Advertisement

ಚೈತನ್ಯ ಮಂದಿರದಲ್ಲಿ ದತ್ತ ಜಯಂತಿ

03:26 PM Dec 22, 2018 | Team Udayavani |

ಸರ್ವ ಗುರುಗಳ ಪಾದುಕೆಗಳು ಇಲ್ಲಿ ಒಂದೇ ಸೂರಿನಡಿ ಇವೆ. ಸದ್ಗುರುಗಳ ಪಾದುಕೆಗಳ ಪೂಜೆ ಮತ್ತು ದರ್ಶನಕ್ಕಾಗಿ ರೂಪಿಸಲಾಗಿರುವ ಏಕೈಕ ಮಂದಿರ, “ಶ್ರೀ ಸದ್ಗುರು ಚೈತನ್ಯ ಮಂದಿರ’. ಇದು, ಬೆಂಗಳೂರಿನ ಉತ್ತರಹಳ್ಳಿ- ಕೆಂಗೇರಿ ಮುಖ್ಯ ರಸ್ತೆಯ ತುರಹಳ್ಳಿ ಬಳಿಯ ಪಟಾಲಮ್ಮ ದೇಗುಲದ ಸಮೀಪದಲ್ಲಿ ಇದೆ. ದೇಶದಲ್ಲೇ ಸದ್ಗುರುಗಳ ಪಾದುಕೆಗಳ ಪೂಜೆಗೆಂದು ನಿರ್ಮಿತವಾದ ಏಕೈಕ ಮಂದಿರವಿದು. 

Advertisement

ಇಲ್ಲಿ ದೇಗುಲ ಸ್ಥಾಪನೆ ಆಗಿದ್ದು ತೀರಾ ಇತ್ತೀಚೆಗೆ. ಅದು 2009ನೇ ಇಸವಿ. ಬೆಂಗಳೂರಿಗೆ ಶೃಂಗೇರಿ ಮಠದ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಪಾದಾರ್ಪಣೆ ಆಯಿತು. ಆಗ ಕೆ.ಎನ್‌. ವೆಂಕಟನಾರಾಯಣ ಅವರು ಗುರು­ಗಳಲ್ಲಿ, ಸದ್ಗುರು ಪಾದುಕೆಗಳನ್ನು ಅನುಗ್ರಹ ಮಾಡಬೇಕೆಂದು ಪ್ರಾರ್ಥಿಸಿಕೊಂಡಾಗ ಜಗದ್ಗುರುಗಳು ತಾವು ಭಗವತಿಯಲ್ಲಿ ಪ್ರಾರ್ಥಿಸಿ ತಿಳಿಸುತ್ತೇವೆ ಎಂದರು. 2 ದಿನಗಳ ನಂತರ ಗುರುಗಳೇ ಪೂಜೆ ಮಾಡಿರುವಂಥ 
ಪಾದುಕೆ­ಗಳನ್ನು ಅನುಗ್ರಹಿಸಲು ನಿರ್ಧರಿಸಿದರು. ಈ ಪಾದುಕೆಗಳನ್ನು ಯಾರೂ ಧರಿಸು­ವಂತಿಲ್ಲ; ಗಾಣಗಾಪುರ ಸೇರಿದಂತೆ ಭಾರತದ 48 ದತ್ತ ಕ್ಷೇತ್ರಗಳಲ್ಲಿ ಪೂಜೆ ಮಾಡಿಸಿದ ನಂತರವೇ ಈ ಪಾದುಕೆಗಳನ್ನು ಸ್ಥಾಪಿಸಬೇಕು ಎಂದು ಗುರುಗಳು ಆದೇಶಿಸಿದರು. ಗುರುಗಳಿಂದ ಪಾದುಕೆಯನ್ನು ಅನುಗ್ರಹ ಪಡೆದ ನಂತರ ಅವರ ಆದೇಶ ದಂತೆ ಪಾದುಕಾ ಯಾತ್ರೆ ಶುರುವಾಯಿತು. ಗಾಣಗಾಪುರ, ಔದುಂ­ಬರ, ವಾಡಿ, ಸಜ್ಜನಘಡ,  ಗೋಂದಾವಳಿ, ಶಿರಡಿ, ತಿರುವ­ಣ್ಣಾ­ಮಲೈ ಮುಂತಾದ 48 ಕ್ಷೇತ್ರಗಳಿಗೆ ಗುರು-ಬಂಧು­ಗಳೊಡಗೂಡಿ ಪಾದುಕಾ ಯಾತ್ರೆ ಯಶಸ್ವಿಯಾಯಿತು. 

2009ರ ಡಿಸೆಂಬರ್‌ನಲ್ಲಿ, 14 ದಿನಗಳ ಅಭೂತಪೂರ್ವ­ವಾದ ಶ್ರೀ ಸದ್ಗುರು ಪಾದುಕಾ ಯಜ್ಞವು ಶಂಕರಮಠದ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಅಚ್ಚರಿ ಎಂಬಂತೆ, 21 ಅವಧೂತರು ಧರಿಸಿರುವಂಥ ಪಾದುಕೆಗಳು ಈ ಕಾರ್ಯಕ್ರಮಕ್ಕೆ ಲಭ್ಯವಾಯಿತು. ತತ್‌ಕ್ಷಣದಲ್ಲೇ ಎಲ್ಲರ ಮನಸ್ಸಿಗೆ ಬಂದ ವಿಷಯ, ಒಂದೇ ಸೂರಿನಡಿ ಈ ಎಲ್ಲಾ ಗುರು ಚೈತನ್ಯಗಳನ್ನು ಪಾದುಕೆಯ ಮೂಲಕ ಆರಾಧಿಸುವ ಅವಕಾಶ ದೊರಕಿಸಲು ಪಾದುಕಾ ಮಂದಿರ ನಿರ್ಮಾಣವಾಯಿತು.

ಏನಿದೆ ಇಲ್ಲಿ?
108 ಗುರುಗಳ ಪಾದುಕೆಗಳನ್ನು ತಲಾ ಒಂದೊಂದು ಪ್ರತ್ಯೇಕ ಕಬೋìರ್ಡ್‌ಗಳಲ್ಲಿ, ಆಯಾ ಗುರುಗಳ ಭಾವಚಿತ್ರದ ಸಮೇತ ಇರಿಸಲಾಗಿದೆ. ಅವಧೂತ ಪರಂಪರೆ, ಮಠಾಧೀಶರ ಪರಂಪರೆ ಮತ್ತು ಸಮಾಜ ಸುಧಾರಕರ ಪರಂ­ಪರೆಯನ್ನು ಬೆಳಗಿದ ಮಹಾಮಹಿಮರ ಪಾದುಕೆ­ಗಳನ್ನು ಏಕಕಾಲಕ್ಕೆ ದರ್ಶನ ಮಾಡಿಸುವ ಈ ಯತ್ನ ಶ್ಲಾಘನೀಯ.

ಯಾರ್ಯಾರ ಪಾದುಕೆಗಳು?
ಶೃಂಗೇರಿ ಶಾರದಾ ಪೀಠದ ಗುರುಗಳಾದ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳು, ಅಭಿನವ ತೀರ್ಥ ಸ್ವಾಮಿಗಳು, ಹಾಲಿ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು, ಹತ್ತಾರು ಅವಧೂತರು, ಸ್ವಾಮಿ ವಿವೇಕಾನಂದ, ರಾಮಕೃಷ್ಣ  ಪರಮಹಂಸ, ಶ್ರೀ ಶಿರಡಿ ಸಾಯಿಬಾಬಾ, ಸತ್ಯಸಾಯಿ ಬಾಬಾ ಸೇರಿದಂತೆ ಒಟ್ಟು 108 ಮಂದಿ ಅಧ್ಯಾತ್ಮ ಗುರುಗಳ ಪಾದುಕೆಗಳು ಇಲ್ಲುಂಟು. ಹಲವು ಪಾದುಕೆಗಳನ್ನು ಸ್ವತಃ ಆ ಸದ್ಗುರುಗಳೇ ಬಳಸಿರುವುದು ವಿಶೇಷ. ಮತ್ತೆ ಕೆಲವುಗಳನ್ನು ಮೂಲ ಗುರುಸನ್ನಿಧಿಯಲ್ಲಿ ಸ್ಪರ್ಶಿಸಿ, 48 ದಿನಗಳ ಮಂಡಲ ಪೂಜೆ ನೆರವೇರಿಸಿ, ತಂದಿರಿಸಲಾಗಿವೆ.

Advertisement

ಅತ್ಯಂತ ಶುಭ್ರ ಪರಿಸರ
ವಿಶಾಲವಾದ ಸಭಾಂಗಣದಲ್ಲಿ 8 ಸಾಲುಗಳ, ಪ್ರತಿ ಸಾಲಿನಲ್ಲಿ 10- 12 ಗುರುಗಳ ಪಾದುಕೆಗಳನ್ನು ಇರಿಸಲಾ­ಗಿದೆ. ಪ್ರಶಾಂತ ವಾತಾವರಣ, ಶುಭ್ರ ಪರಿಸರದಲ್ಲಿ ನಡೆ ಯುತ್ತಾ ಸದ್ಗುರುಗಳ ಪಾದುಕೆಗಳನ್ನು ಕಣ್ತುಂಬಿ­ಕೊಳ್ಳುವ ಅನುಭವ ವರ್ಣಿಸಲಸದಳ. ಅಧ್ಯಾತ್ಮ ಅಂಗಳ­ದ­ಲ್ಲೊಂದು ಭಾವದ ಸ್ತುತಿಯಂತೆ ಭಾಸವಾಗುವುದು ಖಂಡಿತ. 

ದತ್ತಾತ್ರೇಯರನ್ನು ಏಕೆ ಪೂಜಿಸಬೇಕು?
ದತ್ತಾತ್ರೇಯರು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರ ಅವತಾರಿ. ಅವಧೂತ ಸಂಪ್ರದಾಯದ ಮೂಲ ಗುರು ಅಂತಲೇ ಅವರನ್ನು ನಂಬಲಾಗಿದೆ. ಮಹಾನ್‌ ಯೋಗಿ­ಗಳಾದ ಇವರ ಸುತ್ತಲೂ ಚತುರ್ವೇದಗಳ ಗುರುತಾಗಿ ನಾಲ್ಕು ಶ್ವಾನಗಳಿದ್ದು ಜೊತೆಗೆ ಒಂದು ಹಸುವನ್ನೂ ಕಾಣ­ಬಹುದಾಗಿದೆ. ಇವರು ಔದುಂಬರ ವೃಕ್ಷದಲ್ಲಿ ನೆಲೆಸಿರು­ತ್ತಾರೆ ಎಂಬ ವಿಷಯವು ಸರ್ವವೇದ್ಯ. ಮಂದಿರದ ಎದುರು ಭಾಗದಲ್ಲಿ ಹಸಿರು ತುಂಬಿರುವಂಥ ಘಮಘಮಿ­ಸುವ ಪುಷ್ಪಗಳ ದತ್ತವನ ನಿರ್ಮಾಣವಾಗಿದೆ. ಈ ವನದಲ್ಲಿ ಅನೇಕ ಗೋವುಗಳಿದ್ದು ಭಕ್ತರಿಗೆ ಗೋ ಪೂಜೆ, ಗೋ ದಾನ ಮುಂತಾದ ಅನೇಕ ಸೇವೆ ಸಲ್ಲಿಸಲು ಅವಕಾಶವಿರುತ್ತದೆ. 

ಪಾದುಕಾ ಮಹತ್ವ
ಗುರುವಿನ ಪಾದ ದೈವಸಮಾನ. ದೇವಾನು ದೇವತೆಗಳ ಪಾದದಷ್ಟೇ ಶ್ರೇಷ್ಠ. ದೇವರ ಆರಾಧನೆ- ದೇವರೊಡನೆ ಭಾವ- ಅಧ್ಯಾತ್ಮದ ಅನುಸಂಧಾನ ವುಳ್ಳ ಋಷಿಮುನಿಗಳ ಪಾದಗಳಿಗೂ ಅಗ್ರಮಾನ್ಯತೆ. ಅವುಗಳ ಪೂಜೆಯಲ್ಲೇ ಭಕ್ತರ ಧನ್ಯತೆ. ಅದುವೇ ಜೀವನದ ಸಾರ್ಥಕತೆ. ಶ್ರೀಪಾದ, ಗುರುಪಾದ, ತ್ರಿವಿಕ್ರಮ ಪಾದ, ರಾಮಪಾದ, ವಿಠuಲನ ಪಾದ…ಒಂದೇ,ಎರಡೇ? ಎಲ್ಲವೂ ಪೂಜಿಪ ಪಾದಗಳೇ. “ಗುರುವಿನ  ಗುಲಾಮನಾಗುವ ತನಕ ದೊರೆಯ ದಣ್ಣ  ಮುಕುತಿ’ ಎಂಬಂತೆ ಗುರುವಿನ ಪಾದಕ್ಕೆ ಎರಗುವುದರಲ್ಲೇ ಧನ್ಯತಾಭಾವ.

ಏನಿದೆ ವಿಶೇಷ ಕಾರ್ಯಕ್ರಮ?
ಚೈತನ್ಯ ಮಂದಿರದಲ್ಲಿ ಡಿ.22ರಂದು ಶ್ರೀ ದತ್ತಾತ್ರೇಯರ ಮತ್ತು ಶ್ರೀ ಶ್ರೀಧರ ಸ್ವಾಮಿಗಳವರ ಜಯಂತಿ ಜರುಗಲಿದೆ. ಈ ಪ್ರಯುಕ್ತ ವೇದಪಾರಾಯಣವನ್ನು ಆಯೋಜಿಸಲಾಗಿದೆ. ವೇದಬ್ರಹ್ಮಶ್ರೀ ಪ್ರಶಾಂತ್‌ ಭಟ್‌ ಮತ್ತು ಶಿಷ್ಯ ವೃಂದದವರು ನಡೆಸಿಕೊಡಲಿದ್ದಾರೆ. ಶ್ರೀ ವಿದ್ವಾನ್‌ ಯೋಗೀಶ್‌ ಅವರಿಂದ ಪ್ರವಚನ ಇರಲಿದೆ. ಇದೇ ವೇಳೆ, ಕೆಂಗೇರಿ ಚಕ್ರಪಾಣಿ ಅವರ ಸಂಗ್ರಹದ ಒಂದು ಸಾವಿರಕ್ಕೂ ಮೇಲ್ಪಟ್ಟು ಕರ್ನಾಟಕ ಪ್ರಾಚೀನ ದೇಗುಲಗಳ ಛಾಯಾಚಿತ್ರ ಪ್ರದರ್ಶನವನ್ನೂ ಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗೆ:www.padukamandira.com

ಇಲ್ಲಿದೆ ಗಣೇಶ ಪ್ರಪಂಚ
ಸಂಸ್ಥೆಯ ನಿರ್ವಾಹಕ ಟ್ರಸ್ಟಿ ಆದಿತ್ಯ ಪ್ರಕಾಶ್‌, 15 ವರ್ಷಗಳಿಂದ ಸಂಗ್ರಹಿಸಿದ ಗಣಪತಿಯ ಸಂಗ್ರಹವನ್ನು ಸದ್ಗುರು ಚೈತನ್ಯ ಮಂದಿರಕ್ಕೆ ದಾನ ನೀಡಿದ್ದಾರೆ. ಗಣಪತಿಯನ್ನು ಕೇವಲ ಮೂರ್ತಿ ರೂಪದಲ್ಲಷ್ಟೇಅಲ್ಲದೇ, ಪರಬ್ರಹ್ಮ ಸ್ವರೂಪನಾಗಿ ಕಾಣಬೇಕೆಂಬುದರ ಉದ್ದೇಶದಿಂದ ಈ ಗಣೇಶ ಪ್ರಪಂಚವನ್ನು ಸ್ಥಾಪಿಸಲಾಯಿತು. 2500ಕ್ಕೂ ಹೆಚ್ಚು ಗಣೇಶ
ಪ್ರತಿಮೆಗಳು ಇಲ್ಲಿವೆ.

ಸುಮಾ ಚಂದ್ರಶೇಖರ್‌

Advertisement

Udayavani is now on Telegram. Click here to join our channel and stay updated with the latest news.

Next