ಕೇಂದ್ರ ಸರ್ಕಾರ ಸಂವಿಧಾನದ 370ನೇ ವಿಧಿ ರದ್ದು ಮಾಡುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲಿಯೇ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಳ್ವಿ ಮಂಗಳವಾರ ಸಂಸತ್‌ನ ಜಂಟಿ ಅಧಿವೇಶನ ಕರೆದಿದ್ದಾರೆ. ಸಂವಿಧಾನದ 370ನೇ ವಿಧಿ ರದ್ದು ಮಾಡಿರುವ ನಿರ್ಧಾರದ ಬಗ್ಗೆ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಖಂಡನೆ ವ್ಯಕ್ತಪಡಿಸಿದೆ. ಜಮ್ಮು ಮತ್ತು ಕಾಶ್ಮೀರ ಎನ್ನುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದಾತ್ಮಕ ಪ್ರದೇಶ ಎಂದು ಪರಿಗಣನೆಯಾಗಿದೆ.
ಭಾರತ ಸರ್ಕಾರ ಏಕಪಕ್ಷೀಯವಾಗಿ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಮಾನ್ಯತೆ ಇಲ್ಲ ಹಾಗೂ ಅದರಿಂದ ಕಾಶ್ಮೀರ ವಿವಾದ ಮುಕ್ತ ರಾಜ್ಯವೆಂದು ಪರಿಗಣಿತವಾಗುವುದಿಲ್ಲ ಎಂದು ಹೇಳಿದೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ಗೆ ವಾರ್ತಾ ಮತ್ತು ಪ್ರಸಾರ ವಿಷಯದಲ್ಲಿ ವಿಶೇಷ ಸಹಾಯಕ ಡಾ. ಫಿರ್‌ದೌಸ್ ಆಶಿಕ್ ಅವಾನ್ ಪ್ರತಿಕ್ರಿಯೆ ನೀಡಿ, ಕಾಶ್ಮೀರಿಗಳಿಗೆ ನೈತಿಕ, ರಾಜತಾಂತ್ರಿಕ ಮತ್ತು ರಾಜಕೀಯ ಬೆಂಬಲ ನೀಡುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂಪಡೆದಿರುವುದು ಅಕ್ರಮ ಹಾಗೂ ವಿಶ್ವಸಂಸ್ಥೆಯ ನಿಲುವಳಿಗೆ ವಿರುದ್ಧವಾಗಿದೆ. ಇದು ಅಣ್ವಸ್ತ್ರ ಸಜ್ಜಿತ ದೇಶಗಳ ಮಧ್ಯ ಸಂಬಂಧವನ್ನು ಇನ್ನಷ್ಟು ಹದಗೆಡಿಸುತ್ತದೆ.
-ಇಮ್ರಾನ್ ಖಾನ್, ಪಾಕಿಸ್ತಾನ ಪ್ರಧಾನಿ