Advertisement
ಪನಾಮಾ ದಾಖಲೆಗಳ ಪ್ರಕಾರ ಪಾಕಿಸ್ಥಾನ ಪ್ರಧಾನಿ ನವಾಜ್ ಷರೀಫ್ ಅವರು ವಿದೇಶಗಳಲ್ಲಿ ಅಕ್ರಮ ಸಂಪತ್ತು ಗಳಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಅವರನ್ನು ಪ್ರಧಾನಿ ಹುದ್ದೆಯಿಂದ ಅಲ್ಲಿನ ಸುಪ್ರೀಂಕೋರ್ಟ್ ಅನರ್ಹಗೊಳಿಸಿದೆಯಷ್ಟೆ.
Related Articles
ಇಂಥವರು ಗಟ್ಟಿ ಪರ್ಯಾಯವಾಗಲಾರರು ಎಂದಾದರೆ ಅಲ್ಲಿನ ಶಕ್ತಿ ಕೇಂದ್ರವಾಗಲಿರುವವರು ಇನ್ಯಾರು? ಮಿಲಿಟರಿ ಎಂಬುದೇ ಸಹಜ ಉತ್ತರ. ಪಾಕಿಸ್ಥಾನದ ಚರಿತ್ರೆಯೂ ಇದನ್ನೇ ಸಾರುತ್ತದೆ. ಹಾಗಾದರೆ ಈ ಮಿಲಿಟರಿಯೇನು ಭ್ರಷ್ಟತೆಯಿಂದ ಹೊರತಾದದ್ದೇ? ವರ್ಷದ ಹಿಂದಷ್ಟೇ ಆರು ಸೇನಾಧಿಕಾರಿಗಳನ್ನು ಭ್ರಷ್ಟಾಚಾರ ಆರೋಪದಲ್ಲಿ ಮನೆಗೆ ಕಳುಹಿಸಲಾಗಿತ್ತು. ಇದಕ್ಕೂ ಮೀರಿದ ಆತಂಕವೊಂದನ್ನು ಅಲ್ಲಿನ ಸೇನೆ ಸೃಷ್ಟಿಸುತ್ತದೆ. ಹೆಸರಿಗಾದರೂ ಅಲ್ಲೊಂದು ಪ್ರಜಾಪ್ರಭುತ್ವ ಸರ್ಕಾರವಿತ್ತು. ಅದರಿಂದಾಗಿ ಭಾರತದ ಮೇಲಿನ ಆಕ್ರಮಣಗಳೇನೂ ನಿಂತಿರಲಿಲ್ಲವಾದರೂ ನಡು ನಡುವಲ್ಲೇ ನವಾಜ್ ತಾಯಿಗೆ ಪ್ರಧಾನಿ ಮೋದಿಯ ಉಡುಗೊರೆ, ಬರ್ತ್‌ಡೆ ಹಾರೈಕೆಯ ಭೇಟಿ ಅಂತೆಲ್ಲ ಜನರಿಗೆ ಆಗಾಗ ವಿಶ್ವಾಸ ಕುದುರಿಸುವ, ಎಲ್ಲ ಕ್ಷಣಗಳಲ್ಲೂ ಶತ್ರುಗಳಾಗಿಯೇ ಇರಬೇಕಿಲ್ಲ ಎಂಬ ಸಂದೇಶ ರವಾನಿಸುವ ಅವಕಾಶಗಳಿದ್ದವು. ಅವೆಲ್ಲ ತೀರ ಫಲ ತಂದುಕೊಡುವ ಮಾರ್ಗಗಳಾಗಿರಲಿಲ್ಲ ಎಂಬುದು ಬೇರೆ ಮಾತು. ಆದರೆ…
ಇದೀಗ ನವಾಜ್ ಸಹೋದರನನ್ನು ಪ್ರಧಾನಿ ಹುದ್ದೆಗೆ ತರುವ ಮಾತುಗಳು ಕೇಳಿಬರುತ್ತಿವೆಯಾದರೂ, ಮತ್ತೆ ಮಿಲಿಟರಿ ಆಡಳಿತವೇ ಗಟ್ಟಿಗೊಳ್ಳುವ, ಅದರ ಪ್ರಭಾವ ಇನ್ನಷ್ಟು ಗಟ್ಟಿಗೊಳ್ಳುವ ಲಕ್ಷಣಗಳೇ ದಟ್ಟವಾಗಿವೆ. ಇದು ಭಾರತದ ಪಾಲಿಗೆ ಶುಭ ಸುದ್ದಿಯೇನೂ ಅಲ್ಲ. ಅಲ್ಲಿನ ರಾಜಕಾರಣಕ್ಕೂ ಮಿಲಿಟರಿ ನಿಲುವಿಗೂ ವ್ಯತ್ಯಾಸವಿಲ್ಲ ಎಂಬ ತೀರ್ಮಾನಕ್ಕೆ ಬರುವ ಮೊದಲು ಕೆಲ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಉಳಿದೆಲ್ಲ ರಾಷ್ಟ್ರಗಳು ತಮ್ಮ ಅಸ್ತಿತ್ವಕ್ಕಾಗಿ ಮಿಲಿಟರಿ ಇರಿಸಿಕೊಂಡಿದ್ದರೆ, ಮಿಲಿಟರಿಯ ಅಸ್ತಿತ್ವಕ್ಕಾಗಿಯೇ ದೇಶವೊಂದು ರೂಪುಗೊಂಡಿರುವುದರ ಮಾದರಿಯೇ ಪಾಕಿಸ್ಥಾನ.
ದೇಶ ವಿಭಜನೆಯಾದಾಗ ಬ್ರಿಟಿಷ್ ಭಾರತದ ಶೇ.21 ರಷ್ಟು ಜನಸಂಖ್ಯೆಯನ್ನು ಹಾಗೂ ಶೇ.17ರಷ್ಟು ಆದಾಯ ವನ್ನು ಪಡೆದ ಪಾಕಿಸ್ಥಾನವು (ಈಗಿನ ಬಾಂಗ್ಲಾದೇಶವೂ ಅದರದ್ದೇ ಆಗಿತ್ತು), ಎರಡನೇ ವಿಶ್ವಯುದ್ಧದಲ್ಲಿ ಬ್ರಿಟಿಷರು ಬೆಳೆಸಿದ್ದ ಸೇನೆಯ ಶೇ.33ಭಾಗವನ್ನು ಪಡೆದುಬಿಟ್ಟಿತು! ಸಮುದಾಯವೊಂದನ್ನು ಮಿಲಿಟರಿ ಜನಾಂಗ ಎಂದು ಬೆಳೆಸುವ ಪರಿಪಾಠವಿತ್ತಲ್ಲ? ಆ ಪ್ರಕಾರ ಅತಿದೊಡ್ಡ ಸಂಖ್ಯೆಯಲ್ಲಿ ಸೇನೆಯಲ್ಲಿ ಭರ್ತಿಯಾಗಿದ್ದ ಪಶೂ¤ನ್ ಜನಾಂಗ ಹಾಗೂ ಪಂಜಾಬಿ ಮುಸ್ಲಿಮರು ದೇಶ ವಿಭಜನೆಯಾಗುತ್ತಲೇ ಪಾಕಿಸ್ಥಾನವನ್ನು ತಮ್ಮ ತಾಯ್ನಾಡಾಗಿ ಆರಿಸಿಕೊಂಡರು. ಪಾಕಿಸ್ಥಾನದ ಮೊದಲ ಬಜೆಟ್ಟಿನಲ್ಲಿ ಶೇ.75ರಷ್ಟು ಸಂಪನ್ಮೂಲವನ್ನು ಸೇನೆಯ ಸಂಬಳ-ಸವಲತ್ತುಗಳಿಗಾಗಿಯೇ ಎತ್ತಿಡಲಾಯಿತು. ಅಂದಮೇಲೆ, ಪಾಕಿಸ್ಥಾನಕ್ಕೆ ಸೇನೆ ಎಂಥ ಒತ್ತಡವಾಗಿ ಕಾಡಿತೆಂಬುದನ್ನು ಅರ್ಥಮಾಡಿಕೊಳ್ಳಬಹುದು. ಅಲ್ಲಿಗಿಂತ ಭಾರತದ ಸೇನಾಬಲ ಹಲವು ಪಟ್ಟು ದೊಡ್ಡದಿದ್ದರೂ ನಮ್ಮ ಭೂವ್ಯಾಪ್ತಿ ಹಾಗೂ ಸಂಪನ್ಮೂಲಗಳು ಸಹ ತುಲನಾತ್ಮಕವಾಗಿ ದೊಡ್ಡದಿದ್ದವು.
Advertisement
ಸೇನೆ ಈ ಪರಿ ದೊಡ್ಡದಿರುವಾಗ, ಇಷ್ಟೆಲ್ಲ ದೊಡ್ಡ ಸಂಪನ್ಮೂಲವನ್ನು ತನ್ನದಾಗಿಸಿಕೊಳ್ಳುತ್ತಿರುವಾಗ ಅದು ನಿರಂತರವಾಗಿ ತನ್ನ ಅಸ್ತಿತ್ವದ ಸಮರ್ಥನೆಯ ಒತ್ತಡಕ್ಕೆ ಸಿಲುಕುತ್ತದೆ. ಇಷ್ಟು ದೊಡ್ಡ ಸೇನೆ ಪಾಕಿಸ್ಥಾನಕ್ಕೆ ಬೇಕೆ ಬೇಕು ಎಂದು ಅಲ್ಲಿನ ಜನ ಒಪ್ಪಿಕೊಂಡಿರುವುದಕ್ಕೆ ಕಾರಣವೇ- ಈ ಯೋಧರಿಲ್ಲದಿದ್ದರೆ ಕ್ಷಣಮಾತ್ರದಲ್ಲಿ ಭಾರತವು ತಮ್ಮ ಮೇಲೆ ಅಧಿಪತ್ಯ ಸ್ಥಾಪಿಸಿಬಿಡುತ್ತದೆ ಎಂಬ ಐಡಿಯಾ ಒಂದನ್ನು ವ್ಯವಸ್ಥಿತವಾಗಿ ಬಿತ್ತಿರುವುದು.
ನವಾಜ್ ಆಗಲೀ, ಈ ಹಿಂದಿನ ಮುಶರ್ರಫ್ ಆಗಲಿ ವಿದೇಶಗಳಲ್ಲಿ ತಮ್ಮ ಸಂಪತ್ತನ್ನು ನೆಲೆಗೊಳಿಸಿಕೊಳ್ಳದೇ ಪಾಕಿಸ್ಥಾನದ ರಾಜಕಾರಣದಲ್ಲಿ ಆಟಕ್ಕಿಳಿದಿದ್ದಲ್ಲ. ಅದು ಅವರ ಅನಿವಾರ್ಯವೂ ಹೌದು. ಏಕೆಂದರೆ ಈ ಭ್ರಷ್ಟತನ ಅಲ್ಲಿನ ರಾಜಕಾರಣಕ್ಕೆ ಮಾತ್ರ ಅಂಟಿಕೊಂಡಿಲ್ಲ. ಅಲ್ಲಿನ ಮಿಲಿಟರಿ ಅಧಿಕಾರಿಗಳೆಲ್ಲ ಹೇರಳ ಸಂಪತ್ತಿನ ಮಾಲೀಕರೇ. ಅಲ್ಲಿನ ರಾಜಕೀಯ ಹಾಗೂ ಮಿಲಿಟರಿ ನಡುವೆ ಮುಸುಕಿನ ಗುದ್ದಾಟ ನಡೆದಾಗಲೆಲ್ಲ ಹೂರಣಗಳು ಹೊರಬರುತ್ತವೆ. ಪನಾಮಾ ದಾಖಲೆಗಳಲ್ಲಿ ವರ್ಷದ ಹಿಂದೆ ತಮ್ಮ ಹೆಸರು ಬಹಿರಂಗವಾದಾಗಲೇ ಆಗಿನ ಸೇನಾ ಮುಖ್ಯಸ್ಥ ರಾಹೀಲ್ ಷರೀಫ್ ಮೇಲೆ ಒತ್ತಡ ಹೇರಿ ಆರು ಸೇನಾಧಿಕಾರಿಗಳನ್ನು ಭ್ರಷ್ಟಾಚಾರದ ಆರೋಪದಲ್ಲಿ ಮನೆಗೆ ಕಳುಹಿಸಿದ್ದರು ಷರೀಫ್. ಸೇನೆ ವಿರುದ್ಧ ಭ್ರಷ್ಟಾಚಾರ ಆರೋಪಗಳು ಅಲ್ಲಿನ ಸಂಸತ್ತಿನಲ್ಲಿ ಸಹ ಹಲವು ಬಾರಿ ಪ್ರಸ್ತಾಪಿತವಾಗಿದೆಯಾದರೂ, ತಮ್ಮ ಮೇಲಿನ ಚರ್ಚೆಯನ್ನು ಬೇರೆಡೆ ತಿರುಗಿಸುವ ಅಗತ್ಯವಿದ್ದಾಗ ಮಾತ್ರ ಕೆಲವೇ ಸೇನಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾದರು ಷರೀಫ್.
ಪಾಕಿಸ್ಥಾನದ ರಾಜಕಾರಣಿಗಳಿಗೆ ಚುನಾವಣೆ ಗೆಲ್ಲುವುದಕ್ಕೆ, ತಮ್ಮ ಲೋಪಗಳ ಮೇಲಿನ ಗಮನವನ್ನು ಬೇರೆಡೆ ತಿರುಗಿಸುವುದಕ್ಕೆ ಮಾತ್ರ ಭಾರತ ದ್ವೇಷದ ಅಗತ್ಯವಿದೆ. ಆದರೆ ಅಲ್ಲಿನ ಸೇನೆಗೆ ತನ್ನ ಅಸ್ತಿತ್ವ ಸಮರ್ಥನೆಗೆ ಭಾರತ ದ್ವೇಷ ಅನಿವಾರ್ಯ. ಮತ್ತೆ ಆ ಸೇನೆಯಲ್ಲೂ ಸೌಮ್ಯ ಹಾಗೂ ಕಟ್ಟರ್ ಅಂಶಗಳಿವೆ. ಹೆಸರಿಗಾದರೂ ಪ್ರಜಾಪ್ರಭುತ್ವವಿದ್ದಾಗ ಇದ್ದಿದ್ದರಲ್ಲಿ ಸೌಮ್ಯ ಚಹರೆಗಳ ಬಲ ಮಿಲಿಟರಿಯಲ್ಲಿ ಹೆಚ್ಚಿರುತ್ತದೆ. ಆದರೆ ಮಿಲಿಟರಿ ಆಡಳಿತವೇ ಅಖೈರಾದಾಗ ಅಲ್ಲಿ ಮತ್ತಷ್ಟು ಮತಾಂಧ ಶಕ್ತಿಗಳು ವಿಜೃಂಭಿಸುತ್ತವೆ. ಎಷ್ಟರಮಟ್ಟಿಗೆ ಎಂದರೆ ಅವರೆಲ್ಲ ಪಾಕಿಸ್ಥಾನವೇ ಇನ್ನೂ ಇಸ್ಲಾಮೀಕರಣವನ್ನು ಬಾಕಿ ಉಳಿಸಿಕೊಂಡಿದೆ ಅಂತ ಅಸಮಾಧಾನಗೊಂಡಿರುವವರು.
ಜಮ್ಮು-ಕಾಶ್ಮೀರಕ್ಕೆ ಉಗ್ರರನ್ನು ನುಗ್ಗಿಸುವುದಕ್ಕೆ ಮಾಡಿ ಕೊಳ್ಳುವ ನೇಮಕಗಳಲ್ಲಿ ಕೆಲಸ ಮಾಡುವುದು ಹಣವಲ್ಲ, ಮತಾಂಧತೆ. ಪ್ರವಾದಿ ಪೈಗಂಬರರು ಹೇಳಿದ್ದಾರೆನ್ನಲಾದ ಮಾತುಗಳನ್ನು ಒಳಗೊಂಡಿರುವ ಗ್ರಂಥ ಹಾದಿತ್‌ನಲ್ಲಿ, ಕೊನೆಯ ಯುದ್ಧ ಸೆಣಸಲ್ಪಡುವುದು ಹಿಂದ್‌ನಲ್ಲಿ ಅಂತ ಉಕ್ತವಾಗಿದೆ. ಈ ಹಿಂದ್ ಎಂದರೆ ಹಿಂದುಸ್ತಾನ ಅಂತ ವ್ಯಾಖ್ಯಾನಿಸಿ, ಅಲ್ಲಿನ ಜಿಹಾದಿ ಯುವಕರ ತಲೆಯಲ್ಲಿ “ಗಜ್ವಾ ಹಿಂದ್’ ಪರಿಕಲ್ಪನೆ ಬೆಳೆಸಲಾಗಿದೆ. ಅಂದರೆ ಹಿಂದುಸ್ತಾನವನ್ನು ಇಸ್ಲಾಂ ಪದತಲದಲ್ಲಿ ತಂದ ಮೇಲಷ್ಟೇ ಧರ್ಮಯುದ್ಧದ ಮುಕ್ತಾಯ ಅಂತ. ಈ ನಿಟ್ಟಿನಲ್ಲಿ ಜಮ್ಮು-ಕಾಶ್ಮೀರ ಒಂದು ನೆಪ ಮಾತ್ರ. ಆದರೆ ಬರ ಬರುತ್ತ ಪಾಕಿಸ್ಥಾನ ಸೇನೆಯೇ ಪೋಷಿಸಿದ್ದ ಮತಾಂಧತೆ ಹೇಗೆ ವಿಸ್ತರಿಸಿಬಿಟ್ಟಿತೆಂದರೆ, “ಹಿಂದ್ ‘ ಎಂಬುದು ಈಗಿನ ಭಾರತವನ್ನು ಉದ್ದೇಶಿಸಿ ಹೇಳಿರಲು ಸಾಧ್ಯವಿಲ್ಲ. ಅವಿಭಜಿತ ಭಾರತವೆಂದರೆ ಪಾಕಿಸ್ಥಾನವೂ ಬಂದಂತಾಯಿತು. ಹೀಗಾಗಿ ನಿಜವಾಗಿ ಇಸ್ಲಾಂ ಸಾಮ್ರಾಜ್ಯ ನಿರ್ಮಿಸುವುದಕ್ಕೆ ಪಾಕಿಸ್ಥಾನದ ಸರ್ಕಾರ ಮತ್ತು ಸೇನೆಗಳನ್ನು ಸಹ ಮಣಿಸಬೇಕು ಎಂಬ ಕಟ್ಟರ್ ವ್ಯಾಖ್ಯಾನ ಗಟ್ಟಿಯಾಯಿತು. ತತ್‌ಪರಿಣಾಮವೇ “ತೆಹ್ರಿಕೆ ತಾಲಿಬಾನ್ ಪಾಕಿಸ್ತಾನ್’ನಂಥ ಉಗ್ರ ಸಂಘಟನೆಗಳು ಆ ದೇಶಕ್ಕೇ ಬಾಂಬ್ ಇಟ್ಟು, ಪಾಶ್ಚಾತ್ಯ ಪ್ರಭಾವ ಕಡಿಮೆ ಮಾಡುವ ನಿಟ್ಟಿನಲ್ಲಿ ತಮ್ಮ ದಾಳಿ ಸರಿಯಾದುದೆಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಪಾಕಿಸ್ಥಾನದಲ್ಲಿ ಮಿಲಿಟರಿ ಆಡಳಿತ ಎಂದರೆ ಇವೆಲ್ಲ ತಾರಕಕ್ಕೇರುವುದೆಂದರ್ಥ.
ಅತ್ತ ಗಡಿಯಲ್ಲಿ ಚೀನದ ಜತೆ ಸಹ ಪರಿಸ್ಥಿತಿ ವಿಷಮಗೊಂಡಿದೆ. ಅಂತಾರಾಷ್ಟ್ರೀಯ ಒತ್ತಡ, ಆರ್ಥಿಕ ಕಾರಣಗಳಿಂದ ಭಾರತದ ಮೇಲೆ ಪೂರ್ಣಪ್ರಮಾಣದ ಯುದ್ಧ ಘೋಷಿಸುವ ಸ್ಥಿತಿಯಲ್ಲಿ ಚೀನ ಇಲ್ಲ. ಆದರೆ ತ್ರಿವಳಿ ಗಡಿ ಬಿಂದುವಿನಲ್ಲಿ ಭಾರತದ ಸೇನೆ ಹಿಂದೆ ಸರಿಯದಿದ್ದರೆ ತಾನು ಜಮ್ಮು-ಕಾಶ್ಮೀರದಲ್ಲಿ ಹಸ್ತಕ್ಷೇಪ ಮಾಡುತ್ತೇನೆ ಎಂಬರ್ಥದ ಮಾತುಗಳು ಚೀನದಿಂದ ವ್ಯಕ್ತವಾಗಿದೆ. ಅದಾಗಲೇ ಆರ್ಥಿಕ ಕಾರಿಡಾರ್ ಯೋಜನೆ ಮೂಲಕ ಪಾಕಿಸ್ಥಾನವನ್ನು ಹೆಚ್ಚು- ಕಡಿಮೆ ವಸಾಹತನ್ನಾಗಿಸಿಕೊಳ್ಳುತ್ತಿರುವ ಚೀನವು ಅಲ್ಲಿನ ಮಿಲಿಟರಿಯನ್ನು ತನ್ನ ಗುರಿಗಳಿಗೆ ಹೇಗೆಲ್ಲ ದಾಳವಾಗಿಸಿಕೊಳ್ಳಬಹುದೆಂಬ ಆತಂಕವೂ ಈಗ ಹೆಚ್ಚಾಗಿದೆ. ಹಾಗೆಂದೇ ನವಾಜ್ ಷರೀಫ್ ನಿರ್ಗಮನವನ್ನು ತಮಾಷೆಯಾಗಿಯೋ, ಇಂಥದ್ದೆಲ್ಲ ಪಾಕಿಸ್ಥಾನದಲ್ಲಿ ಇರೋದೇ ಎಂಬಂತೆ ಕಂಡು ನಿರಾಳವಾಗುವಂತಿಲ್ಲ ಭಾರತ. – ಚೈತನ್ಯ ಹೆಗಡೆ