Advertisement

ಸಂಜೋತಾಗೆ ಪಾಕ್‌ ಬ್ರೇಕ್‌ : ರೈಲು ಸಂಚಾರ ರದ್ದುಗೊಳಿಸಿದ ನೆರೆರಾಷ್ಟ್ರ

01:14 AM Aug 09, 2019 | sudhir |

ಹೊಸದಿಲ್ಲಿ/ಇಸ್ಲಾಮಾಬಾದ್‌: ಜಮ್ಮು, ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ರದ್ದು ಮಾಡಿದ ಬೆನ್ನಲ್ಲೇ ಪಾಕಿಸ್ಥಾನವು ಒಂದಲ್ಲ ಒಂದು ರೀತಿಯಲ್ಲಿ ಉದ್ಧಟತನ ತೋರುತ್ತಿದೆ. ಬುಧವಾರ ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧ ಕಡಿತಗೊಳಿಸಿದ್ದ ಪಾಕ್‌ ಸರಕಾರ, ಗುರುವಾರ ಎರಡೂ ದೇಶಗಳ ನಡುವೆ ಸಂಚರಿಸುತ್ತಿದ್ದ ಸಂಜೋತಾ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ರದ್ದು ಮಾಡುವ ಮೂಲಕ ಕ್ಯಾತೆ ತೆಗೆ ದಿದೆ.

Advertisement

ಗುರುವಾರ ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಪಾಕ್‌ ರೈಲ್ವೇ ಸಚಿವ ಶೇಖ್‌ ರಶೀದ್‌ ಅಹ್ಮದ್‌, “ಸಂಜೋತಾ ರೈಲು ಸೇವೆ ಸ್ಥಗಿತ ಗೊಳಿಸಲು ನಾವು ನಿರ್ಧರಿಸಿದ್ದೇವೆ. ನಾನು ರೈಲ್ವೇ ಸಚಿವನಾಗಿ ಇರುವವರೆಗೂ ಈ ರೈಲು ಕಾರ್ಯನಿರ್ವಹಿಸುವುದಿಲ್ಲ’ ಎಂದು ಘೋಷಿಸಿದ್ದಾರೆ. ಆದರೆ, ಇದನ್ನು ನಿರಾಕರಿಸಿರುವ ಭಾರತೀಯ ರೈಲ್ವೇ ಅಧಿಕಾರಿಗಳು, ರೈಲು ಸಂಚಾರ ಸ್ಥಗಿತಗೊಳಿಸಲಾಗಿಲ್ಲ. ಸಂಜೋತಾ ಎಕ್ಸ್‌ಪ್ರೆಸ್‌ ರೈಲನ್ನು ಗುರುವಾರ ವಾಘಾ ಗಡಿಯಲ್ಲೇ ನಿಲ್ಲಿಸಲಾಗಿತ್ತು. ಅದರಲ್ಲಿದ್ದ ಸಿಬಂದಿಯು ಭದ್ರತೆಯ ಕಾರಣ ಹೇಳಿ ಮುಂದೆ ಸಾಗಲು ನಿರಾಕರಿಸಿದರು. ಕೊನೆಗೆ ಭಾರತೀಯ ನೌಕರ ಮತ್ತು ಭದ್ರತಾ ಸಿಬಂದಿಯು ಅಟ್ಟಾರಿಯವರೆಗೆ ರೈಲಿಗೆ ಭದ್ರತೆ ಒದಗಿಸಿದರು. ಪಾಕ್‌ನಿಂದ ಭಾರತಕ್ಕೆ 110 ಪ್ರಯಾಣಿಕರು ಆಗಮಿಸುತ್ತಿದ್ದರು ಎಂದು ರೈಲ್ವೇ ವಕ್ತಾರರು ತಿಳಿಸಿದ್ದಾರೆ. ಇದೇ ವೇಳೆ, ಭಾರತದಿಂದ ಪಾಕ್‌ಗೆ ತೆರಳಲು 70 ಪ್ರಯಾಣಿಕರು ಕಾಯುತ್ತಿದ್ದರು ಎಂದೂ ಹೇಳಿದ್ದಾರೆ.

ಭಾರತ ತಿರುಗೇಟು: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿ, ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಕೇಂದ್ರ ಸರಕಾರದ ನಿರ್ಧಾರದಿಂದ ಹತಾಶೆಗೊಳಗಾಗಿ ಒಂದಲ್ಲ ಒಂದು ಪ್ರತೀಕಾರ ಕ್ರಮಗಳನ್ನು ಘೋಷಿಸುತ್ತಿರುವ ಪಾಕಿಸ್ಥಾನ, ಹುಸಿ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ ಎಂದು ಭಾರತದ ವಿದೇಶಾಂಗ ಸಚಿವಾ ಲಯ ಆರೋಪಿಸಿದೆ. ಭಾರತದ ಸಂವಿಧಾನ ಎಂದಿಗೂ ಆಂತರಿಕ ವಿಚಾರ ವಾಗಿಯೇ ಇರುತ್ತದೆ. ಹುಸಿ ಉದ್ವಿಗ್ನ ಸನ್ನಿವೇಶ ಸೃಷ್ಟಿಸುವ ಮೂಲಕ ಭಾರತದ ಆಂತರಿಕ ವಿಚಾರದಲ್ಲಿ ಮಧ್ಯಪ್ರವೇ ಶಿಸುವ ಪ್ರಯತ್ನ ಎಂದಿಗೂ ಫ‌ಲ ನೀಡುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಸಂವಿಧಾನದಲ್ಲಿ ಈ ಹಿಂದೆ ಕಲ್ಪಿಸಲಾದ ತಾತ್ಕಾಲಿಕ ಸೌಲಭ್ಯದಿಂದಾಗಿ ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿ ಕುಂಠಿತ ಗೊಂಡಿತ್ತು. ಕೇಂದ್ರ ಸರಕಾರ ಇತ್ತೀಚೆಗೆ ಕೈಗೊಂಡ ನಿರ್ಧಾರಗಳು ಈ ಹಿನ್ನೆಲೆಯಲ್ಲಿತ್ತು. ಇದಕ್ಕೆ ಪಾಕಿಸ್ಥಾನದ ಪ್ರತೀಕಾರವಾಗಿ ಕೈಗೊಂಡ ಕ್ರಮಗಳನ್ನು ಭಾರತ ಖಂಡಿಸುತ್ತದೆ. ರಾಜತಾಂತ್ರಿಕ ಸಂವಹನಕ್ಕೆ ಇರುವ ಸಾಮಾನ್ಯ ಮಾರ್ಗ ಇದಾಗಿರುವುದರಿಂದ ತನ್ನ ನಿರ್ಧಾರವನ್ನು ಪಾಕಿಸ್ಥಾನ ಮರುಪರಿಶೀಲಿಸಲಿ ಎಂದು ಭಾರತ ತಿಳಿಸಿದೆ.

ಸರಕು ಆಮದಿಗೂ ಬ್ರೇಕ್‌: ಭಾರತ-ಅಫ್ಘಾನಿಸ್ಥಾನದ ನಡುವಿನ ವ್ಯಾಪಾರ-ವಹಿವಾಟಿಗೂ ಪಾಕ್‌ ಕಲ್ಲು ಹಾಕಿದೆ. ವಾಘಾ ಗಡಿಯ ಮೂಲಕವಾಗಿ ಭಾರತದಿಂದ ಸರಕುಗಳನ್ನು ಆಮದು ಮಾಡಿಕೊಳ್ಳಲು ಅಫ್ಘಾನಿಸ್ಥಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಾಕ್‌ ಹೇಳಿದೆ.

ಹಿಂದಿನ ಅವಧಿಯಲ್ಲೇ ತಯಾರಿ: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಪ್ರಕ್ರಿಯೆಗೆ ನರೇಂದ್ರ ಮೋದಿ ಸರಕಾರದ ಮೊದಲ ಅವಧಿಯಲ್ಲೇ ಕೆಲಸ ಆರಂಭವಾಗಿತ್ತು ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

Advertisement

ಸೇನಾ ದಾಳಿ ಮಾಡಲ್ಲ
ಜಮ್ಮು-ಕಾಶ್ಮೀರದ ವಿಚಾರದಲ್ಲಿ ಭಾರತ ಸರಕಾರ ಕೈಗೊಂಡ ನಿರ್ಧಾರವನ್ನು ಮರುಪರಿಶೀಲಿಸುವುದಾದರೆ, ನಾವು ಕೂಡ ನಮ್ಮ ನಿರ್ಧಾರಗಳನ್ನು ಮರುಪರಿಶೀಲಿಸಲು ಸಿದ್ಧ ಎಂದು ಪಾಕ್‌ ವಿದೇಶಾಂಗ ಸಚಿವ ಖುರೇಷಿ ಹೇಳಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ.

ಇದೇ ವೇಳೆ, ಭಾರತದ ವಿರುದ್ಧ ಯಾವುದೇ ಸೇನಾ ಕಾರ್ಯಾಚರಣೆ ಕುರಿತು ನಾವು ಚಿಂತನೆ ನಡೆಸಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಅದರ ಬದಲಾಗಿ ನಾವು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವ ಭಾರತದ ನಿರ್ಧಾರವನ್ನು ರಾಜಕೀಯ ಹಾಗೂ ಕಾನೂನಾತ್ಮಕ ರೀತಿಯಲ್ಲಿ ಪ್ರಶ್ನಿಸಲು ಚಿಂತನೆ ನಡೆಸುತ್ತಿದ್ದೇವೆ ಎಂದಿದೆ. ಅಲ್ಲದೆ, ಸದ್ಯದಲ್ಲೇ ನಾನು ಚೀನಾಗೆ ಭೇಟಿ ನೀಡಲಿದ್ದು, ಈ ವಿಚಾರದ ಕುರಿತು ಚರ್ಚಿಸಲಿದ್ದೇನೆ ಎಂದೂ ಖುರೇಷಿ ಹೇಳಿದ್ದಾರೆ.

ಬೆನ್ನು ತಟ್ಟಿಕೊಳ್ಳಬೇಡಿ!
ಕಾಶ್ಮೀರ ವಿಚಾರ ಕುರಿತು ನಿರ್ಧಾರ ತೆಗೆದುಕೊಳ್ಳಲು ಆ.5 ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಸಚಿವರನ್ನು ದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ನಾವು ಬೆನ್ನುತಟ್ಟಿ ಕೊಳ್ಳುವ ಸಮಯ ಇದಲ್ಲ. ನಿಜವಾದ ಪರಿಶ್ರಮ ಇನ್ನು ಮುಂದಿದೆ ಎಂದಿದ್ದರು. ಇದು ದೇಶಕ್ಕೆ ಅತ್ಯಂತ ಮಹತ್ವದ ದಿನ. ಎಲ್ಲರನ್ನೂ ಈ ನಿರ್ಧಾರದೊಂದಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ನಾವು ಮುತ್ಸದ್ದಿತನ ಪ್ರದರ್ಶಿಸಬೇಕು ಎಂದು ಮೋದಿ ಹೇಳಿದ್ದರು ಎಂದು ಮೂಲಗಳು ತಿಳಿಸಿವೆ. ಜಮ್ಮು ಕಾಶ್ಮೀರ ವಿಭಜನೆ ಸಂಬಂಧ ಸಚಿವ ಅಮಿತ್‌ ಶಾ ಪ್ರಸ್ತಾವನೆ ಮಂಡಿಸುತ್ತಿದ್ದಂತೆಯೇ ಎಲ್ಲರೂ ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಆಗ ಮಾತನಾಡಿದ ಮೋದಿ, ಈ ನಿರ್ಧಾರದಿಂದ ಕೆಲವು ವರ್ಗದ ಜನರಲ್ಲಿ ಅಸಮಾಧಾನ ಉಂಟಾಗಬಹುದು. ಪಕ್ಷ ಅದನ್ನು ನಿರ್ಲಕ್ಷಿಸಲಾಗದು. ಎಲ್ಲರನ್ನೂ ಪಕ್ಷವು ಒಗ್ಗೂಡಿಸಿ ಕೊಂಡು ಸಾಗಬೇಕಿದೆ ಎಂದು ಪ್ರಧಾನಿ ಹೇಳಿದ್ದರು.

ಕಾಂಗ್ರೆಸ್‌ನ ಕರಣ್‌ ಸಿಂಗ್‌ ಬೆಂಬಲ
370ನೇ ವಿಧಿ ರದ್ದುಗೊಳಿಸಿದ ಕೇಂದ್ರದ ಕ್ರಮವನ್ನು ಕಾಂಗ್ರೆಸ್‌ ಹಿರಿಯ ನಾಯಕ ಕರಣ್‌ ಸಿಂಗ್‌ ಬೆಂಬಲಿಸಿದ್ದಾರೆ. ಕರಣ್‌ ಸಿಂಗ್‌ ಜಮ್ಮು-ಕಾಶ್ಮೀರದ ಕೊನೆಯ ರಾಜ ಹರಿಸಿಂಗ್‌ ಅವರ ಪುತ್ರನಾಗಿದ್ದು, ಪಕ್ಷದ ನಿಲುವಿಗೆ ವಿರುದ್ಧವಾಗಿ ಮಾತನಾಡಿದ್ದಾರೆ. ಇಡೀ ನಿರ್ಧಾರವನ್ನೇ ವಿರೋಧಿಸುವುದು ಸರಿಯಲ್ಲ. ಈ ನಿರ್ಧಾರದಲ್ಲಿ ಹಲವು ಒಳ್ಳೆಯ ಅಂಶಗಳಿವೆ ಎಂದಿದ್ದಾರೆ.

ಲಡಾಖ್‌ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಿದ್ದು, 35ಎ ವಿಧಿ ರದ್ದುಗೊಳಿಸಿದ್ದು ಒಳ್ಳೆಯ ಸಂಗತಿ ಎಂದಿರುವ ಅವರು ಇದರಿಂದ ಮುಂದಿನ ದಿನಗಳಲ್ಲಿ ಜಮ್ಮು -ಕಾಶ್ಮೀರದ ಕ್ಷೇತ್ರ ವಿಭಜನೆಗೆ ಅನುಕೂಲವಾಗಲಿದೆ ಎಂದಿದ್ದಾರೆ. ಆದರೆ ಜಮ್ಮು ಮತ್ತು ಕಾಶ್ಮೀರದ ನಾಯಕರನ್ನು ಬಿಡುಗಡೆ ಮಾಡಬೇಕು ಮತ್ತು ಅವರೊಂದಿಗೆ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next