ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಎರ್ಮಾಳು ಕಲ್ಸಂಕ ಪ್ರದೇಶದಲ್ಲಿ ರವಿವಾರ ಅಪರಾಹ್ನ ಮತ್ತೆ ತಾಸುಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಯಿತು.
ರವಿವಾರ ಮದುವೆ ಸಮಾರಂಭಗಳು ಅಧಿಕ ಇದ್ದು, ವಾಹನ ಸಂಚಾರ ಹೆಚ್ಚಿದ್ದುದರಿಂದ ಟ್ರಾಫಿಕ್ ಜಾಮ್ ಕಾಣಿಸಿಕೊಂಡಿದೆ. ತಾಸುಗಟ್ಟಲೆ ಹೊತ್ತು ಕಾದು ನಿಧಾನವಾಗಿ ವಾಹನಗಳು ಚಲಿಸಬೇಕಾಗಿ ಬಂದಿದ್ದರಿಂದ ವಿಮಾನ ನಿಲ್ದಾಣ, ರೈಲು ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ತೊಂದರೆ ಅನುಭವಿಸಿದರು.
ಪಡುಬಿದ್ರಿಯಲ್ಲಿ ಫ್ಲೈಓವರ್ ಅಥವಾ ಅಂಡರ್‌ಪಾಸ್ ನಿರ್ಮಾಣಗೊಂಡಿಲ್ಲ. ಅಪೂರ್ಣ ಕಾಮಗಾರಿಯ ನಡುವೆ ವಾಹನಗಳು ಶಿಸ್ತಿನಿಂದ ಸಂಚರಿಸದೆ ನಾಮುಂದು ತಾಮುಂದು ಎಂದು ನುಗ್ಗುವುದು ಆಗಾಗ ಟ್ರಾಫಿಕ್ ಜಾಮ್ ಉಂಟಾಗಲು ಕಾರಣವಾಗಿದೆ. ಸಂಚಾರದ ವ್ಯವಸ್ಥಿತ ನಿರ್ವಹಣೆಗೆ ಖಾಯಂ ಪೊಲೀಸ್ ಸಿಬಂದಿಯನ್ನು ನಿಯೋಜಿಸದಿರುವುದು, ಟ್ರಾಫಿಕ್ ಜಾಮ್ ಉಂಟಾದಾಗ ವಿಳಂಬವಾಗಿ ಪೊಲೀಸ್ ಸಿಬಂದಿ ಆಗಮಿಸುವುದು ಸಮಸ್ಯೆ ಇನ್ನಷ್ಟು ಹೆಚ್ಚಲು ಕಾರಣವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಪೊಲೀಸ್ ಸಿಬಂದಿ ಸಕಾಲದಲ್ಲಿ ಆಗಮಿಸಿ ರಸ್ತೆ ನಿಯಮ ಮೀರಿ ಮುನ್ನುಗ್ಗುವವರ ವಿರುದ್ಧ ಕ್ರಮ ಕೈಗೊಳ್ಳಲು ಆರಂಭಿಸಿದಲ್ಲಿ ಈ ಸಮಸ್ಯೆ ಬಗೆಹರಿಯಬಹುದು. ಸ್ಥಳದಲ್ಲಿ ಪೊಲೀಸರು ಇಲ್ಲದೆ ಇರುವುದರಿಂದ ವಾಹನ ಸವಾರರ ನಡುವೆಯೇ ಆಗಾಗ ವಾಕ್ಸಮರ ನಡೆದು ಮತ್ತಷ್ಟು ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಪಡುಬಿದ್ರಿ ಕಲ್ಸಂಕ ಪ್ರದೇಶದ ನೂತನ ಕಿರುಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಎರ್ಮಾಳಿನ ಈ ಪ್ರದೇಶದಲ್ಲಿ ಪ್ರಯಾಣಿಕರಿಗೆ ನಿತ್ಯ ಸಮಸ್ಯೆಯುಂಟಾಗುತ್ತಿದೆ. ಧೂಳಿನಿಂದಾಗಿ ಪರಿಸರ ಮಾಲಿನ್ಯವೂ ಆಗುತ್ತಿದೆ ಎಂದು ಎರ್ಮಾಳು ಗ್ರಾಮಸ್ಥರು ಆರೋಪಿಸುತ್ತಾರೆ.