ಪಡುಪಣಂಬೂರು: ಜನಸಂಖ್ಯೆಯ ಆಧಾರದಲ್ಲಿ ಪಡುಪಣಂಬೂರು ಗ್ರಾಮ ಪಂಚಾಯತ್‌ನಲ್ಲಿ ಶೇ. 40 ಮಂದಿ ಮಾತ್ರ ಕುಡಿಯುವ ನೀರಿನ ಸಂಪರ್ಕ ಪಡೆದಿದ್ದು, ಉಳಿದವರು ವೈಯಕ್ತಿಕವಾಗಿ ಕೊಳವೆ ಬಾವಿ ಹಾಗೂ ತೆರೆದ ಬಾವಿಯನ್ನು ಅವಲಂಬಿಸಿದ್ದಾರೆ. ನೀರಿನ ಸಂಪರ್ಕದಲ್ಲಿ ಸಾಕಷ್ಟು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದರು ಸಹ ಮೇ, ಜೂನ್ ತಿಂಗಳಿನಲ್ಲಿ ಸಮಸ್ಯೆ ಸ್ಥಳೀಯವಾಗಿ ಕಾಡುವುದು ಸಹಜವಾಗಿದೆ.
ಪಡುಪಣಂಬೂರು ಗ್ರಾ.ಪಂ.ನ ಬೆಳ್ಳಾಯರು, 10ನೇ ತೋಕೂರು, ಪಡುಪಣಂಬೂರು ಗ್ರಾಮದ 5 ವಾರ್ಡ್‌ನಲ್ಲಿಯೂ ಪ್ರತ್ಯೇಕವಾಗಿ ಐದು ಕುಡಿಯುವ ನೀರಿನ ನಿರ್ವಹಣೆಯ ಸಮಿತಿ ಕಾರ್ಯಾಚರಿಸುತ್ತಿವೆ. ಬೆಳ್ಳಾಯರು ಗ್ರಾಮದಲ್ಲಿ ಹೆಚ್ಚಿನ ಜನ ನಳ್ಳಿ ನೀರನ್ನೇ ಆಶ್ರಯಿಸಿದ್ದಾರೆ. ಈ ಹಿಂದೆ ಸಮಸ್ಯೆ ಇತ್ತಾದರೂ ಇದೀಗ ಕಿನ್ನಿಗೊಳಿಯ ಬಹುಗ್ರಾಮ ಯೋಜನೆಯ ಸಂಪರ್ಕ ಸಿಕ್ಕಿರುವುದರಿಂದ ಬೇಸಗೆಯ ಅಂತ್ಯದಲ್ಲಿ ನೀರಿನ ಸಮಸ್ಯೆ ಉಲ್ಬಣಿಸುತ್ತದೆ.
10ನೇ ತೋಕೂರಿನಲ್ಲಿ ನೀರಿನ ನಿರ್ವಹಣೆ ಹಾಗೂ ಅಂರ್ತಜಲ ವೃದ್ಧಿಗೆ ಪಂಚಾಯತ್ ಸಾಕಷ್ಟು ಮುಂಜಾಗ್ರತೆ ವಹಿಸಿದೆ. ಇಲ್ಲಿ ಎರಡು ವಿಶ್ವಬ್ಯಾಂಕ್ ಯೋಜನೆ ಸಮಿತಿಯ ಮೂಲಕ ನೀರಿನ ನಿರ್ವಹಣೆ ನಡೆಯುತ್ತಿದೆ. ಈ ಭಾಗದಲ್ಲಿ ಕಳೆದ ವರ್ಷ ಎರಡು ಕಿಂಡಿ ಅಣೆಕಟ್ಟು ಇತ್ತು ಪ್ರಸ್ತುತ ವರ್ಷದಲ್ಲಿ ಮೂರು ಅಣೆಕಟ್ಟುಗಳು ಸೇರ್ಪಡೆಗೊಂಡು ನೀರಿನ ಒಳ ಅರಿವನ್ನು ಹೆಚ್ಚಿಸಲು ಅನುಕೂಲವಾಗಿದೆ.
ಪಡುಪಣಂಬೂರು ಪಂಚಾಯತ್‌ನ ನೀರಿನ ಬವಣೆ ನಿವಾರಿಸಲು ನೂತನವಾಗಿ ಟ್ಯಾಂಕ್ ನಿರ್ಮಾಣ ಹಂತದಲ್ಲಿದೆ. ಸದ್ಯ ನೀರಿನ ಸಮಸ್ಯೆ ಸೂಕ್ತವಾಗಿ ಬಗೆಹರಿಸಲು ಸಾಧ್ಯವಾಗಿ ಲ್ಲ. ಇದೇ ಪ್ರದೇಶದ ಕಲ್ಲಾಪು ಪ್ರದೇಶದಲ್ಲಿ ಉಪ್ಪು ನೀರಿನ ಅಂಶವು ಎಪ್ರಿಲ್, ಮೇ ತಿಂಗಳಿನಲ್ಲಿ ಕಾಡುವುದರಿಂದ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಕಾಣಬೇಕಿದೆ.
ಶಾಶ್ವತ ಪರಿಹಾರಕ್ಕೆ ಕ್ರಮ
ಗ್ರಾಮದಲ್ಲಿ ನೀರಿನ ಸಮಸ್ಯೆಯನ್ನು ಶಾಶ್ವತ ಪರಿಹಾರಕ್ಕಾಗಿ ಕಿಂಡಿಅಣೆಕಟ್ಟನ್ನು ನರೇಗಾ ಯೋಜನೆಯಲ್ಲಿ ರೂಪಿಸಲಾಗಿದೆ. ನೀರಿನ ಟ್ಯಾಂಕ್‌ನ್ನು ಎಂಆರ್ ಪಿಎಲ್ ಸಂಸ್ಥೆಯಿಂದ ಪಡೆದಿದೆ. ಕೆರೆ ಅಭಿವೃದಿಗೆ ಪಂಚಾಯತ್ ಗೆ ಅನುದಾನದ ಕೊರತೆ ಇದ್ದು, ನರೇಗಾದಿಂದಲಾದರೂ ನಡೆಸುವ ಬಗ್ಗೆ ಪ್ರಯತ್ನ ಸಾಗಿದೆ.
– ಮೋಹನ್‌ದಾಸ್, ಅಧ್ಯಕ್ಷರು,
ಪಡುಪಣಂಬೂರು ಗ್ರಾ. ಪಂ.
ಮಳೆ ಕೊಯ್ಲು ಕಡ್ಡಾಯ
ಗ್ರಾ.ಪಂ. ವ್ಯಾಪ್ತಿಯಲ್ಲಿ ಜಲ ಸಂರಕ್ಷಣೆಗಾಗಿ ಹೊಸದಾಗಿ ಮನೆ ಕಟ್ಟಲು ಅನುಮತಿ ಪಡೆಯುವವರು ಮಳೆ ಕೊಯ್ಲು ಮಾಡುವುದು ಕಡ್ಡಾಯಗೊಳಿಸಿಲಾಗಿದೆ. ಇತರ ಅನುದಾನ ಬಳಸಿ ಕೆರೆ ಅಭಿವೃದ್ಧಿ ಪಡಿಸುವ ಸಾಧ್ಯತೆ ಇದೆ. ಗರಿಷ್ಠ ಪ್ರಮಾಣದಲ್ಲಿ ನೀರಿನ ಸಮಸ್ಯೆ ಬಗೆಹರಿದಿದೆ.
– ಅನಿತಾ ಕ್ಯಾಥರಿನ್
ಪಿಡಿಒ, ಪಡುಪಣಂಬೂರು ಗ್ರಾ. ಪಂ.
ಶಾಶ್ವತ ಪರಿಹಾರ
ಪಂಚಾಯತ್ ವ್ಯಾಪ್ತಿಯ 7 ಕೆರೆಗಳು ಸುಸ್ಥಿತಿಯಲ್ಲಿವೆ. ಇದರಿಂದ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಹಾಗೂಜಲ ಮರುಪೂರಣ ಯೋಜನೆ ರೂಪಿಸಲು ಸಾಧ್ಯವಾಗಲಿದೆ. ನೀರಿನ ಸಂಪರ್ಕವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ, ಮಳೆ ಕೊಯ್ಲು ಬಗ್ಗೆ ಪಂಚಾಯತ್ ಇನ್ನಷ್ಟು ಹೆಚ್ಚು ಜಾಗೃತಿ ಮೂಡಿಸುವ ಅವಶ್ಯಯಿದೆ.
ನರೇಂದ್ರ ಕೆರೆಕಾಡು