Advertisement

ಪಾಕ್‌ನಿಂದ 2 ಸೇನಾ ನೆಲೆ?

02:04 AM Jun 06, 2019 | sudhir |

ಹೊಸದಿಲ್ಲಿ:ಗಡಿ ಪ್ರದೇಶದಲ್ಲಿ ಸದ್ದಿಲ್ಲದೇ ಪಾಕಿಸ್ಥಾನವು ತನ್ನ ಕುತಂತ್ರವನ್ನು ಮುಂದುವರಿಸಿರುವ ವಿಚಾರ ಈಗ ಬೆಳಕಿಗೆ ಬಂದಿದೆ. ಗುಜರಾತ್‌ ಗಡಿಗೆ ಹೊಂದಿಕೊಂಡು ಇರುವ ಗಡಿ ಪ್ರದೇಶ ಸರ್‌ ಕ್ರೀಕ್‌ನಲ್ಲಿ ಪಾಕಿಸ್ಥಾನ 2 ಹೊಸ ಸೇನಾ ನೆಲೆ ಸ್ಥಾಪಿಸಿದೆ.

Advertisement

ಪೀರ್‌ ಸಹಮದೂ ಕ್ರೀಕ್‌ನ ಪಶ್ಚಿಮ ಭಾಗ, ಬಂಧಾ ಧೋರಾ ಮತ್ತು ಹರಾಮಿ ಧೋರೋ ಎಂಬಲ್ಲಿ ಈ ನೆಲೆಗಳು ಇವೆ. ಪಾಕಿಸ್ಥಾನದ ಕರಾವಳಿ ತೀರ ರಕ್ಷಣಾ ಪಡೆಯನ್ನೇ ಪಾಕ್‌ ಸರಕಾರ ಈ ಸೂಕ್ಷ್ಮ ಪ್ರದೇಶದಲ್ಲಿ ನಿಯೋಜಿಸಿದೆ ಎಂದು ಮೂಲಗಳನ್ನು ಉಲ್ಲೇಖೀಸಿ ‘ಟೈಮ್ಸ್‌ ನೌ’ ವರದಿ ಮಾಡಿದೆ. ಇದಲ್ಲದೆ ಗ್ವದಾರ್‌ನಲ್ಲಿ ಕರಾವಳಿ ತೀರ ರಕ್ಷಣಾ ಪಡೆಯ ಮೂರು ಘಟಕಗಳನ್ನು ನಿಯೋಜಿಸಿದೆ. ಈ ಪ್ರದೇಶದಲ್ಲಿಯೇ ಚೀನ ಹೆಚ್ಚಿನ ರೀತಿಯಲ್ಲಿ ಆಸಕ್ತಿ ವಹಿಸಿ ಕೋಟ್ಯಂತರ ರೂ. ಬಂಡವಾಳ ಹೂಡಿಕೆ ಮಾಡಿದೆ.

ಐಎಎಫ್ಗೆ ಸೇರಿದ ಮಿಗ್‌-21 ಯುದ್ಧ ವಿಮಾನ ನೆರೆಯ ರಾಷ್ಟ್ರದ ವಿಮಾನವನ್ನು ಹೊಡೆದು ಉರುಳಿಸಿದ ಬಳಿಕ ಅಂದರೆ, 1999ರ ಆಗಸ್ಟ್‌ ಬಳಿಕ ಈ ಪ್ರದೇಶದಲ್ಲಿ ಪಾಕಿಸ್ಥಾನ ತನ್ನ ಸೇನೆಯನ್ನು ನಿಯೋಜಿಸುತ್ತಾ ಬಂದಿದೆ. ಸರ್‌ ಕ್ರೀಕ್‌ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ಥಾನ 2012ರ ವರೆಗೆ ಹಲವು ಹಂತಗಳ ಮಾತುಕತೆ ನಡೆಸಿದ್ದವು. ಅವುಗಳಿಂದ ಯಾವುದೇ ರೀತಿಯ ಪರಿಣಾಮ ಕಂಡುಬರಲಿಲ್ಲ. ಅಂತಾರಾಷ್ಟ್ರೀಯ ನಿಯಮಗಳ ಪ್ರಕಾರ ಗಡಿ ಗುರುತಿಸುವಿಕೆಗೆ ಭಾರತ ಒತ್ತಾಯಿಸುತ್ತಿದ್ದರೆ, ಪಾಕಿಸ್ಥಾನ ತೃತೀಯ ಪಕ್ಷವೊಂದರ ಮಧ್ಯಸ್ಥಿಕೆ ಮೂಲಕ ಈ ಪ್ರಕ್ರಿಯೆ ನಡೆಯಬೇಕು ಎಂದು ಪ್ರತಿಪಾದಿಸುತ್ತಿದೆ. ಭಾರತ ಈ ಅಂಶ ತಿರಸ್ಕರಿಸಿದ್ದು, ಇದೊಂದು ದ್ವಿಪಕ್ಷೀಯ ವಿಚಾರ ಎಂದು ವಾದಿಸಿದೆ.

ಸರ್‌ ಕ್ರೀಕ್‌ ಎಲ್ಲಿದೆ?: ಗುಜರಾತ್‌ನ ರಣ್‌ ಆಫ್ ಕಛ್ ಸಮೀಪವಿದೆ. ಭಾರತ ಮತ್ತು ಪಾಕಿಸ್ಥಾನ ಮಧ್ಯೆ ಇರುವ 96 ಕಿಮೀ ಸ್ಥಳ ಇದಾಗಿದೆ. ಮೂಲತಃ ಅದರ ಹೆಸರು ಬಾನ್‌ ಗಂಗಾ. ಬ್ರಿಟಿಷ್‌ ಅಧಿಕಾರಿ ಸರ್‌ ಕ್ರೀಕ್‌ ಹೆಸರನ್ನು ಅನಂತರ ಇರಿಸಲಾಯಿತು. ಈ ಸ್ಥಳ ಅರಬೀ ಸಮುದ್ರದಿಂದ ಶುರುವಾಗುತ್ತದೆ. ಪಾಕಿಸ್ಥಾನದ ಸಿಂಧ್‌ ಪ್ರಾಂತ್ಯ ಮತ್ತು ರಣ್‌ ಆಫ್ ಕಛ್ ಅನ್ನು ಅದು ವಿಭಜಿಸುತ್ತದೆ.

ಪ್ರತಿಭಟನಕಾರರ ಕೈಯಲ್ಲಿ ಐಸಿಸ್‌ ಧ್ವಜ!

Advertisement

ಶ್ರೀನಗರ: ಈದ್‌-ಉಲ್-ಫಿತ್ರ ಹಬ್ಬದ ದಿನವೇ ಜಮ್ಮು-ಕಾಶ್ಮೀರದ ಕೆಲವು ಭಾಗಗಳಲ್ಲಿ ಘರ್ಷಣೆಗಳು ನಡೆದಿದ್ದು, ಭದ್ರತಾಪಡೆಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆಯೂ ನಡೆದಿದೆ. ಅಚ್ಚರಿಯೆಂದರೆ, ಶ್ರೀನಗರದ ಜಾಮಿಯಾ ಮಸೀದಿಯ ಮುಂಭಾಗದಲ್ಲಿ ಪ್ರತಿಭಟನಾಕಾರರು ಬುಧವಾರ, ಇತ್ತೀಚೆಗೆ ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಹತನಾದ ಉಗ್ರ ಝಾಕೀರ್‌ ಮೂಸಾ ಹಾಗೂ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಸ್ಥಾಪಕ ಮಸೂದ್‌ ಅಜರ್‌ನ ಭಾವಚಿತ್ರವಿರುವ ಪೋಸ್ಟರ್‌ಗಳನ್ನು ಹಿಡಿದುಕೊಂಡೇ ಭದ್ರತಾ ಪಡೆಗಳೊಂದಿಗೆ ಘರ್ಷಣೆಗಿಳಿದಿದ್ದಾರೆ.

ಅಷ್ಟೇ ಅಲ್ಲ, ಈ ದುಷ್ಕರ್ಮಿಗಳು ತಮ್ಮ ಕೈಯಲ್ಲಿ ಐಸಿಸ್‌ ಧ್ವಜಗಳನ್ನೂ ಹಿಡಿದು, ಭಾರತದ ವಿರುದ್ಧ ಘೋಷಣೆ ಕೂಗುತ್ತಿದ್ದರು ಎಂದು ಟೈಮ್ಸ್‌ ನೌ ವರದಿ ಮಾಡಿದೆ.

ಈದ್‌ ಪ್ರಾರ್ಥನೆ ಮುಗಿಯುತ್ತಿದ್ದಂತೆ, ಇಂಥ ಪೋಸ್ಟರ್‌ ಹಿಡಿದುಕೊಂಡ ಪ್ರತಿಭಟನಾಕಾರರು, ಏಕಾಏಕಿ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಲಾರಂಭಿಸಿದ್ದಾರೆ. ಅಲ್ಖೈದಾದ ಅಂಗ ಸಂಸ್ಥೆಯ ಮುಖ್ಯಸ್ಥನಾಗಿದ್ದ ಝಾಕೀರ್‌ ಮೂಸಾನ ಫೋಟೋವುಳ್ಳ ಪೋಸ್ಟರ್‌ಗಳಲ್ಲಿ ‘ಮೂಸಾ ಆರ್ಮಿ’ ಎಂದೂ ಬರೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಭದ್ರತಾ ಪಡೆಗಳು ಅಶ್ರುವಾಯು ಸಿಡಿಸಿ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.

ಇದೇ ಮಾದರಿಯ ಪ್ರತಿಭಟನೆಗಳು ಉತ್ತರ ಕಾಶ್ಮೀರದ ಸೋಪೋರ್‌, ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ನಲ್ಲೂ ನಡೆದಿದೆ. ಇದನ್ನು ಹೊರತುಪಡಿಸಿ, ಉಳಿದಂತೆ ಕಣಿವೆ ರಾಜ್ಯದ ಪರಿಸ್ಥಿತಿ ಶಾಂತಿಯುತವಾಗಿತ್ತು.

ಮಹಿಳೆಯ ಗುಂಡಿಕ್ಕಿ ಹತ್ಯೆ

ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಬುಧವಾರ ಬೆಳಗ್ಗೆ ಮಹಿಳೆಯೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಸಿಂಗೂ-ನರ್ಬಾಲ್ ಪ್ರದೇಶದಲ್ಲಿ ಮಹಿಳೆ ಮತ್ತು ಪುರುಷರೊಬ್ಬರ ಮೇಲೆ ಗುಂಡು ಹಾರಿಸಲಾಗಿದ್ದು, ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ, ಪುರುಷ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next