ಜಮ್ಮು: ಅಂತಾರಾಷ್ಟ್ರೀಯ ಗಡಿಯಲ್ಲಿ ಸತತ 3ನೇ ದಿನವೂ ಪಾಕಿಸ್ಥಾನದ ದಾಳಿ ಮುಂದುವರಿದಿದ್ದು, ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ. ಸತತ ಗುಂಡಿನ ಚಕಮಕಿಯಿಂದಾಗಿ ಗಡಿಗ್ರಾಮಗಳ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಶನಿವಾರ ನಡೆದ ಕದನ ವಿರಾಮ ಉಲ್ಲಂಘನೆಯಲ್ಲಿ ಒಬ್ಬ ಯೋಧ ಹುತಾತ್ಮರಾದರೆ, ಮತ್ತಿಬ್ಬರು ನಾಗರಿಕರು ಮೃತ ಪಟ್ಟು, 6 ಮಂದಿ ಗಾಯಗೊಂಡಿದ್ದಾರೆ. ಈ ಮೂಲಕ ಕಳೆದ ನಾಲ್ಕು ದಿನಗಳಲ್ಲಿ ಪಾಕ್ ದಾಳಿಗೆ ಬಲಿಯಾದವರ ಸಂಖ್ಯೆ 10ಕ್ಕೇರಿದಂತಾಗಿದೆ.
ಕೃಷ್ಣ ಘಾಟಿ ವಲಯದಲ್ಲಿ ಪಾಕ್ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿ ವೇಳೆ, ಪಂಜಾಬ್‌ನ ಯೋಧ ಮನ್‌ದೀಪ್ ಸಿಂಗ್(23) ದೇಹಕ್ಕೆ ಗುಂಡು ಹೊಕ್ಕಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಕೊನೆಯುಸಿರೆಳೆದರು ಎಂದು ಸೇನಾ ಮೂಲಗಳು ತಿಳಿಸಿವೆ. ಭಾರತೀಯ ಸೇನೆಯೂ ಪಾಕ್‌ಗೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ಗುಂಡಿನ ಚಕಮಕಿ ನಡೆಯುತ್ತಿರುವ ಕಾರಣ, ಗಡಿ ಗ್ರಾಮಗಳ ಜನರೆಲ್ಲ ಗುಳೇ ಹೋಗಲು ಆರಂಭಿಸಿದ್ದಾರೆ. 8ರಿಂದ 9 ಸಾವಿರ ಮಂದಿ ಗ್ರಾಮಸ್ಥರನ್ನು ಈಗಾಗಲೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಶಾಲೆಗಳಿಗೆ ರಜೆ: ಪ್ರಕ್ಷುಬ್ಧ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಂತಾ ರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ ರೇಖೆಯಿಂದ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲ ಶಾಲೆಗಳಿಗೂ ರಜೆ ಘೋಷಿಸಲಾಗಿದೆ. ಇಲ್ಲಿ 100 ಶಾಲೆಗಳಿದ್ದು, 3 ದಿನಗಳ ಕಾಲ ರಜೆ ನೀಡಲಾಗಿದೆ. ಇನ್ನೊಂದೆಡೆ, ಗಡಿ ಗ್ರಾಮಗಳಲ್ಲಿನ ಮನೆಗಳ ಮೇಲೆ ಪಾಕ್ ಕಡೆಯಿಂದ ಶೆಲ್‌ಗಳು ಬಂದು ಬೀಳುತ್ತಿದ್ದು, ಗ್ರಾಮಸ್ಥರು ಆತಂಕದಲ್ಲೇ ದಿನದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಮನೆಗಳ ಮೇಲೆ ಶೆಲ್‌ಗಳ ಸುರಿಮಳೆಯಾಗುತ್ತಿವೆ. ನಾವು ಸಾವಿನ ದವಡೆಯಲ್ಲಿದ್ದಂತೆ ಭಾಸವಾಗುತ್ತಿದೆ. ಹಲವು ಮನೆಗಳಿಗೆ ಹಾನಿಯಾಗಿವೆ, ಪಶು ಗಳೂ ಸಾವಿಗೀಡಾಗಿವೆ ಎಂದು ಗ್ರಾಮಸ್ಥರು ಅಳಲು ತೋಡಿ ಕೊಂಡಿದ್ದಾರೆ. ಒಂದು ಸಾವಿರದಷ್ಟು ಮಂದಿ ಆರ್.ಎಸ್.ಪುರ, ಸಾಂಬಾ, ಕಥುವಾ ಪ್ರದೇಶದ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.
ಎಲ್ಲ ವ್ಯವಸ್ಥೆಗಳನ್ನೂ ಮಾಡುತ್ತಿದ್ದೇವೆ: ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧರಾಗಿದ್ದೇವೆ ಎಂದು ಜಮ್ಮು-ಕಾಶ್ಮೀರ ಸರಕಾರ ತಿಳಿಸಿದೆ. ಕಳೆದ 4 ದಿನಗಳಲ್ಲಿ ಪಾಕ್ ದಾಳಿಯಿಂದ 46 ಮಂದಿ ಗಾಯ ಗೊಂಡಿದ್ದಾರೆ. ಗಡಿಯಲ್ಲಿ ಗುಂಡಿನ ಚಕಮಕಿ ಮುಂದುವರಿದಿದೆ. ಪರಿಸ್ಥಿತಿ ನಿಭಾಯಿಸಲು ಆರೋಗ್ಯ ಇಲಾಖೆ ಸಜ್ಜಾಗಿದ್ದು, ಸಾಕಷ್ಟು ವೈದ್ಯರು, ತಜ್ಞರನ್ನು ನಿಯೋಜಿಸಲಾಗಿದೆ. ಅಗತ್ಯ ಜೀವರಕ್ಷಕ ಔಷಧಗಳನ್ನು ಶೇಖರಿಸಲಾಗಿದೆ. 197 ಆ್ಯಂಬುಲೆನ್ಸ್‌ಗಳನ್ನೂ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ ಎಂದು ಆರೋಗ್ಯ ಸಚಿವ ಬಾಲಿ ಭಗತ್ ಮಾಹಿತಿ ನೀಡಿದ್ದಾರೆ.