Advertisement

Padubidri:15 ಲಕ್ಷ ರೂ. ಪಡೆದು ಮರಳಿಸದೆ ಜೀವಬೆದರಿಕೆ; ಪ್ರಕರಣ ದಾಖಲು

08:31 PM Dec 15, 2024 | Team Udayavani |

ಪಡುಬಿದ್ರಿ: ಟೊಯೋಟಾ ಕಂಪೆನಿಗೆ ಕಾರನ್ನು ಖರೀದಿಸಿ ನೀಡುವ ಮೂಲಕ ತಿಂಗಳಿಗೆ ಸಾಲದ ಕಂತು ಕಡಿತಗೊಳಿಸಿದ ಬಳಿಕ 1 ಲಕ್ಷ ರೂ. ಗಳಿಕೆಯ ಆಮಿಷವೊಡ್ಡಿ ಪಡುಬಿದ್ರಿಯ ಗಂಗಾಧರ ಗಾಂಧಿ ಅವರನ್ನು ನಂಬಿಸಿ, ಅವರಿಂದ ಹಾಗೂ ಇನ್ನಿಬ್ಬರಿಂದ ಒಟ್ಟು 15 ಲಕ್ಷ ರೂ.ಗಳನ್ನು ಪಡೆದು ಮೋಸ ಮಾಡಿ ಜೀವ ಬೆದರಿಕೆ ಹಾಕಿರುವ ಕುರಿತಾಗಿ ಬಿಜಾಪುರದ ಕಾರು ಚಾಲಕ ನಾಮದೇವ ತವರಟ್ಟೆ ಹಾಗೂ ಆತನ ಸಹೋದರನ ವಿರುದ್ಧ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಡಿ. 15ರಂದು ಪ್ರಕರಣ ದಾಖಲಾಗಿದೆ.

Advertisement

ಪಡುಬಿದ್ರಿ ಸುಜ್ಲಾನ್‌ ಕಾಲನಿ ನಿವಾಸಿ ಗಂಗಾಧರ ಗಾಂಧಿ ಅವರು ಸರಕಾರೇತರ ಸಂಸ್ಥೆ ಎನ್‌ಎಸ್‌ಸಿಡಿಎಫ್‌ನ ಅಧ್ಯಕ್ಷರಾಗಿದ್ದು, 2022ರಲ್ಲಿ ಬಿಜಾಪುರದಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಕಾರು ಚಾಲಕನಾಗಿ ಆರೋಪಿ ನಾಮದೇವನ ಪರಿಚಯವಾಗಿತ್ತು. ಆತ ತಾನು 4 ಟೊಯೋಟಾ ಕಾರುಗಳನ್ನು ಖರೀದಿಸಿ ಟೊಯೋಟಾ ಕಂಪೆನಿಗೇ ಗುತ್ತಿಗೆಗೆ ನೀಡಿದ್ದು, ತಿಂಗಳಿಗೆ 4 ಲಕ್ಷ ರೂ. ಬರುತ್ತಿರುವುದಾಗಿ ಹೇಳಿದ್ದ. ನೀವೂ ಹೀಗೆ ಕಾರನ್ನು ನೀಡುವುದಾದಲ್ಲಿ ತಿಂಗಳಿಗೆ ಒಂದು ಲಕ್ಷ ರೂ. ಅನಾಯಾಸವಾಗಿ ಖಾತೆಗೆ ಜಮೆಯಾಗುತ್ತಿರುತ್ತದೆ ಎಂದು ಗಂಗಾಧರ ಗಾಂಧಿ ಅವರನ್ನು ನಂಬಿಸಿದ್ದ.

ಅದರಂತೆ 2024ರ ಆಗಸ್ಟ್‌ ತಿಂಗಳಲ್ಲಿ ದೂರುದಾರ ಗಂಗಾಧರ ಗಾಂಧಿ ಸಹಿತ ಸರಕಾರೇತರ ಸಂಸ್ಥೆಯ ಮಂಗಳೂರು ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಹಾಗೂ ವಕ್ತಾರೆ, ಮುಂಬಯಿ ನಿವಾಸಿ ಮಮತಾ ಕೋಟ್ಯಾನ್‌ ಎನ್ನುವವರ ಜತೆ ಸೇರಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮೂಲಕ ನಾಮದೇವ ತವರಟ್ಟೆಗೆ 15 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದರು. ಬಳಿಕ ತಿಂಗಳುಗಳು ಕಳೆದರೂ, ಯಾವೊಂದೂ ಆದಾಯದ ಸುಳಿವಿಲ್ಲದ ಕಾರಣದಿಂದ ಆರೋಪಿಯನ್ನು ಸಂಪರ್ಕಿಸಿದಾಗ ಆತ ನಿಮಗೆ ಚಿಂತೆ ಬೇಡ. ನಾನು ಟೊಯೋಟಾ ಆಡಳಿತ ನಿರ್ದೇಶಕ ಅಶೋಕ್‌ ಪಾಟೀಲ್‌ ಅವರೊಂದಿಗೆ ಮಾತನಾಡಿಸುವುದಾಗಿ ಹೇಳಿದ್ದ.

ಆದರೆ ಆತ ಅಶೋಕ್‌ ಪಾಟೀಲ್‌ ಎಂದು ನಂಬಿಸಿ ಆತನ ತಮ್ಮ ಶ್ರವಣ್‌ ಕುಮಾರ್‌ ತವರಟ್ಟೆಯೊಂದಿಗೆ ಮಾತನಾಡಿಸಿ ಮೋಸ ಮಾಡಿದ್ದ. ಮತ್ತೆ ಮತ್ತೆ ಸಂಪರ್ಕಿಸತೊಡಗಿದಾಗ ಗಂಗಾಧರ ಗಾಂಧಿ ಅವರಿಗೆ ನಿಮ್ಮನ್ನು ಬಿಟ್ಟು ಬೇರೆ ಯಾರೂ ಹಣ ವಾಪಸು ಕೇಳಿಲ್ಲ. ಎಲ್ಲ ವ್ಯವಸ್ಥೆಯಾಗುವುದಾಗಿ ಹೇಳಿದ್ದ. ಆದರೂ ಮುಂದೆಯೂ ವಿಚಾರಿಸತೊಡಗಿದಾಗ ನಿಮ್ಮ ಹಣವನ್ನು ವಾಪಸು ನೀಡುವುದಿಲ್ಲ. ಹಣ ಅಥವಾ ಕಾರನ್ನೇನಾದರೂ ಕೇಳಿದಲ್ಲಿ ನಿಮ್ಮ ಕತೆ ಮುಗಿಸುವುದಾಗಿ ಜೀವ ಬೆದರಿಕೆಯನ್ನೂ ನಾಮದೇವ ತವರಟ್ಟೆ ಒಡ್ಡಿರುವುದಾಗಿ ಗಂಗಾಧರ ಗಾಂಧಿ ಅವರು ಪಡುಬಿದ್ರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರವಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next