ಪಡುಬಿದ್ರಿ: ಒಂದು ಊರು – ಒಂದು ಟ್ರಸ್ಟ್ – ಒಂದು ಮನೆ ನಡುವೆ ನ್ಯಾಯ ತೀರ್ಮಾನಕ್ಕಾಗಿ ನ್ಯಾಯಾಲಯ ಮೆಟ್ಟಿಲೇರಿರುವ ಪ್ರಸಂಗ ಹಾಗೂ ಒಂದು ಬಣದ ಊರವರ ತೀರ್ಮಾನದಂತೆ ಜ. 7ರಂದು ನಡೆಯಬೇಕಿದ್ದ ಪಡುಬಿದ್ರಿ ಪಡುಹಿತ್ಲು ಜಾರಂದಾಯ ದೈವದ ನೇಮೋತ್ಸವಕ್ಕೆ ಅಡ್ಡಿಯೊದಗಿದ ಪ್ರಸಂಗವು ವರದಿಯಾಗಿದೆ.
ನ್ಯಾಯಾಲಯದಲ್ಲಿದ್ದ ಮಧ್ಯಾವಧಿ ತಡೆಯಾಜ್ಞೆ ತೆರವಾದ ಕಾರಣ ದೈವಸ್ಥಾನದ ಒಳ ಪ್ರವೇಶಿಸದಂತೆ ದೈವಸ್ಥಾನದ ಮನೆಯವರ ಬಣವು ಅಲ್ಲಿನ ಬಾಗಿಲುಗಳಿಗೆ ಬೀಗ ಜಡಿದಿದೆ.
ಇದನ್ನೂ ಓದಿ:“ಇದು ಬೆಳಕಲ್ಲಾ… 100 ದಿನದ ದರ್ಶನ… ʼಕಾಂತಾರʼ 100 ದಿನ ಪೊರೈಸಿದ ಸಂತಸದಲ್ಲಿ ರಿಷಬ್ ಶೆಟ್ಟಿ
ಬೀಗ ತೆರೆಸಬೇಕಾದುದು ತಮ್ಮಕಾರ್ಯ ವ್ಯಾಪ್ತಿಗೆ ಬರುವುದಿಲ್ಲ. ಕಾನೂನು ಸುವ್ಯವಸ್ಥೆಯನ್ನಷ್ಟೇ ನಾವು ಪಾಲಿಸುತ್ತೇವೆ. ಬೀಗ ತೆಗೆಸುವುದು ನ್ಯಾಯಾಲಯದ ಆದೇಶಕ್ಕೊಳ ಪಡುವ ವಿಚಾರವಾಗಿರುವುದಾಗಿ ಕಾಪು ವೃತ್ತ ನಿರೀಕ್ಷಕ ಪೂವಯ್ಯ ತಿಳಿಸಿದ್ದಾರೆ. ಸ್ಥಳದಲ್ಲಿ ರಿಸರ್ವ್ ಪೊಲೀಸ್ ನ ಒಂದು ತುಕುಡಿ ಬೀಡು ಬಿಟ್ಟಿದೆ.
ದೈವಸ್ಥಾನದ ಮನೆಯಲ್ಲಿ ಪಡುಹಿತ್ಲು ಜಾರಂದಾಯ ಸೇವಾ ಟ್ರಸ್ಟ್ ನ ನಿರ್ಮಾತೃ ದಿ| ಜಯ ಪೂಜಾರಿ ಅವರ ಉತ್ತರಕ್ರಿಯೆಯ ಕ್ರಮಗಳು ನಡೆಯುತ್ತಿವೆ. ದೈವಕೋಲ ನಡೆಸಲಾಗದೇ 1500 ಮಂದಿಯ ಊಟದ ಸಿದ್ಧತೆಯೊಂದಿಗೆ ಊರವರ ಒಂದು ಪಕ್ಷವು ನ್ಯಾಯಕ್ಕಾಗಿ ಕಾದಿದೆ.
ದಿ| ಜಯ ಪೂಜಾರಿ ಕುಟುಂಬವು ಮುಂದಿನ ಜ. 12ರಂದು ಶುದ್ಧ ತಂಬಿಲ, ನಾಗನ ಅರಾಧನೆ, ದೈವಸ್ಥಾನ ಶುದ್ಧಗೊಳಿಸಿ ಜ. 13ರಂದು ನೇಮೋತ್ಸವ ನಡೆಸೋಣ. ಊರವರೂ ಸಹಕರಿಸಲಿ ಎಂಬ ಆಶಯ ವ್ಯಕ್ತಪಡಿಸಿದೆ. ಸದ್ಯ ಪಡುಹಿತ್ಲುವಿನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.