ಚಿತ್ರದುರ್ಗ: ರಾಜ್ಯದಲ್ಲಿ ಮದ್ಯನಿಷೇಧ ಜಾರಿಗೆ ಒತ್ತಾಯಿಸಿ ಹಮ್ಮಿಕೊಂಡ ಬೆಂಗಳೂರು ಚಲೋ ಪಾದಯಾತ್ರೆಗೆ ಶನಿವಾರ ಚಿತ್ರದುರ್ಗದಲ್ಲಿ ಚಾಲನೆ ನೀಡಲಾಯಿತು.
19 ರಿಂದ 30 ರವರೆಗೆ ಪಾದಯಾತ್ರೆ ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಯ ಸುಮಾರು 3 ಸಾವಿರ ಮಹಿಳೆಯರು ಪಾಲ್ಗೊಂಡಿದ್ದಾರೆ. ಚಿತ್ರದುರ್ಗದ ವಿಜ್ಞಾನ ಕಾಲೇಜು ಕ್ರೀಡಾಂಗಣದಲ್ಲಿ ಮದ್ಯ ನಿಷೇಧ ಆಂದೋಲನದ ವತಿಯಿಂದ ಬೃಹತ್ ಸಮಾವೇಶ ನಡೆಯಿತು. ಸಮಾವೇಶಕ್ಕೆ ನಾಡಿನ ವಿವಿಧ ಮಠಾಧೀಶರು ಚಾಲನೆ ನೀಡಿದರು. ಸಮಾವೇಶದ ನಂತರ ಮಧ್ಯಾಹ್ನ 2 ಗಂಟೆಗೆ ಪಾದಯಾತ್ರೆ ಆರಂಭಗೊಂಡಿತು. ಪಾದಯಾತ್ರೆ 30ರಂದು ಬೆಂಗಳೂರುತಲುಪಲಿದೆ.
ಸರಕಾರ ಮದ್ಯ ನಿಷೇಧಿಸಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ಮದ್ಯ ನಿಷೇಧಿಸಬೇಕು. 2.20 ಲಕ್ಷ ಕೋಟಿ ರೂ.ಗಳ ಬಜೆಟ್ ನಲ್ಲಿ ಶೇ.8ರಂತೆ 18 ಸಾವಿರ ಕೋಟಿ ರೂ.ಗಳು ಮಾತ್ರ ಮದ್ಯ ಮಾರಾಟದಿಂದ ಸರ್ಕಾರಕ್ಕೆ ಆದಾಯ ಬರುತ್ತಿದೆ. ಮದ್ಯ ಮಾರಾಟದಿಂದ ಬರುವ ಆದಾಯಕ್ಕಿಂತ ಜನರ ಔಷಧೋಪಚಾರಗಳಿಗೆ ಸರ್ಕಾರ ಮಾಡುವ ಖರ್ಚು ಹೆಚ್ಚಾಗಿದೆ. ಸರ್ಕಾರದ ಎಲ್ಲ ಅಗ್ಗದ ಯೋಜನೆಗಳನ್ನು ಹಿಂದಕ್ಕೆ ಪಡೆದು ಮದ್ಯಪಾನ ನಿಷೇಧಿಸಲಿ ಎಂದು ಸ್ವಾಮೀಜಿಗಳು ಒತ್ತಾಯಿಸಿದರು.
ಸತತ 12 ದಿನಗಳ ಕಾಲ ಸಾವಿರಾರು ಮಹಿಳೆಯರು ಮದ್ಯಪಾನ ನಿಷೇಧ ಮಾಡುವಂತೆ ಒತ್ತಾಯಿಸಿ ಪಾದಯಾತ್ರೆ ಮಾಡುತ್ತಾರೆಂದರೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಎಲ್ಲ ಮಠ ಮಾನ್ಯಗಳು ಮದ್ಯ ನಿಷೇಧಕ್ಕೆ ಬೆಂಬಲವಾಗಿ ನಿಲ್ಲಲಿವೆ. ಮೂರು ವರ್ಷಗಳಿಂದ ಮದ್ಯ ನಿಷೇಧಿಸುವಂತೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದರೂ ಏನೂ ಪ್ರಯೋಜನವಾಗಿಲ್ಲ. ಪಾದಯಾತ್ರೆ ಬೆಂಗಳೂರಿಗೆ ಬರುವ ತನಕ ಕಾಯುವುದು ಬೇಡ ಎನ್ನುವ ಸಲಹೆ, ಸೂಚನೆಗಳನ್ನು ಸ್ವಾಮೀಜಿಗಳು ಸರ್ಕಾರಕ್ಕೆ ನೀಡಿದರು.
ಡಾ ಶಿವಮೂರ್ತಿ ಮುರುಘಾ ಶರಣರು, ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ತೋಟಂದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ, ಶಿವಾಲಿಂಗಾನಂದ ಸ್ವಾಮೀಜಿ, ಮುಸ್ಲಿ ಧರ್ಮಗುರು ಖಾಜಿ ಸೈಯ್ಯದ್ ಶಂಶುದ್ದೀನ್ ಹುಸೇನಿ, ಕ್ರೈಸ್ತ ಧರ್ಮ ಗುರು ಫಾದರ್ ಎಂ.ಎಸ್. ರಾಜು, ಮದ್ಯ ನಿಷೇಧ ಆಂದೋಲನ ಕರ್ನಾಟಕ ರಾಜ್ಯ ಸಮಿತಿ ಸದಸ್ಯೆ ಸ್ವರ್ಣ ಭಟ್ ಇತರರು ಪಾಲ್ಗೊಂಡಿದ್ದರು.
ನಿಷೇಧಿಸಿದರೆ ಸಿದ್ಧಗಂಗಾ ಶ್ರೀಗಳಿಗೆ ರಾಷ್ಟ್ರಪ್ರಶಸ್ತಿ ನೀಡಿದಂತೆ
ರಾಜ್ಯ ಸರ್ಕಾರ ಮದ್ಯ ನಿಷೇಧಿಸಿದರೆ ಸಿದ್ಧಗಂಗಾ ಶ್ರೀಗಳಿಗೆ ರಾಷ್ಟ್ರ ಪ್ರಶಸ್ತಿ ನೀಡಿದಂತೆ ಎಂದು ಸಾಣೇಹಳ್ಳಿ ತರಳಬಾಳು ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದಟಛಿಗಂಗಾ ಶ್ರೀಗಳು ಬೇಗ ಗುಣಮುಖರಾಗಬೇಕಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದು, ಈ ನಾಡಿಗೆ ಅವರ ಸೇವೆ, ಮಾರ್ಗದರ್ಶನ ಅಗತ್ಯವಿದೆ ಎಂದರು. ಪ್ರಶಸ್ತಿಗಾಗಿ ಸಿದಟಛಿಗಂಗಾ ಸ್ವಾಮೀಜಿ ಎಂದೂ ಆಸೆ ಪಟ್ಟವರಲ್ಲ. ಅವರು ಕಣ್ಣುಮುಚ್ಚುವ ಮುನ್ನ ಮದ್ಯ ನಿಷೇಧ ಮಾಡಲಿ. ಮದ್ಯಪಾನ ನಿಷೇಧಿಸಿದರೆ ಸಿದ್ಧಗಂಗಾ ಶ್ರೀಗಳು ಸಂತೃಪ್ತರಾಗುತ್ತಾರೆ ಎಂದು ಹೇಳಿದರು.