ಬೆಂಗಳೂರು: ಪಾಕಿಸ್ತಾನದ ಮೇಲಿನ ಸೈನಿಕರ ದಾಳಿಯನ್ನು ಬಿಜೆಪಿ ನಾಯಕರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದು ಎಲ್ಲವನ್ನೂ ಸ್ವಾರ್ಥದಿಂದಲೇ ನೋಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ದಾಳಿಯಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುತ್ತದೆ ಎನ್ನುವ ಅರ್ಥ ಬರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿಕೆಗೆ ಅವರು ಖಾರವಾಗಿ ಪ್ರತಿಕ್ರಿಯಿಸಿದರು.
ಮೊಳಕಾಲ್ಮೂರು ಶಾಸಕ ತಿಪ್ಪೇಸ್ವಾಮಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಯನ್ನು ಅವರ ಪಕ್ಷದ ಸಂಸದರು ಸಮರ್ಥನೆ ಮಾಡಿಕೊಳ್ಳುತ್ತಾರೆ. ಇದನ್ನು ನೋಡಿದರೆ, ಬಿಜೆಪಿಯವರ ನಿಲುವು ಏನು ಎನ್ನುವುದು ಗೊತ್ತಾಗುತ್ತದೆ. ಬಿಜೆಪಿಯ ಸಂಸದರು ರಾಜ್ಯದ ಹಿತ ಕಾಯುವ ಯಾವುದೇ ಕೆಲಸ ಮಾಡಲಿಲ್ಲ.
ಮಹದಾಯಿ ವಿವಾದ, ಬರ ಪರಿಹಾರ, ಸಾಲ ಮನ್ನಾ ಯೋಜನೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ತರಿಸುವಲ್ಲಿ ವಿಫಲರಾಗಿದ್ದು, ಈ ರೀತಿಯ ಪ್ರಚೋದನಾತ್ಮಕ ವಿಷಯಗಳಿಂದಲೇ ಅವರು ಚುನಾವಣೆಯಲ್ಲಿ ಗೆಲ್ಲುತ್ತ ಬಂದಿದ್ದಾರೆ ಎಂದು ಹೇಳಿದರು. ಸುಮಲತಾ ಅಂಬರೀಶ್ ಅವರು ಮಂಡ್ಯ, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಸೇರಿದಂತೆ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎನ್ನುವುದು ಪಕ್ಷದ ಆಂತರಿಕ ವಿಚಾರ.
ಅವರು ಚುನಾವಣೆಗೆ ಸ್ಪರ್ಧಿಸಿದರೆ ಮಂಡ್ಯದಿಂದಲೇ ಎಂದು ಹೇಳಿದ್ದಾರೆ. ಜೆಡಿಎಸ್ ಜೊತೆಗೆ ಸೀಟು ಹಂಚಿಕೆ ಇನ್ನೂ ಮುಕ್ತಾಯವಾಗಿಲ್ಲ. ಯಾರಿಗೆ ಯಾವ ಕ್ಷೇತ್ರ ಬರಲಿದೆ ಎನ್ನುವುದು ಗೊತ್ತಿಲ್ಲ. ಅಲ್ಲದೇ ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ಬಗ್ಗೆಯೂ ತೀರ್ಮಾನವಾಗಿಲ್ಲ. ಹೀಗಾಗಿ ಅವರು ಪಕ್ಷೇತರರಾಗಿ ನಿಲ್ಲುವ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.