಗುತ್ತಿದೆ. ಪಾಕಿಸ್ಥಾನವನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂಬ ಪ್ರಭಾವೀಕರಣದ ಅಭಿಯಾನವನ್ನು ಭಾರತ ನಡೆಸುತ್ತಿದೆ ಎಂದು ಕುರೇಶಿ ಆರೋಪಿಸಿದರು.
ಒಂದೊಮ್ಮೆ ಪಾಕಿಸ್ಥಾನ FATF ಗ್ರೇ ಲಿಸ್ಟ್ ನಲ್ಲೇ ಉಳಿದುಕೊಂಡರೂ ವರ್ಷಕ್ಕೆ 10 ಶತಕೋಟಿ ಡಾಲರ್ ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಕುರೇಶಿ ಹೇಳಿದರು.
ಪಾಕಿಸ್ಥಾನವನ್ನು ಗ್ರೇ ಲಿಸ್ಟ್ ನಿಂದ ಮುಕ್ತಗೊಳಿಸುವ ಸಲುವಾಗಿ ಈಚೆಗೆ ಪಾಕಿಸ್ಥಾನಕ್ಕೆ ಭೇಟಿ ನೀಡಿದ್ದ ಎಫ್ಎಟಿಎಫ್ ನ ಪರಿಣತರ ತಂಡ, ಪಾಕ್ ಸರಕಾರ ಹಣಕಾಸು ಅಕ್ರಮ ವರ್ಗಾವಣೆ (ಹವಾಲಾ) ಅಪರಾಧಗಳನ್ನು ತಡೆಯುವಲ್ಲಿ ಜಾಗತಿಕ ಮಟ್ಟಕ್ಕೆ ಅನುಗುಣವಾದ ಕ್ರಮಗಳನ್ನು ತೆಗೆದುಕೊಂಡಿದೆಯೇ ಎಂಬುದರ ಪರಾಮರ್ಶೆ ನಡೆಸಿತ್ತು; ಆದರೆ ಫಲಿತಾಂಶ ನೇತ್ಯಾತ್ಮಕವಾಗಿತ್ತು ಎಂದು ಮೂಲಗಳು ಹೇಳಿವೆ.