Advertisement

ಸರ್ಕಾರಿ ಶಾಲೆಗಳಿಗೆ ಬಣ್ಣದ ಚಿತ್ತಾರ

03:48 PM Sep 25, 2019 | Suhan S |

ಮಾಸ್ತಿ: ಹಲವು ವರ್ಷಗಳಿಂದ ಸುಣ್ಣ ಬಣ್ಣವಿಲ್ಲದೆ ಪಾಳು ಬಿದ್ದ ಮನೆಗಳಂತೆ ಕಂಡು ಬರುತ್ತಿದ್ದ ಸರ್ಕಾರಿ ಶಾಲೆಗಳು ಈಗ ಪ್ರಾಕೃತಿಕ ಸೌಂದರ್ಯ ಒಳಗೊಂಡ ವರ್ಣಮಯ ಚಿತ್ತಾರದೊಂದಿಗೆ ಕಂಗೊಳಿಸುತ್ತಿವೆ.

Advertisement

ಮರ ತಬ್ಬಿಕೊಂಡ ಮಗು, ತಾಳಮೇಳಗಳೊಂದಿಗೆ ನೃತ್ಯ ಮಾಡುತ್ತಿರುವ ಕಲಾವಿದರು, ಹಿಮಾಲಯದ ತಪ್ಪಲು, ಸೂರ್ಯನ ಕಿರಣ ಹೀಗೆ ಹಲವು ಪ್ರಾಕೃತಿಕ ಸೌಂದರ್ಯ ಒಳಗೊಂಡ ವಿವಿಧ ವರ್ಣಮಯ ಚಿತ್ರಗಳು ಇದು ಸರ್ಕಾರಿ ಶಾಲೆಯೋ ಇಲ್ಲ, ಕಲಾ ಕ್ಷೇತ್ರವೋ ಎನ್ನುವ ಮಟ್ಟಿಗೆ ಶಾಲಾ ಮಕ್ಕಳು, ಪೋಷಕರು, ಗ್ರಾಮಸ್ಥರ ಗಮನ ಸೆಳೆಯುತ್ತಿವೆ.

ಹೋಬಳಿಯ ರಾಜೇನಹಳ್ಳಿ, ಆಲಹಳ್ಳಿ, ದಿನ್ನೇರಿ ಹಾರೋಹಳ್ಳಿ ಸೇರಿ ತಾಲೂಕಿನ 20 ಸರ್ಕಾರಿ ಶಾಲೆಗಳನ್ನು ಬೆಂಗಳೂರಿನ ಕ್ಯಾಂಪಸ್‌ ಟು ಕಮ್ಯೂನಿಟಿ ಸಂಸ್ಥೆಯ ವಿದ್ಯಾರ್ಥಿಗಳು ಬಣ್ಣದ ಚಿತ್ತಾರಗಳಿಂದ ಆಕರ್ಷಣೀಯ ವಾಗಿಸಿದ್ದಾರೆ. ಶಾಲಾ ಆವರಣ, ಕೊಠಡಿ, ಕಾಂಪೌಂಡ್‌ ಗೋಡೆ ಮೇಲೆ ಬಣ್ಣದ ಚಿತ್ರಗಳನ್ನು ಬಿಡಿಸಿ, ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯುವ ಕೆಲಸ ಮಾಡಿದ್ದಾರೆ.

ಸಾರ್ವಜನಿಕರಿಂದ ಮೆಚ್ಚುಗೆ: ಹಲವು ಕಡೆ ಸರ್ಕಾರಿ ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಕೆಲವು ಕಡೆ ಸುಣ್ಣ ಬಣ್ಣ ಕಂಡು ಎಷ್ಟೋ ವರ್ಷಗಳಾಗಿವೆ. ಮಳೆ ಬಿಸಿಲಿಗೆ ಬಣ್ಣ ಮಾಸಿ ಪಾಳುಬಿದ್ದ ಮನೆಯಂತಿವೆ. ಇದನ್ನು ಮನಗಂಡ ಕ್ಯಾಂಪಸ್‌ ಟು ಕಮ್ಯೂನಿಟಿ ಸಂಸ್ಥೆ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳನ್ನು ಸುಣ್ಣ ಬಣ್ಣ ಬಳಿದು, ಚಿತ್ರಗಳನ್ನು ಬಿಡಿಸಿ ಉಳಿಸುವ ಪ್ರಯತ್ನ ಮಾಡಿದ್ದಾರೆ. ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

20 ಶಾಲೆಗಳಿಗೆ ಬಣ್ಣ: ಸರ್ಕಾರಿ ಶಾಲೆಗಳೆಂದರೆ ಈಗ ಜನರ ಮನಸ್ಸಿನಲ್ಲಿ ಏನೋ ಒಂದು ರೀತಿ ಅಸಡ್ಡೆ ಭಾವನೆ ಇದೆ. ಖಾಸಗಿ ಶಾಲೆಗಳ ಆಕರ್ಷಣೆಗೆ ಒಳಗಾಗಿರುವ ಪೋಷಕರನ್ನು ಮತ್ತೆ ಸರ್ಕಾರಿ ಶಾಲೆಗಳತ್ತ ಸೆಳೆಯಲು, ಮಕ್ಕಳನ್ನು ದಾಖಲಾತಿ ಮಾಡುವಂತೆ ಮಾಡಲು ಕ್ಯಾಂಪಸ್‌ ಟು ಕಮ್ಯೂನಿಟಿ ಸಂಸ್ಥೆಯು ತಾಲೂಕಿನಲ್ಲಿ ಆಯ್ದ 20 ಸರ್ಕಾರಿ ಶಾಲೆಗಳನ್ನು ಸುಂದರವಾಗಿಸಿದ್ದಾರೆ. ಶಾಲಾ ಕೊಠಡಿಗಳಿಗೆ, ಆವರಣದ ಗೋಡೆಗಳಿಗೆ, ಕಾಂಪೌಂಡ್‌ ಮೇಲೆ ವಿಜ್ಞಾನ, ಪರಿಸರ, ಕ್ರೀಡೆ, ರಾಷ್ಟ್ರೀಯ ನಾಯಕರು ಸೇರಿ ಹಲವು ರೀತಿಯ ಚಿತ್ರಗಳನ್ನು ಬಿಡಿಸಿದ್ದಾರೆ. ಇದರಿಂದ ಶಾಲೆಗಳ ಅಂದ ಹೆಚ್ಚುವುದರ ಜೊತೆಗೆ ಗೋಡೆ ಮೇಲೆ ಗಲೀಜು ಮಾಡದಂತೆ ಮಾಡಿದ್ದಾರೆ. ರಸ್ತೆ ಬದಿಯ ಮನೆಗಳು, ಕಾಂಪೌಂಡು, ಶಾಲಾ ಗೋಡೆ, ಸರ್ಕಾರಿ ಕಟ್ಟಡ ಮೇಲೆ ಭಿತ್ತಿ ಪತ್ರ, ಪೋಸ್ಟರ್‌ ಅಂಟಿಸಿ ಅಂದ ಕೆಡಿಸುವವರೇ ಹೆಚ್ಚು. ಇಂತಹ ಸಂದರ್ಭದಲ್ಲಿ ಕ್ಯಾಂಪಸ್‌ ಟು ಕಮ್ಯೂನಿಟಿ ಸಂಸ್ಥೆಯ ಸಂಯೋಜಕ ನಿಖೀಲ್‌ಕುಮಾರ್‌, ದೀಪಕ್‌ ಸೇರಿ 40 ಮಂದಿ ಶಾಲೆಯ ಸೌಂದರ್ಯವನ್ನು ಹೆಚ್ಚಿಸಿದ್ದಾರೆ.

Advertisement

ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ವಿ.ಕೃಷ್ಣಪ್ಪ, ಕ್ಯಾಂಪಸ್‌ ಟು ಕಮ್ಯೂನಿಟಿ ಸಂಸ್ಥೆಯ ವಿದ್ಯಾರ್ಥಿಗಳ ಕಾರ್ಯ ನೋಡಿ ವೈಯಕ್ತಿಕವಾಗಿ 5 ಸಾವಿರ ರೂ. ದೇಣಿಗೆ ನೀಡಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಂಜುಂಡೇಗೌಡ, ರಾಜೇನಹಳ್ಳಿ ಗ್ರಾ.ಪಂ.ಪಿಡಿಒ ಸೋಮೇಶ್‌ ಇನ್ನಿತರರು ಇದ್ದರು.

 

  • ಎಂ.ಮೂರ್ತಿ
Advertisement

Udayavani is now on Telegram. Click here to join our channel and stay updated with the latest news.

Next