Advertisement
ಈ ಹಿನ್ನೆಲೆಯಲ್ಲಿ ಚೀನದಿಂದ ಮತ್ತಷ್ಟು ಹಣಕಾಸು ನೆರವನ್ನು ಪಡೆ ಯುವ ಉದ್ದೇಶದಿಂದ ಪಾಕಿಸ್ಥಾನ, ಪಾಕ್ ಆಕ್ರಮಿತ ಪ್ರದೇಶದ ಭಾಗವಾದ ಗಿಲ್ಗಿಟ್- ಬಾಲ್ಟಿಸ್ಥಾನ್ ಅನ್ನು ಲೀಸ್ ಆಧಾರದಲ್ಲಿ ಚೀನಕ್ಕೆ ಹಸ್ತಾಂತರಿಸಲು ಗಂಭೀರ ಚಿಂತನೆ ನಡೆಸಿದೆ ಎಂದು ಕಾರಕೋರಂ ನ್ಯಾಶನಲ್ ಮೂವ್‌ಮೆಂಟ್‌ನ ಅಧ್ಯಕ್ಷ ಮುಮ್ತಾಜ್ ನಗ್ರಿ ಗಂಭೀರ ಆರೋಪ ಮಾಡಿದ್ದಾರೆ. ಒಂದು ವೇಳೆ ಪಾಕಿಸ್ಥಾನ ಸರಕಾರ ಇಂಥ ನಿರ್ಧಾರವನ್ನು ಕೈಗೊಂಡದ್ದೇ ಆದಲ್ಲಿ ಈಗಾಗಲೇ ಪ್ರತ್ಯೇಕತಾವಾದ ಮತ್ತು ಪಾಕಿಸ್ಥಾನ ಸರಕಾರದ ತೀವ್ರ ನಿರ್ಲಕ್ಷ್ಯದಿಂದಾಗಿ ಕನಿಷ್ಠ ಮೂಲ ಸೌಲಭ್ಯ ಗಳಿಂದ ವಂಚಿತವಾಗಿರುವ ಈ ಪ್ರದೇಶ ಸದ್ಯೋಭವಿಷ್ಯದಲ್ಲಿ ಯುದ್ಧ ಭೂಮಿಯಾಗಿ ಮಾರ್ಪಡುವ ಎಲ್ಲ ಸಾಧ್ಯತೆಗಳಿವೆ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ. ಚೀನ-ಪಾಕಿಸ್ಥಾನ ನಡುವಣ ಆರ್ಥಿಕ ಕಾರಿಡಾರ್ ಒಪ್ಪಂದದ ಭಾಗವಾಗಿ ಚೀನ, ಪಿಒಕೆಯ ಭಾಗವಾಗಿರುವ ಗಿಲ್ಗಿಟ್- ಬಾಲ್ಟಿಸ್ಥಾನ್ ಭಾಗದಲ್ಲಿ ಬಂಡವಾಳ ಹೂಡಿ ತನಗೆ ಅಗತ್ಯವಿರುವೆಡೆ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸುತ್ತ ಬಂದಿದೆ. ಈ ಮೂಲಕ ಚೀನ ಮತ್ತು ಪಾಕಿಸ್ಥಾನ ಜಂಟಿಯಾಗಿ ಭಾರತದ ವಿರುದ್ಧ ಷಡ್ಯಂತ್ರ ಹೂಡಿದ್ದು, ಈ ಬೆಳವಣಿಗೆಯ ಮುಂದುವರಿದ ಭಾಗವೇ ಗಿಲ್ಗಿಟ್-ಬಾಲ್ಟಿಸ್ಥಾನವನ್ನು ಚೀನದ ವಶಕ್ಕೆ ಒಪ್ಪಿಸುವುದಾಗಿದೆ ಎಂಬ ವಿಶ್ಲೇಷಣೆಯೂ ಕೇಳಿಬಂದಿದೆ.
Related Articles
Advertisement
ಲೀಸ್ ಪ್ರಸ್ತಾವನೆ ಭಾರತದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಗಡಿಭಾಗದಲ್ಲಿ ಚೀನ ಮತ್ತೆ ತಕರಾರು ಆರಂಭಿಸುವ ಸಾಧ್ಯತೆ ಇದೆಯಲ್ಲದೆ ವಾಣಿಜ್ಯ-ವ್ಯವಹಾರ ಕ್ಷೇತ್ರಗಳಲ್ಲೂ ಭಾರೀ ಪ್ರತಿಕೂಲ ಪರಿಣಾಮಗಳನ್ನು ಎದುರಿಸಬೇಕಾಗಲಿದೆ. ಈ ಹಿನ್ನೆಲೆಯಲ್ಲಿ ಭಾರತ ಪಾಕ್‌ಗೆ ಇಂಥ ಪ್ರಯತ್ನಕ್ಕೆ ಕೈಹಾಕದಂತೆ ಎಚ್ಚರಿಕೆ ನೀಡುವ ಜತೆಗೆ ಇವರಿಬ್ಬರ ಷಡ್ಯಂತ್ರದ ಕುರಿತಂತೆ ಜಾಗತಿಕ ಸಮುದಾಯದ ಗಮನ ಸೆಳೆಯಬೇಕಿದೆ.