ಸಿಡ್ನಿ: ಕಳೆದ ನವೆಂಬರ್‌ನಲ್ಲಿ ಆಸ್ಟ್ರೇಲಿಯ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಕ್ಕಿಳಿದ ಟಿಮ್ ಪೇನ್ ಬರೆದ “ದ ಪೈಡ್ ಪ್ರೈಸ್’ ಪುಸ್ತಕ ಬಿಡುಗಡೆಯಾಗಿದೆ. ಅದರಲ್ಲಿ ಅವರು ಹಲವು ವಿವಾದಾತ್ಮಕ ಸಂಗತಿಗಳನ್ನು ಪ್ರಸ್ತಾಪಿಸಿದ್ದಾರೆ.
ಮುಖ್ಯವಾಗಿ 2018ರ ದ.ಆಫ್ರಿಕಾ ಪ್ರವಾಸದ ವೇಳೆ ನಡೆದ 4ನೇ ಟೆಸ್ಟ್‌ನಲ್ಲಿ ಆತಿಥೇಯ ದ.ಆಫ್ರಿಕಾ ಕೂಡ ಚೆಂಡು ವಿರೂಪ ಮಾಡಿತ್ತು ಎಂದು ಆರೋಪಿಸಿದ್ದಾರೆ. ಹಾಗೆಯೇ ಕೇಪ್‌ಟೌನ್‌ನಲ್ಲಿ ನಡೆದ 3ನೇ ಟೆಸ್ಟ್‌ನಲ್ಲಿ ಚೆಂಡು ವಿರೂಪ ಮಾಡಿ ಸಿಕ್ಕಿಬಿದ್ದಿದ್ದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಕ್ಯಾಮೆರಾನ್ ಬ್ಯಾನ್‌ಕ್ರಾಫ್ಟ್ರನ್ನು ಇನ್ನೂ ಸೂಕ್ತವಾಗಿ ನಡೆಸಿಕೊಳ್ಳಬಹುದಿತ್ತು ಎಂದಿದ್ದಾರೆ.
2018ರಲ್ಲಿ ಆಸ್ಟ್ರೇಲಿಯ ತಂಡ ದ.ಆಫ್ರಿಕಾ ಪ್ರವಾಸಕ್ಕೆ ತೆರಳಿತ್ತು.ಕೇಪ್‌ಟೌನ್‌ನಲ್ಲಿ ನಡೆದ 3ನೇ ಟೆಸ್ಟ್‌ನಲ್ಲಿ ಆಸೀಸ್ ಆಟಗಾರರು ಚೆಂಡನ್ನು ಸ್ಯಾಂಡ್ ಪೇಪರ್‌ನಿಂದ ವಿರೂಪ ಮಾಡಿದ ಘಟನೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆಗಿನ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್‌ರನ್ನು 1 ವರ್ಷ, ಬ್ಯಾಟರ್ ಕ್ಯಾಮೆರಾನ್ ಬ್ಯಾನ್‌ಕ್ರಾಫ್ಟ್ರನ್ನು 9 ತಿಂಗಳು ಕ್ರಿಕೆಟ್‌ನಿಂದ ಕ್ರಿಕೆಟ್ ಆಸ್ಟ್ರೇಲಿಯ ನಿಷೇಧಿಸಿತ್ತು. 4ನೇ ಟೆಸ್ಟ್‌ನಲ್ಲಿ ದ.ಆಫ್ರಿಕಾ ಬೌಲಿಂಗ್ ಮಾಡುವಾಗ ಚೆಂಡು ದೊಡ್ಡದಾಗಿ ಬಿರುಕುಬಿಟ್ಟಿದ್ದು ಸ್ಕ್ರೀನ್‌ನಲ್ಲಿ ಕಂಡಿದ್ದರೂ, ಅಂಪೈರ್‌ಗಳು ಬೆಂಬಲಕ್ಕೆ ನಿಲ್ಲಲಿಲ್ಲ. ನೇರಪ್ರಸಾರ ಮಾಡುವ ಸಂಸ್ಥೆ ತಕ್ಷಣ ವಿಡಿಯೊವನ್ನೇ ಅಳಿಸಿತು ಎಂದು ಆರೋಪಿಸಿದ್ದಾರೆ.
ಕೈಬಿಟ್ಟ ಕ್ರಿಕೆಟ್ ಆಸ್ಟ್ರೇಲಿಯ: ಎಲ್ಲಕ್ಕಿಂತ ಮುಖ್ಯವಾಗಿ ತಾನು ನಾಯಕತ್ವ ಬಿಟ್ಟಿದ್ದಕ್ಕೆ ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿಯೇ ಕಾರಣ ಎಂದು ದೂರಿದ್ದಾರೆ. ತಾನು ರಾಜೀನಾಮೆ ಕೊಡುವ ಯೋಚನೆಯಲ್ಲಿರಲಿಲ್ಲ, ಆದರೆ ಯಾರೋ ಅಪರಿಚಿತನನ್ನು ಎದುರಿಟ್ಟುಕೊಂಡು ಕ್ರಿಕೆಟ್ ಆಸ್ಟ್ರೇಲಿಯ ನಾನು ರಾಜೀನಾಮೆ ಕೊಡುವಂತೆ ಒತ್ತಡ ಹೇರಿತು ಎಂದಿದ್ದಾರೆ.
ಕ್ರಿಕೆಟ್ ತಾಸೆ¾àನಿಯ ಮಹಿಳಾ ಉದ್ಯೋಗಿಗೆ ನಾನು ಕಳುಹಿಸಿದ ಸಂದೇಶಗಳನ್ನು ಕ್ರಿಕೆಟ್ ಆಸ್ಟ್ರೇಲಿಯದ ಆಂತರಿಕ ತನಿಖಾ ಸಮಿತಿ ಪರಿಶೀಲಿಸಿ, ಅದರಲ್ಲಿ ನನ್ನದೇನು ತಪ್ಪಿಲ್ಲ, ಇದು ಪರಸ್ಪರ ಸಮ್ಮತಿಯಿಂದ ನಡೆದಿದ್ದು ಎಂದು ಹೇಳಿತ್ತು. ಅಷ್ಟಕ್ಕೂ ಈ ಸಂದೇಶ ಕಳುಹಿಸಿದ ಘಟನೆ ನಡೆದಿದ್ದೇ 2017ರಲ್ಲಿ. ಆದರೆ ಇದೇ ವಿಚಾರ ಸುದ್ದಿ ಮಾಧ್ಯಮಗಳಲ್ಲಿ ಕಳೆದ ವರ್ಷ ಬಂದ ನಂತರ, ಕ್ರಿಕೆಟ್ ಆಸ್ಟ್ರೇಲಿಯ ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ. ಯಾರೋ ಅನಾಮಧೇಯ ಪಿಆರ್‌ಒನೊಂದಿಗೆ ರಹಸ್ಯ ದೂರವಾಣಿ ಮಾತುಕತೆ ನಡೆಸಿದ ಕ್ರಿಕೆಟ್ ಆಸ್ಟ್ರೇಲಿಯ ರಾಜೀನಾಮೆ ಸಲ್ಲಿಸಲು ಪರೋಕ್ಷ ಒತ್ತಡ ಹೇರಿತು ಎಂದಿದ್ದಾರೆ.