ಪಡುಬಿದ್ರಿ : ಇತಿಹಾಸ ಪ್ರಸಿದ್ಧ ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ನಡೆಯುವ ದ್ವೈವಾರ್ಷಿಕ ನಡಾವಳಿ `ಢಕ್ಕೆಬಲಿ’ಗೆ ವಿದ್ಯುಕ್ತ ಚಾಲನೆಯು ಇಂದು ದೊರೆತಿದೆ. ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಿಂದ ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರಿಂದ ಇಂದಿನ ಮಂಡಲ ಹಾಕುವ ಢಕ್ಕೆಬಲಿಗಾಗಿ ವೈಭವದ ಹೊರಕಾಣಿಕೆಯು ಶ್ರೀ ಸನ್ನಿಧಿಯಲ್ಲಿ ಅರ್ಪಿತವಾಗಿದೆ.
ಹೊರೆ ಕಾಣಿಕೆ ಮೆರವಣಿಗೆಯು ಪಡುಬಿದ್ರಿಯ ಮುಖ್ಯ ಪೇಟೆಯಲ್ಲಿ ಸಾಗಿ ಶ್ರೀ ಖಡ್ಗೇಶ್ವರೀ ದೇವಿಯ ಸನ್ನಿಧಿಗೆ ತಲುಪಿದ್ದು ಸ್ಥಾನಿಗಳ, ಮಾನಿಗಳ, ಬ್ರಹ್ಮಸ್ಥಾನದ ಪಾತ್ರಿ ಮತ್ತು ಅರ್ಚಕ ವೃಂದದ ಸಮ್ಮುಖದಲ್ಲಿ ಢಕ್ಕೆಬಲಿ ಸೇವೆಗಳ ಸಾಂಗತಾ ಸಿದ್ಧಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಿದ ಬಳಿಕ ಬ್ರಹ್ಮಸ್ಥಾನದಲ್ಲಿ ಪುಷ್ಪಾಲಂಕಾರದ ಕಾರ್ಯಗಳು ಸಾಂಗವಾಗಿ ಆರಂಭಗೊಂಡವು.
ಈ ಢಕ್ಕೆಬಲಿ ಸೇವೆಗಳು ಇಂದಿನಿಂದ ಮಾ. ೧೧ರವರೆಗೆ ನಿರ್ದಿಷ್ಟ ದಿನಗಳಲ್ಲಿ ಮುಂದುವರಿಯಲಿದ್ದು ೩೭ ಸೇವೆಗಳು ಶ್ರೀ ಬ್ರಹ್ಮಸ್ಥಾನದಲ್ಲಿ ಸಂಪನ್ನಗೊಳ್ಳಳಿವೆ.
ಶ್ರೀ ದೇವಸ್ಥಾನದಲ್ಲಿ ಸರದಿ ಅರ್ಚಕ ವೈ. ಗುರುರಾಜ ಭಟ್ ಪ್ರಾರ್ಥನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸ್ ಕಿನ್ಯಕ್ಕ ಬಲ್ಲಾಳರು ಉಪಸ್ಥಿತರಿದ್ದರು. ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದ ಅರ್ಚಕ ವರ್ಗದ ಕೇಶವ ಆಚಾರ್ಯ, ರಘುಪತಿ ಆಚಾರ್ಯ, ಗುರುರಾಜ ಆಚಾರ್ಯ ನಂದಕುಮಾರ್ ಆಚಾರ್ಯ, ಪಾತ್ರಿಗಳಾದ ಸುರೇಶ್ ರಾವ್, ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಪರ ಆಡಳಿತ ನಿರ್ವಹಣೆಯ ಶ್ರೀ ವನದುರ್ಗಾ ಟ್ರಸ್ಟ್ ಪರ ಒಂದನೇ ಗುರಿಕಾರ ಹಾಗೂ ಅಧ್ಯಕ್ಷರಾಗಿರುವ ಕೊರ್ನಾಯ ಪದ್ಮನಾಭ ರಾವ್, ಪ್ರಧಾನ ಕಾರ್ಯದರ್ಶಿ ವೈ. ಎನ್. ರಾಮಚಂದ್ರ ರಾವ್, ಕೋಶಾಧಿಕಾರಿ ವೈ. ಸುರೇಶ್ ರಾವ್, ಗುರಿಕಾರರಾದ ಬಾಲಪ್ಪ ನಟರಾಜ ಪಿ. ಎಸ್., ಮುರುಡಿ ಜಗದೀಶ ರಾವ್, ಟ್ರಸ್ಟಿಗಳಾದ ಗುಡ್ಡೆ ವಿಠಲ ರಾವ್, ಪಿ. ಶ್ರೀನಿವಾಸ ರಾವ್, ಪಿ. ಎಸ್. ರಾಘವೇಂದ್ರ ರಾವ್, ರಾಘವೇಂದ್ರ ಬೈಲ ಹಾಗೂ ಊರ ಹತ್ತು ಸಮಸ್ತರು, ಸುಮಂಗಲಿಯರು ಈ ಮೆರವಣಿಗೆಯಲ್ಲಿ ಭಾಗವಹಿಸಿದರು.
ಸನ್ನಿಧಾನದ ಪಂಚವಾದ್ಯ, ದಿಡುಂಬು ಸಹಿತ ಚೆಂಡೆ ಮುಂತಾದ ಜನಪದೀಯ, ಸಾಂಪ್ರದಾಯಿಕ ವಾದ್ಯಗಳೊಂದಿಗೆ ಹೊರೆಕಾಣಿಕೆಯ ಮೆರವಣಿಗೆಯು ಬ್ರಹ್ಮಸ್ಥಾನದತ್ತ ಸಾಗಿ ಬಂತು.