ಥಾಯ್ಲೆಂಡ್: ರಾಜಕೀಯ ಅಸ್ಥಿರತೆಯಲ್ಲಿದ್ದ ಥಾಯ್ಲೆಂಡ್ (Thailand) ಸಂಸತ್ ಶುಕ್ರವಾರ (ಆ.16) ದೇಶದ ಮಾಜಿ ಪ್ರಧಾನಿ ಥಾಕ್ಸಿನ್ ಶಿನವತ್ರಾ ಅವರ ಕಿರಿಯ ಪುತ್ರಿ ಪೇಟೊಂಗ್‌ಟರ್ನ್ ಶಿನವತ್ರಾ(37ವರ್ಷ) ಅವರನ್ನು ನೂತನ ಪ್ರಧಾನಿಯನ್ನಾಗಿ ಆಯ್ಕೆ ಮಾಡಿರುವುದಾಗಿ ವರದಿ ತಿಳಿಸಿದೆ.
ಸುಮಾರು 15 ವರ್ಷಗಳ ಕಾಲ ದೇಶದಿಂದ ಸ್ವಯಂ ಗಡಿಪಾರುಗೊಂಡಿದ್ದ ಥಾಕ್ಸಿನ್ ಶಿನವತ್ರಾ ಕಳೆದ ವರ್ಷ ಥಾಯ್ಲೆಂಡ್ ಗೆ ಮರಳಿದ್ದರು. ಇದೀಗ ಪೇಟೋಂಗ್ ಟರ್ನ್ ಶಿನವತ್ರಾ ಕುಟುಂಬದಿಂದ ಥಾಯ್ಲೆಂಡ್ ಗೆ ಆಯ್ಕೆಯಾದ ಮೂರನೇ ನಾಯಕಿಯಾಗಿದ್ದಾರೆ ಎಂದು ವರದಿ ವಿವರಿಸಿದೆ.
ತಂದೆ ಥಾಕ್ಸಿನ್ ಶಿನವತ್ರಾ ಥಾಯ್ಲೆಂಡ್ ಪ್ರಧಾನಿಯಾಗಿದ್ದು, ನಂತರ ಪೇಟೋಂಗ್ ಟರ್ನ್ ಚಿಕ್ಕಮ್ಮ ಯಿಂಗ್ ಲುಕ್ ಶಿನವತ್ರಾ ಪ್ರಧಾನಿಯಾಗಿದ್ದು, ಪ್ರಸ್ತುತ ಸ್ವಯಂ ಆಗಿ ಲಂಡನ್ ಗೆ ಗಡಿಪಾರುಗೊಂಡಿದ್ದಾರೆ. ಈಕೆ ದಿ ಫ್ಯೂ ಥಾಯ್ ಪಕ್ಷದ ಮುಖಂಡರಾಗಿದ್ದಾರೆ. ಆದರೆ ಯಿಂಗ್ ಲುಕ್ ಚುನಾಯಿತ ಸದಸ್ಯೆಯಲ್ಲ.
ನೈತಿಕತೆ ಉಲ್ಲಂಘನೆ ಆರೋಪದಲ್ಲಿ ಎರಡು ದಿನಗಳ ಹಿಂದೆ ಸಾಂವಿಧಾನಿಕ ಕೋರ್ಟ್ ಹಾಲಿ ಪ್ರಧಾನಿ ಫೂಮ್ತಂ ವೇಚಯಾಚೈ ಅವರನ್ನು ಹುದ್ದೆಯಿಂದ ವಜಾಗೊಳಿಸಿತ್ತು. ಥಾಯ್ಲೆಂಡ್ ಸಂಸತ್ ನಲ್ಲಿ ನಡೆದ ಮತದಾನದಲ್ಲಿ ಪೇಟೋಂಗ್ ಟರ್ನ್ ಬಹುಮತ ಪಡೆದಿರುವುದಾಗಿ ವರದಿ ತಿಳಿಸಿದೆ.
ಒಂದು ವೇಳೆ ಪೇಟೋಂಗ್ ಟರ್ನ್ ಅವರ ಆಯ್ಕೆಗೆ ಸಂಸತ್ ಅಂಗೀಕಾರ ನೀಡಿದರೆ, ಪೇಟೋಂಗ್ ಟರ್ನ್ ಥಾಯ್ಲೆಂಡ್ ನ ಎರಡನೇ ಮಹಿಳಾ ಪ್ರಧಾನಿಯಾಗಲಿದ್ದಾರೆ. ಅಲ್ಲದೇ ಈಕೆ ದೇಶದ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ ಎಂದು ವರದಿ ವಿವರಿಸಿದೆ.