Advertisement
ಮೂರು ದಶಕಗಳಲ್ಲಿ ತಂತ್ರಜ್ಞಾನ ಉಂಟು ಮಾಡಿದ ಪಲ್ಲಟಗಳು ಹಲವಾರು. ಟೆಲಿಫೋನ್‌ನಿಂದ ಹಿಡಿದು ಟಿವಿ ವರೆಗೂ ಎಲ್ಲದರ ಉದ್ದೇಶಗಳನ್ನೇ ಬದಲಾಯಿಸಿಬಿಟ್ಟಿತು ಈ ಕ್ಷೇತ್ರದ ಸಂಶೋಧನೆಗಳು. ದೊಡ್ಡ ದೊಡ್ಡದೆಲ್ಲವೂ ಸಣ್ಣದಾಗಿ, ಸ್ಮಾರ್ಟ್ ಆಗಿ ಕಂಗೊಳಿಸತೊಡಗಿದ್ದು ಈ ಮೂರು ದಶಕಗಳಲ್ಲೇ.
Related Articles
Advertisement
ಪೇಜರ್ ಒಂದು ಮಾಹಿತಿ ರವಾನಿಸುವ ಸೇವೆ. ಈಗಿನ ಸಾಮಾನ್ಯ ಚಿಕ್ಕ ಮೊಬೈಲ್‌ನನ್ನು ಆಡ್ಡ ಹಿಡಿದರೆ ಎಷ್ಟು ಗಾತ್ರವಾಗುತ್ತದೋ ಅಷ್ಟಿತ್ತು ಅದು. ಅದಕ್ಕೊಂದು ಕೊಂಡಿ ಇಡುತ್ತಿದ್ದರು. ಅದನ್ನು ಸೊಂಟಕ್ಕೆ ಬೆಲ್ಟ್ ಕಟ್ಟಿಕೊಂಡಂತೆ ಕಟ್ಟಿಕೊಳ್ಳುತ್ತಿದ್ದರು. ಈಗಿನ ಮೊಬೈಲ್ ಸೇವೆಯಂತೆ ನಿರ್ದಿಷ್ಟ ಕಂಪೆನಿಗಳಿಗೆ ಹಣ ಪಾವತಿಸಿ ಪೇಜರ್ ಪಡೆಯಬೇಕಿತ್ತು. ಎರಡು ಬಗೆಯ ಸೇವೆ. ಧ್ವನಿ ಸಂದೇಶ ಹಾಗೂ ಅಕ್ಷರ ಸಂದೇಶ.
ಈಗಿನ ಮೊಬೈಲ್‌ಗೆ ಸಂದೇಶ ಬರುವ ಮಾದರಿಯೇ. ಸಂದೇಶ ಬಂದ ಕೂಡಲೇ ಮೂರು ಬಾರಿ ಬೀಪ್ ಶಬ್ದ ಬರುತ್ತಿತ್ತು. ವಾಸ್ತವವಾಗಿ ವಿದೇಶಗಳಲ್ಲಿ 1960-80 ರ ದಶಕದಲ್ಲಿ ಜನಪ್ರಿಯವಾಗಿದ್ದ ಪೇಜರ್‌ಗೆ ಮತ್ತೂಂದು ಹೆಸರು ಇದ್ದದ್ದು ಬೀಪರ್ ಎಂದೇ.
ಕುತೂಹಲಆಗ ಈ ಪೇಜರ್ ನೋಡುವುದೇ ಒಂದು ಕುತೂಹಲ. ಎಲ್ಲರ ಬಳಿ ಪೇಜರ್ ಇರಲಿಲ್ಲ. ಕೆಲವು ಮೆಡಿಕಲ್ ಅಸಿಸ್ಟೆಂಟ್ಸ್, ಸೇಲ್ಸ್ ಎಕ್ಸಿಕ್ಯೂಟಿವ್ಸ್ ಮತ್ತಿತರರು ಈ ಸೇವೆಯನ್ನು ಹೊಂದಿದ್ದರು. ಸದಾ ಸುದ್ದಿಯ ಬೆನ್ನ ಹಿಂದಿರುವ ಮಾಧ್ಯಮಗಳಿಗೆ ಬಂದದ್ದೂ ಕೊಂಚ ತಡವಾಗಿಯೇ. ಟೆೆಲಿಗ್ರಾಂ ಸಂದೇಶದ ತಾಂತ್ರಿಕ ರೂಪವೆಂದರೆ ಹೆಚ್ಚು ಸೂಕ್ತ. ಒಂದೆರಡು ಸಾಲಿನ ಸಂದೇಶಗಳನ್ನು ಕಳುಹಿಸಬಹುದಾಗಿತ್ತು. ಅದನ್ನು ಹೊಂದುವುದೇ ಒಂದು ಅಂತಸ್ತಿನ ಕಥೆಯಾಗಿತ್ತು. ಹಾಗೆ ಹೇಳುವುದಾದರೆ ಮೋಟರೊಲ ಕಂಪೆನಿ ಜನರಿಗೆ ಪರಿಚಯವಾದದ್ದೇ ಈ ಪೇಜರ್ ಸೇವೆಯಿಂದ. 1991 ರಲ್ಲಿ ಉದಾರೀಕರಣದ ಬಾಗಿಲು ತೆರೆದ ಮೇಲೆ ಮೆಲ್ಲಗೆ ಆರ್ಥಿಕತೆಯ ಗಂಧಗಾಳಿ ಒಳಗೂ ಹೊರಗೂ ಸೋಕ ತೊಡಗಿದ ಕಾಲವದು. ಸಂದೇಶಗಳ ರವಾನೆಗೆ ಆಧುನಿಕ ತಾಂತ್ರಿಕ ಸ್ವರೂಪ ಸಿಕ್ಕಿದ್ದು ಆಗಲೇ. ಮೇಘ ಸಂದೇಶದ ಕಲ್ಪನೆಯನ್ನು ನನಸಾಗಿಸಿದ್ದು ಇದೇ ಪೇಜರ್‌ಗಳು. ಅಮೆರಿಕ-ಬ್ರಿಟನ್‌ನಲ್ಲಿ ಹೆಚ್ಚಾಗಿ ಕೊರಿಯರ್ ಕಂಪೆನಿಗಳ ಮಂದಿ ಬಳಸುತ್ತಿದ್ದ ಪೇಜರ್‌ಗಳಿಗೆ ನಮ್ಮಲ್ಲಿ ಕೆಂಫು ರತ್ನಗಂಬಳಿಯ ಸ್ವಾಗತ ದೊರೆತಿತ್ತು. 1998ರ ಸುಮಾರಿಗೆ 2 ಲಕ್ಷ ದಷ್ಟು ಪೇಜರ್ ಚಂದಾದಾರರು ಇದ್ದಿದ್ದರು. ಇದೇ ಸಮಯದಲ್ಲಿಯೇ ಮೊಬೈಲ್ ಫೋನ್ ಬಂದಿದ್ದು. ಆದರೆ, ಅದರ ದರ ಮತ್ತು ಬಳಕೆಯ ವೆಚ್ಚ ಎರಡೂ ದುಬಾರಿಯಾದ ಕಾರಣ ಯಾರೂ ಅದರ ಬಳಿ ಹೋಗಿರಲಿಲ್ಲ. ಆರಂಭದಲ್ಲಿ ಪೇಜರ್‌ಗೆ 10 ರಿಂದ 15 ಸಾವಿರ ರೂ. ವರೆಗೆ ಬೆಲೆಯಿತ್ತು. ಬಳಿಕ ಸ್ವಲ್ಪ ಕಡಿಮೆಯಾಯಿತು. ಮೊಬೈಲ್ ಜನಪ್ರಿಯವಾಗದ ಕಾರಣ ಪೇಜರ್‌ಗೆ ಬೇಡಿಕೆ ಇದ್ದ ಕಾಲವದು. ಆದರೆ ಕ್ರಮೇಣ ಬದಲಾವಣೆಯ ಗಾಳಿ ಜೋರಾಗಿ ಬೀಸತೊಡಗಿತು. ಆ ಬಿರುಗಾಳಿಗೆ ಮೆಲ್ಲಗೆ ಬದಿಗೆ ಸರಿಯತೊಡಗಿದ್ದು ಪೇಜರ್ ಸೇವೆ. ಬಿಎಸ್‌ಎನ್‌ಎಲ್ ಅಧಿಕಾರಿಯೊಬ್ಬರ ಪ್ರಕಾರ ಈಗ ಅದರ ಸೇವೆ ನಮ್ಮಲ್ಲಿ ಎಲ್ಲೂ ಇಲ್ಲ. ಪೇಜರ್ ಒಂದು ರೀತಿಯಲ್ಲಿ ನೈಟ್ ವಾಚ್‌ಮೆನ್ ಮಾದರಿಯಲ್ಲಿ ಬಂದಿದ್ದು. ಇತ್ತ ಲ್ಯಾಂಡ್‌ಲೈನ್ ಸಿಗುತ್ತಿರಲಿಲ್ಲ, ಮೊಬೈಲ್ ಕೈಗೆಟುಕುತ್ತಿರಲಿಲ್ಲ. ಈ ಹೊತ್ತಿನಲ್ಲಿ ಹೆಚ್ಚು ಬ್ಯಾಟರಿ ಲೈಫ್ ಹೊಂದಿದ್ದು, ಪುಟ್ಟದಾದ, ಕಡಿಮೆ ದರ (ಮೊಬೈಲ್‌ಗೆ ಹೋಲಿಸಿದರೆ) ಆಕರ್ಷಕವಾಗಿಯೂ ಇತ್ತು. ಆದರೆ ಮೊಬೈಲ್ ಎಂಬ ಮಾಂತ್ರಿಕನ ಮುಂದೆ ನಿಲ್ಲಲಾಗಲಿಲ್ಲ. ಬದಲಾವಣೆಯ ಚಕ್ರವ್ಯೂಹದ ಒಳಗೆ ಹೊಕ್ಕು ಹೊರ ಬರಲಾರದೇ ಹೋದ ಅಭಿಮನ್ಯು ಪೇಜರ್. ಇಂಥ ಪೇಜರ್‌ನ ಮೊದಲ ಪೇಟೆಂಟ್ ಪಡೆದವನು
ಆಲ್ಫೆಡ್ ಜೆ ಕ್ರಾಸ್ ಎನ್ನುವಾತ. ಮೊದಲ ಪೇಜಿಂಗ್ ಸೇವೆ ಶುರುವಾದದ್ದೂ 1950 ರಲ್ಲಿ ನ್ಯೂಯಾರ್ಕ್ ನಗರದಲ್ಲಿನ ವೈದ್ಯರ ನಡುವೆ ಸಂದೇಶ ರವಾನಿಸುವುದಕ್ಕಾಗಿ. ಆ ಸೇವೆಗೆ ಆಗ ಪಾವತಿಸುತ್ತಿದ್ದುದು ತಿಂಗಳಿಗೆ 12 ಡಾಲರ್‌ಗಳು. 200 ಗ್ರಾಂ ತೂಕ ಹೊಂದಿತ್ತು. ಸುಮಾರು 40 ಕಿಮೀ ವ್ಯಾಪ್ತಿಯಲ್ಲಿ ಸಂದೇಶ ವನ್ನು ರವಾನಿಸುತ್ತಿತ್ತು. ಇಂಥದೊಂದು ಸೇವಾ ವಲಯ ಉದ್ದಿಮೆ ಅಮೆರಿಕದಲ್ಲಿ 2008 ರ ವೇಳೆಗೆ 2.1 ಶತಕೋಟಿ ಆದಾಯವನ್ನು ಗಳಿಸುತ್ತಿತ್ತು. ಅದು 2003 ಕ್ಕೆ ಹೋಲಿಸಿದರೆ ಕಡಿಮೆ (6.2 ಶತಕೋಟಿ). ಅಷ್ಟರಲ್ಲೇ ಮೊಬೈಲ್ ಫೋನ್ ಹಾವಳಿ ಜೋರಾಗಿತ್ತು. ಈಗ ಅಲ್ಲೂ ಮಂದಗತಿಯಲ್ಲಿದೆ. –ಭೂಪಾಲಿ