Advertisement

ಪಡುಬಿದ್ರಿ: ಕೊರಗ ಕುಟುಂಬಗಳಿಗೆ ಸೂರಿನ ಆಸರೆ

12:34 AM Feb 04, 2020 | Sriram |

ಪಡುಬಿದ್ರಿ ಬೀಡಿನ ಕೊರಗ ಸಮುದಾಯದ ಆರು ವರ್ಷಗಳ ಬೇಡಿಕೆ ಈಡೇರುವ ಸಮಯ ಕೂಡಿ ಬಂದಿದೆ. ಶಾಸಕರ, ಅಧಿಕಾರಿ ವರ್ಗದವರ ಪ್ರಯತ್ನದಿಂದ ಕೊರಗರಿಗೆ ಲಭ್ಯವಾಗಿದ್ದ 18 ಮನೆಗಳು ಉದ್ಘಾಟನೆಗೆ ಸಿದ್ಧವಾಗಿವೆ.

Advertisement

ಪಡುಬಿದ್ರಿ: ಇಲ್ಲಿನ ಬೀಡು ಬಳಿ ಬಿಡು ಒಕ್ಕಲುಗಳಾಗಿ ಅತಂತ್ರರಾಗಿದ್ದ ಕೊರಗ ಕುಟುಂಬಗಳು ಸ್ವಂತ ಸೂರು ಹೊಂದುವ ಕನಸು ಕೊನೆಗೂ ನನಸಾಗಿದೆ.

ಸುಜ್ಲಾನ್‌ ಪುನರ್ವಸತಿ ಕಾಲೋನಿ ಸಮೀಪ ಕಳೆದ 6 ವರ್ಷಗಳಿಂದ ಸ್ವಂತ ನಿವೇಶನ-ಮನೆಗೆ ನ್ಯಾಯಾಂಗ ಹೋರಾಟ ನಡೆಸಿದ್ದ ಕೊರಗ ಕುಟುಂಬಗಳಿಗೆ ನ್ಯಾಯ ಸಿಕ್ಕಿದ್ದು, ಹೊಸ ಮನೆಯಲ್ಲಿ ಜೀವನ ನಡೆಸಲು ಸಿದ್ಧವಾಗಿದ್ದಾರೆ. ಪಾದೆಬೆಟ್ಟು ಗ್ರಾಮದಲ್ಲಿ ಕುಟುಂಬಗಳಿಗೆ ಮಂಜೂರಾಗಿರುವ 95 ಸೆಂಟ್ಸ್‌ಗಳ ಡಿಸಿ ಮನ್ನಾ ಜಮೀನಿನಲ್ಲಿ 18 ಮನೆಗಳು ನಿರ್ಮಾಣವಾಗಿವೆ.

2.20 ಲಕ್ಷ ರೂ. ವೆಚ್ಚ
ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ತಲಾ 2.10 ಲಕ್ಷ ರೂ. ಹಾಗೂ ಸಿಂಡಿಕೇಟ್‌ ಬ್ಯಾಂಕ್‌ನ ಸಿಎಸ್‌ಆರ್‌ ನಿಧಿಯಿಂದ ತಲಾ 10 ಸಾವಿರ ರೂ. ಮೊತ್ತ ಸೇರಿಸಿ ಒಟ್ಟು 2.20 ಲಕ್ಷ ರೂ. ವೆಚ್ಚದಲ್ಲಿ ಮನೆಗಳ ನಿರ್ಮಾಣಕ್ಕೆ 2019 ಜನವರಿಯಲ್ಲಿ ಚಾಲನೆ ನೀಡಲಾಗಿತ್ತು. ಪ್ರತಿ ಮನೆಯ ಯೋಜನಾ ನಕಾಶೆಯಡಿ ಅಡುಗೆ ಮನೆ, ಡೈನಿಂಗ್‌ಹಾಲ್‌, ಮುಖ್ಯ ಪ್ರವೇಶ ದ್ವಾರಕ್ಕೆ ಹೊಂದಿಕೊಂಡಂತೆ ಲಿವಿಂಗ್‌ರೂಮ್‌, ಬೆಡ್‌ ರೂಂ, ಸ್ನಾನದ ಕೊಠಡಿ, ಟಾಯ್ಲೆಟ್‌ಗಳನ್ನು ನಿರ್ಮಿಸಲಾಗಿದೆ. ವಿದ್ಯುತ್‌ ಸಂಪರ್ಕವನ್ನೂ ಕಲ್ಪಿಸಲಾಗಿದೆ. ಶಾಸಕ ಲಾಲಾಜಿ ಮೆಂಡನ್‌ ಅವರ ಪ್ರಸ್ತಾವನೆಯಂತೆ ಲೋಕೋಪಯೋಗಿ ಇಲಾಖೆ 7.32ಲಕ್ಷ ರೂ. ವೆಚ್ಚದಲ್ಲಿ ಈ ಕಾಲನಿಗೆ ಕಾಂಕ್ರೀಟೀಕೃತ ರಸ್ತೆಯನ್ನೂ ನಿರ್ಮಿಸಿದೆ.

ಸ್ವಂತ ಶ್ರಮದಿಂದಲೇ ಮನೆ ಕಟ್ಟಿದರು!
ಜಿಲ್ಲಾಡಳಿತ, ನಿರ್ಮಿತಿ ಕೇಂದ್ರ, ರಾಜೀವ ಗಾಂಧಿ  ವಸತಿ ನಿಗಮ, ವಿವಿಧ ಇಲಾಖೆಗಳ ಸಹಯೋಗದಲ್ಲಿ ಡಾ| ಬಿ.ಆರ್‌ ಅಂಬೇಡ್ಕರ್‌ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಫ‌ಲಾನುಭವಿ ಕೊರಗ ಕುಟುಂಬದ 25 ಸದಸ್ಯರು ಮನೆ ನಿರ್ಮಾಣ ಕಾರ್ಯದ ತರಬೇತಿ ಪಡೆದಿದ್ದಾರೆ. ಹೀಗೆ ತರಬೇತಿ ಪಡೆದವರೇ ತಮ್ಮ ಪರಿಶ್ರಮದಿಂದ ಮನೆ ನಿರ್ಮಾಣ ಕಾರ್ಯದಲ್ಲಿ ಭಾಗಿಗಳಾಗಿದ್ದಾರೆ. ಈ ಮೂಲಕ 6 ತಿಂಗಳ ಉದ್ಯೋಗವನ್ನೂ ಪಡೆದಿದ್ದಾರೆ. ಮುಂದೆ ಸ್ವಶ್ರಮದಿಂದಲೇ ತಮ್ಮದೇ ನಿರ್ಮಾಣ ಕಾರ್ಯದಲ್ಲಿ ಭಾಗಿಗಳಾಗಿ 6 ತಿಂಗಳ ಉದ್ಯೋಗ ಪಡೆದಿದ್ದಾರೆ. ಪ್ರತಿಯೊಬ್ಬರಿಗೆ 400 ರೂ. ವೇತನವನ್ನು ಪಾವತಿಸಲಾಗಿದೆ.

Advertisement

ಪರಿಶಿಷ್ಟ ಪಂಗಡದ ಶೀಲಾ, ಕೂಕ್ರ, ಗೋಪಾಲ, ಮೆನ್ಪ, ಅಣ್ಣು, ವಿಜಯ, ಸೀಗೆ, ಪುದ್ದ, ಸುನೀತಾ, ಮಲ್ಲಿಕಾ, ವಸಂತಿ, ಗೀತಾ, ಶಶಿಕಲಾ, ಸುರೇಶ, ಮನೋಹರ, ದಯಾನಂದ, ತುಕಾರಾಮ, ಸುಮತಿ ಅವರ ಕುಟುಂಬಗಳಿಗೆ ಜಾಗವನ್ನು ಪ್ರಿಯಾಂಕಾ ಅವರು ಮಂಜೂರಾತಿ ಮಾಡಿದ್ದು ಹಕ್ಕುಪತ್ರವನ್ನೂ ಒದಗಿಸಿದ್ದರು.

ಕೊಳವೆ ಬಾವಿ ನಿರ್ಮಾಣವಾಗಿದ್ದು ಪಂಪ್‌ ಜೋಡಿಸಿ ಇಲ್ಲಿನ ಎಲ್ಲಾ ಮನೆಗಗಳಿಗೆ ನೀರು ಸರಬರಾಜಿನ ವ್ಯವಸ್ಥೆ ಕಲ್ಪಿಸುವ ಕೆಲಸ ಸಾಗಿದೆ. ಓವರ್‌ಹೆಡ್‌ ನೀರಿನ ಟ್ಯಾಂಕ್‌ ನಿರ್ಮಾಣ ಹಂತದಲ್ಲಿದ್ದು ನೀರಿನ ಪೈಪ್‌ಲೈನ್‌ ಅಳವಡಿಕೆ ಕೆಲಸ ನಡೆದಿದೆ. ಮನೆ ಬಾಗಿಲು-ಕಿಟಕಿ ಕೆಲಸ ಬಾಕಿ ಇದೆ. ಇಲ್ಲಿನ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಒದಗಿಸಬೇಕಾಗಿದೆ.

ಗುಡಿಸಲ ವಾಸಕ್ಕೆ ಮುಕ್ತಿ
ಸುಜ್ಲಾನ್‌ ಯೋಜನಾ ಪ್ರದೇಶದ ಜಮೀನಿನಲ್ಲಿನ ಗುಡಿಸಲುಗಳಲ್ಲಿ ಕೊರಗ ಕುಟುಂಬಗಳು ವಾಸವಿದ್ದವು. ಅವರನ್ನು ಒಕ್ಕಲೆಬ್ಬಿಸಲು ಸುಜ್ಲಾನ್‌ ಕಂಪೆನಿ ನ್ಯಾಯಾಲಯದ ಮೊರೆ ಹೋಗಿತ್ತು. ತೀರ್ಪು ಕಂಪೆನಿ ಪರವಾಗಿ ಬಂದಿದ್ದು, ಈ ವೇಳೆ ಎಲ್ಲ ಕುಟುಂಬಗಳಿಗೆ ಸೂರು ಕಲ್ಪಿಸಲು ಹಿಂದಿನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಯೋಜನೆ ರೂಪಿಸಿದ್ದರು. ಅದರಂತೆ ಮನೆಗಳು ನಿರ್ಮಾಣವಾಗಿದ್ದು ಗುಡಿಸಲ ವಾಸಕ್ಕೆ ಮುಕ್ತಿ ದೊರೆತಿದೆ.

ಕಾಮಗಾರಿ ಪೂರ್ಣ
ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಮನೆಗಳನ್ನು ನಿರ್ಮಿಸಲಾಗಿದೆ. ಹೆಚ್ಚಿನ ಕಾಮಗಾರಿಗಳು ಪೂರ್ಣಗೊಂಡಿವೆ. ಮನೆ ಮನೆಗಳಿಗೆ ನೀರು ಸಂಪರ್ಕ ಕಲ್ಪಿಸುವ ಕಾಮಗಾರಿ ಫೆ. 7 ರೊಳಗೆ ಪೂರ್ಣಗೊಳಿಸಲಾಗುವುದು. ಸ್ವ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮಲ್ಲಿಗೆ ಕೃಷಿ ಹಾಗೂ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯ ತೋಟಗಾರಿಕೆ ಇಲಾಖೆ ಮೂಲಕ ಮಳೆಗಾಲದಲ್ಲಿ ನಡೆಯಲಿದೆ.
– ವಿಶ್ವನಾಥ ಶೆಟ್ಟಿ ,
ಐಟಿಡಿಪಿ ತನಿಖಾ ಸಹಾಯಕರು

60 ಮಂದಿಯಿಂದ ಶ್ರಮ
ಮನೆ ನಿರ್ಮಾಣ ತರಬೇತಿ ಪಡೆದ 60 ಮಂದಿ ಈ ನಿರ್ಮಾಣ ಕಾರ್ಯದಲ್ಲಿ ಭಾಗಿಗಳಾಗಿದ್ದು ಕೆಲಸ ಪೂರ್ಣಗೊಳಿಸಿದ್ದಾರೆ.
– ಅರುಣ್‌ ಕುಮಾರ್‌,
ಯೋಜನೆ ನಿರ್ದೇಶಕರು,ನಿರ್ಮಿತಿ ಕೇಂದ್ರ

ಸಂತೋಷ
ಸ್ವಂತ ಮನೆ ನಿರ್ಮಾಣವಾಗಿರುವುದು ಸಂತೋಷವಾಗಿದೆ. ಹಿಂದಿನ ಸುಜ್ಲಾನ್‌ ಭೂಮಿಯಲ್ಲಿ ಫ‌ಲಭರಿತ ಹೈಬ್ರಿಡ್‌ ತೆಂಗಿನ ಮರಗಳಿದ್ದು, ಅವುಗಳನ್ನು ಇಲ್ಲಿ ತಂದು ನೆಡಲು ಇಲಾಖೆ ನಮ್ಮೊಂದಿಗೆ ಸಹಕರಿಸಬೇಕು.
– ಪುದ್ದು, ಯೋಜನೆ ಫ‌ಲಾನುಭವಿ

-ಆರಾಮ

Advertisement

Udayavani is now on Telegram. Click here to join our channel and stay updated with the latest news.

Next