ಸುಳ್ಯ: ಸೋಣಂಗೇರಿಯಿಂದ ಸುಳ್ಯದ ಪೈಚಾರು ಸಂಪರ್ಕಿಸುವ ಬೈಪಾಸ್ ರಸ್ತೆ ವಿಸ್ತಾರ ಕಾಮಗಾರಿ ಪೂರ್ಣ ಗೊಳ್ಳದೇ ಹೊಂಡ ಗುಂಡಿಗಳಿಂದ ಕೂಡಿದ ರಸ್ತೆಯಲ್ಲೇ ವಾಹನ ಸವಾರರು ನಿತ್ಯ ಸಂಕಷ್ಟ ಪಡುತ್ತ ಸಂಚರಿಸುತ್ತಿದ್ದಾರೆ. ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬ ದೂರು ವ್ಯಕ್ತವಾಗಿದೆ.
ಲೋಕೋಪಯೋಗಿ ಇಲಾಖೆ ವತಿ ಯಿಂದ ಪೈಚಾರಿನಿಂದ ಸೋಣಂಗೇರಿ ಜಿಬ್ಬಡ್ಕವರೆಗೆ ರಸ್ತೆ ವಿಸ್ತಾರ ಕಾಮಗಾರಿ ಒಂದೂವರೆ ವರ್ಷಗಳ ಹಿಂದೆ ಆರಂಭಗೊಂಡಿತ್ತು. ಲೋಕೋಪಯೋಗಿ ಇಲಾಖೆಯ ಸುಮಾರು 4.95 ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ನಡೆ ಯುತ್ತಿದೆ. ಇದಕ್ಕಾಗಿ ರಸ್ತೆ ಪರಂ ಬೋಕಿನಲ್ಲಿದ್ದ ಮನೆ, ಅಂಗಡಿಗಳ ತೆರವು ಕಾರ್ಯ ನಡೆಸಲಾಗಿತ್ತು. ಸತೀಶ್ ಕುಮಾರ್ ಕಾಮಗಾರಿ ನಿರ್ವ ಹಿಸುತ್ತಿದ್ದಾರೆ.
ಅಪೂರ್ಣ ಕಾಮಗಾರಿ
ಶೇ. 50ಕ್ಕೂ ಅಧಿಕ ಕಾಮಗಾರಿ ನಡೆದಿದೆ. ರಸ್ತೆ ವಿಸ್ತಾರ ಹಾಗೂ ವಿಸ್ತಾರ ಆದಲ್ಲಿವರೆಗೆ ಡಾಮರು ಕಾಮಗಾರಿ, ರಸ್ತೆ ಬದಿಯಲ್ಲಿ ಕಾಂಕ್ರೀಟ್ ಚರಂಡಿ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಇನ್ನು ಉಳಿಕೆ ಅಭಿವೃದ್ಧಿಗೊಳ್ಳಬೇಕಿರುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯಲ್ಲಿ ಹೊಂಡ-ಗುಂಡಿಗಳು ನಿರ್ಮಾಣ ಗೊಂಡಿದೆ. ಹೀಗಾಗಿ ವಾಹನ ಸವಾರರು ಸಂಕಷ್ಟ ಪಡುತ್ತ ಸಂಚರಿಸಬೇಕಾಗಿದೆ. ರಸ್ತೆ ಬೇಸಗೆಯಲ್ಲಿ ಧೂಳಿನಿಂದ ಕೂಡಿದ್ದರೆ ಮಳೆಗಾಲದಲ್ಲಿ ಕೆಸರು ತುಂಬಿರುತ್ತದೆ. ಸಂಪೂರ್ಣ ರಸ್ತೆ ಅಭಿವೃದ್ಧಿ ಆದ ಬಳಿಕವೇ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ. ಇಷ್ಟರಲ್ಲೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಮಳೆಗಾಲ ಆರಂಭವಾದಲ್ಲಿ ಕಾಮಗಾರಿ ನಿಲ್ಲಿಸಲಾಗುತ್ತದೆ. ಬಳಿಕ ಮುಂದಿನ ಬೇಸಗೆ ಶುರುವಾದ ಬಳಿಕವಷ್ಟೇ ಕಾಮಗಾರಿ ಆರಂಭವಾಗುತ್ತದೆ. ಅಲ್ಲಿವರೆಗೆ ಸಂಕಷ್ಟ ಪಡುತ್ತಲೇ ಇರಬೇಕಾಗುತ್ತದೆ ಎನ್ನುತ್ತಾರೆ ವಾಹನ ಚಾಲಕರು.
ಗುತ್ತಿಗೆದಾರರಿಗೆ ಸೂಚಿಸಲಾಗುವುದು
ಪೈಚಾರು-ಸೋಣಂಗೇರಿ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಂಡಿದ್ದು, ಈಗಾಗಲೇ ಅರ್ಧದಷ್ಟು ಕಾಮಗಾರಿ ನಡೆದಿದೆ. ಮಳೆಗಾಲಕ್ಕೆ ಮೊದಲು ಕಾಮಗಾರಿ ಪೂರ್ಣಗೊಳಿಸಲು ಅಸಾಧ್ಯ. ಮಳೆ ಬಂದಲ್ಲಿ ಕಾಮಗಾರಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಹೊಂಡ-ಗುಂಡಿಗಳನ್ನು ದುರಸ್ತಿಗೊಳಿಸಿ, ವಾಹನ ಸವಾರರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಗುತ್ತಿಗೆದಾರರಿಗೆ ಸೂಚಿಸಲಾಗುವುದು.
–ಪರಮೇಶ್ವರ, ಲೋಕೋಪಯೋಗಿ ಇಲಾಖೆ, ಸುಳ್ಯ.