Advertisement

ಪಾದೂರು: ಅರಣ್ಯ ಇಲಾಖೆ ಬೋನಿಗೆ ಬಿದ್ದ ಚಿರತೆ

12:10 AM Jan 25, 2020 | Sriram |

ಕಾಪು: ಮಜೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪಾದೂರು ಗ್ರಾಮದ ಕೂರಾಲು ಪರಿಸರದಲ್ಲಿ ಜನರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಶುಕ್ರವಾರ ಮುಂಜಾನೆ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.ರಾತ್ರಿಯ ವೇಳೆ ಜನವಸತಿ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಚಿರತೆಯಿಂದಾಗಿ ಗ್ರಾಮದ ಜನರು ತೀವ್ರವಾಗಿ ಆತಂಕಕ್ಕೊಳಗಾಗಿದ್ದರು. ಮಾತ್ರವಲ್ಲದೇ ಚಿರತೆ ಸಾಕು ಪ್ರಾಣಿಗಳ ಮೇಲೂ ಧಾಳಿ ನಡೆಸಿದ್ದ ಪರಿಣಾಮ ಸ್ಥಳೀಯರು ಭಯಭೀತರಾಗುವಂತಾಗಿತ್ತು.

Advertisement

ಇಲ್ಲಿ ಕೆಲವು ತಿಂಗಳಿನಿಂದ ಚಿರತೆ ಓಡಾಟ ಕಂಡು ಬಂದಿದ್ದು, ಹಲವು ಸಾಕು ನಾಯಿಗಳು, ಮೇಯಲು ಬಿಟ್ಟಿದ್ದ ದನ ಕರುಗಳ ಮೇಲೆ ಧಾಳಿ ನಡೆಸಿ ಪರಾರಿಯಾಗಿತ್ತು. ಈ ಬಗ್ಗೆ ಸ್ಥಳೀಯರು ಮತ್ತು ಪ್ರತ್ಯಕ್ಷದರ್ಶಿಗಳು ನೀಡಿದ ದೂರಿನ ಮೇರೆಗೆ ಕಾಪು ಉಪವಲಯ ಅರಣ್ಯ ಅಧಿಕಾರಿ ನಾಗೇಶ್‌ ಬಿಲ್ಲವ ಅವರು ಸಿಬಂದಿಗಳ ಜೊತೆಗೂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೂರಾಲು ರೆನ್ನಿ ಕುಂದರ್‌ ಅವರ ಮನೆ ಬಳಿ ಚಿರತೆಗಾಗಿ ಬೋನನ್ನು ಇರಿಸಿದ್ದರು.

ಗುರುವಾರ ರಾತ್ರಿ ಅವರ ಮನೆ ಎಂದಿನಂತೆ ಬೇಟೆ ಅರಸಿಕೊಂಡು ಬಂದ ಚಿರತೆ ಆಹಾರಕ್ಕಾಗಿ ಬೋನಿನೊಳಗೆ ಪ್ರವೇಶಿಸಿದ್ದು, ಬಳಿಕ ಬೋನಿನಿಂದ ಹೊರ ಬರಲಾಗದೇ ಒಳಗೆ ಸಿಲುಕಿಕೊಂಡಿದೆ. ಶುಕ್ರವಾರ ಬೆಳಗ್ಗೆ ಚಿರತೆ ಬೋನಿನೊಳಗೆ ಬಿದ್ದ ವಿಚಾರವನ್ನು ಸ್ಥಳೀಯರು ಮಜೂರು ಗ್ರಾ.ಪಂ. ಅಧ್ಯಕ್ಷ ಸಂದೀಪ್‌ ರಾವ್‌ ಅವರಿಗೆ ತಿಳಿಸಿದ್ದು, ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದರು. ಅರಣ್ಯ ರಕ್ಷಕರಾದ ಜಯರಾಮ್‌ ಶೆಟ್ಟಿ ,ಮಂಜುನಾಥ್‌, ಅಭಿಲಾಶ್‌ಕಾಪು ಉಪವಲಯ ಅರಣ್ಯಾಧಿಕಾರಿ ನಾಗೇಶ್‌ ಬಿಲ್ಲವ, ಅರಣ್ಯ ರಕ್ಷಕರಾದ ಜಯರಾಮ್‌ ಶೆಟ್ಟಿ, ಮಂಜುನಾಥ್‌ ನಾಯ್ಕ, ಅಭಿಲಾಷ್‌ ಮೊದಲಾದವರು ಆಗಮಿಸಿ ಬೋನು ಸಮೇತವಾಗಿ ಚಿರತೆಯನ್ನು ಸರಕ್ಷಿತ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದಿದ್ದಾರೆ. ಮಜೂರು ಗ್ರಾ.ಪಂ. ಅಧ್ಯಕ್ಷ ಸಂದೀಪ್‌ ರಾವ್‌, ಉಪಾಧ್ಯಕ್ಷೆ ಸಹನಾ ತಂತ್ರಿ, ತಾ.ಪಂ. ಸದಸ್ಯ ಶಶಿಪ್ರಭಾ ಶೆಟ್ಟಿ ಸಹಿತ ನೂರಾರು ಮಂದಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ವೀಕ್ಷಿಸಿದರು.

ವರ್ಷದೊಳಗೆ ಬೋನಿಗೆ ಬಿದ್ದ ಎರಡನೇ ಚಿರತೆ :
ಕಳೆದ ವರ್ಷ ಆಗಸ್ಟ್‌ 3 ರಂದು ಇದೇ ಪ್ರದೇಶದಲ್ಲಿ ಚಿರತೆಯೊಂದನ್ನು ಅರಣ್ಯ ಇಲಾಖೆಯು ಬೋನು ಇರಿಸಿ ಸೆರೆ ಹಿಡಿದಿತ್ತು. ಇದೀಗ ಮತ್ತೆ ಒಂದು ಚಿರತೆ ಬೋನಿಗೆ ಬಿದ್ದಿದ್ದು, ಅದರ ಜತೆಗೆ 2 ಮರಿಗಳು ಇದ್ದವು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಚಿರತೆಯನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಿದ ಬಳಿಕ, ಬೋನನ್ನು ಮತ್ತೆ ತಂದು ಇರಿಸುವುದಾಗಿ ಅರಣ್ಯ ಇಲಾಖೆಯ ಸಿಬಂದಿಗಳು ತಿಳಿಸಿದ್ದಾರೆ ಎಂದು ಮಜೂರು ಗ್ರಾ.ಪಂ. ಅಧ್ಯಕ್ಷ ಸಂದೀಪ್‌ ರಾವ್‌ ಉದಯವಾಣಿಗೆ ತಿಳಿಸಿದ್ದಾರೆ.

ಇಲಾಖೆಯೊಂದಿಗೆ ಸಹಕರಿಸಿ
ಸುಮಾರು 5 ವರ್ಷ ಪ್ರಾಯದ ಹೆಣ್ಣು ಚಿರತೆ ಇದಾಗಿದ್ದು, ಬೋನಿಗೆ ಬಿದ್ದ ಚಿರತೆಯನ್ನು ಕೊಲ್ಲೂರು ಮೂಕಾಂಬಿಕಾ ಅರಣ್ಯಕ್ಕೆ ಬಿಡಲಾಗಿದೆ. ಚಿರತೆಯ ಮರಿಗಳು ಇರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಮರಿ ಚಿರತೆಗಳ ಸೆರೆಗಾಗಿ ಮತ್ತೂಂದು ಕಡೆಯಲ್ಲಿ ಬೋನು ಇರಿಸಲಾಗುವುದು. ಚಿರತೆಯ ಬಗ್ಗೆ ಸಾರ್ವಜನಿಕರು ಭಯಭೀತರಾಗದೇ, ಇಲಾಖೆಯೊಂದಿಗೆ ಸಹಕರಿಸುವ ಅಗತ್ಯವಿದೆ ಎಂದು ಕಾಪು ವಲಯ ಉಪ ಅರಣ್ಯಾಧಿಕಾರಿ ನಾಗೇಶ್‌ ಬಿಲ್ಲವ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next