ಪಡುಬಿದ್ರಿ: ಮತದಾನವು ನಮಗೆ ನೀಡಲ್ಪಟ್ಟ ಸಂವಿಧಾನದತ್ತ ಹಕ್ಕು. ಅದನ್ನು ಮರೆಯದೇ ಚಲಾಯಿಸಬೇಕು ಎಂದು ಉಡುಪಿ ಜಿಲ್ಲಾ ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖಾ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್ ಹೇಳಿದರು.
ಅವರು ಪಡುಬಿದ್ರಿಯ ಮಾರುಕಟ್ಟೆ ಪ್ರದೇಶದಲ್ಲಿ ಮಾ. 28ರಂದು ಭಾರತದ ಚುನಾವಣಾ ಆಯೋಗ ಮತ್ತು ಉಡುಪಿ ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಮತದಾನ ಜಾಗೃತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ಉಡುಪಿ ತಾ| ಸಿಡಿಪಿಒ ವೀಣಾ ಮಾತನಾಡಿದರು. ಅಂಗನವಾಡಿ ಮೇಲ್ವಿಚಾರಕಿ ಶಕುಂತಳಾ, ಪಡುಬಿದ್ರಿ ಪಿಡಿಒ ಪಂಚಾಕ್ಷರಿ ಸ್ವಾಮಿ ಉಪಸ್ಥಿತರಿದ್ದರು. ಪಡುಬಿದ್ರಿ ಭಾಗದ ಅಂಗನವಾಡಿ ಸಹಾಯಕಿಯರು ಮದುವೆ ಮನೆಯ ಮದುವಣಗಿತ್ತಿಯರಾದರೂ ಮತದಾನ ಮಾಡಲು ಮರೆಯದಿರಿ ಎಂದು ಬಿಂಬಿಸುವಂತಹ ಬೀದಿ ನಾಟಕ ಪ್ರದರ್ಶಿಸಿ ಮತದಾನದ ಜಾಗೃತಿ ಮೂಡಿಸಿದರು. ನೆರೆದಿದ್ದ ಸಾರ್ವಜನಿಕರಿಗೆ, ಮಹಿಳೆಯರಿಗೆ ಮತದಾನ ಜಾಗೃತಿ ಕುರಿತಾದ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
ತೋಟಗಾರಿಕೆ ಇಲಾಖಾಧಿಕಾರಿ ಹಾಗೂ ಸ್ವೀಪ್ ಸಮಿತಿಯ ಸೆಕ್ಟರ್ ಅಫೀಸರ್ ನಿಧೀಶ್ ವಿದ್ಯುನ್ಮಾನ ಮಂತಯಂತ್ರ ಕುರಿತ ಪ್ರಾತ್ಯಕ್ಷಿಕೆ, ಸಾರ್ವಜನಿಕರಿಗೆ ಮತದಾನ ಮಾಡುವ ಮತ್ತು ಮತಯಂತ್ರದಲ್ಲಿ ನಾವು ಯಾರಿಗೆ ಮತದಾನ ಮಾಡಿರುವುದಾಗಿನ ಮಾಹಿತಿಯನ್ನು ನೀಡುವ ವಿವಿ ಪ್ಯಾಟ್ ಯಂತ್ರದ ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು. ಪಡುಬಿದ್ರಿ ಪೇಟೆಯಿಂದ ಪಡುಬಿದ್ರಿ, ಮುದರಂಗಡಿ, ಶಿರ್ವ, ಕಾಪು ಹಾಗೂ ಮೂಡಬೆಟ್ಟುಗಳ ಅಂಗನವಾಡಿ, ಆಶಾ ಕಾಯಕರ್ತೆಯರು, ಶಿಶು ಅಭಿವೃದ್ಧಿ ಇಲಾಖಾ ಸಹಾಯಕಿಯರಿಂದ ಮತದಾನದ ಮಹತ್ವದ ಜಾಗೃತಿ ಮೂಡಿಸುವ ಜಾಥಾವನ್ನು ಪಡುಬಿದ್ರಿ ಮಾರುಕಟ್ಟೆಯವರೆಗೆ ನಡೆಸಿದರು.ಪಡುಬಿದ್ರಿ ಪಿಡಿಒ ಪಂಚಾಕ್ಷರಿ ಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.