Advertisement

25 ವರ್ಷಗಳಾದರೂ ಅಭಿವೃದ್ಧಿ  ಕಂಡಿಲ್ಲ ಬೆಳಪು ರೈಲು ನಿಲ್ದಾಣ

06:15 AM Aug 02, 2018 | Team Udayavani |

ಕಾಪು: ಉಡುಪಿ ಜಿಲ್ಲೆಯ ಪ್ರಮುಖ ಪಟ್ಟಣವಾಗಿ ರೂಪುಗೊಳ್ಳುತ್ತಿರುವ ಕಾಪು ತಾಲೂಕಿನಲ್ಲಿರುವ ಪಡುಬಿದ್ರಿ (ಬೆಳಪು) ರೈಲು ನಿಲ್ದಾಣ ರೈಲು ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. 

Advertisement

ಊರಿನ ಅಭಿವೃದ್ಧಿಗೆ ಪೂರಕವಾಗಿ ಈ ರೈಲು ನಿಲ್ದಾಣವನ್ನೂ ಮೇಲ್ದರ್ಜೆಗೇರಿಸಿ ಸಕಲ ಸೌಲಭ್ಯ ಕಲ್ಪಿಸಬೇಕು ಮತ್ತು ಹೆಚ್ಚಿನ ರೈಲುಗಳ ನಿಲುಗಡೆ ಮಾಡಬೇಕು ಎಂಬ ತೀವ್ರ ಬೇಡಿಕೆ ಇದ್ದರೂ ಅವೆಲ್ಲವೂ ಬೇಡಿಕೆಯಾಗಿಯೇ ಉಳಿದಿದೆ.  

ಮೇಲ್ದರ್ಜೆಗೇರಬೇಕಾದ ಅಗತ್ಯ
ಬೆಳಪು ರೈಲು ನಿಲ್ದಾಣಕ್ಕೆ ತಾಗಿಕೊಂಡಂತೆ ಕೇವಲ 100 ಮೀ. ದೂರದಲ್ಲಿ  ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ ಸ್ಥಾಪನೆಗೊಳ್ಳುತ್ತಿದೆ. ಇದರೊಂದಿಗೆ ಸುಸಜ್ಜಿತ ಸರಕಾರಿ ಪಾಲಿಟೆಕ್ನಿಕ್‌ ಕಾಲೇಜು ಕೂಡ ಬೆಳಪುವಿನಲ್ಲಿ ಸ್ಥಾಪನೆ ಯಾಗಲಿದೆ. ಸಣ್ಣ  ಕೈಗಾರಿಕೆಗಳ ಪಾರ್ಕ್‌ ಕೂಡ  ನಿರ್ಮಾಣವಾಗುತ್ತಿದ್ದು, ಇದಕ್ಕೆ ಕೊಂಡಿಯಾಗಿ ಹೊರ ರಾಜ್ಯದಿಂದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಉನ್ನತ ಶಿಕ್ಷಣ ಪಡೆಯಲಿರುವ ಅವಕಾಶ ವಿರುವುದರಿಂದ ಇಲ್ಲಿ ರೈಲು ನಿಲ್ದಾಣ ಮೇಲ್ದರ್ಜೆ ಗೇರಬೇಕಾದ ಅಗತ್ಯ ಹೆಚ್ಚಾಗಿದೆ. ರೈಲ್ವೇ ನಿಲ್ದಾಣ ವನ್ನು ಮೇಲ್ದರ್ಜೆಗೇರಿಸಿ ಎಲ್ಲ ರೈಲುಗಳ ನಿಲುಗಡೆಗೆ ಅವಕಾಶ ಮಾಡಿಕೊಡಬೇಕೆಂಬ ಬೇಡಿಕೆ ಇದೆ. 

ಹೆಚ್ಚಿನ ರೈಲು ನಿಲುಗಡೆಗೆ ಬೇಡಿಕೆ 
ಕೊಂಕಣ ರೈಲು ಆರಂಭವಾದ ವೇಳೆ 1991- 92ರಲ್ಲಿ ಈ ನಿಲ್ದಾಣ ನಿರ್ಮಾಣಗೊಂಡಿತ್ತು. ಸದ್ಯ ಇಲ್ಲಿ ಮಂಗಳೂರು – ಮಡಗಾವ್‌ ಪ್ಯಾಸೆಂಜರ್‌, ಮಂಗಳೂರು – ಮಡಗಾಂವ್‌ ಡೆಮೂ ರೈಲುಗಳು ನಿಲುಗಡೆಯಾಗುತ್ತಿವೆ. ಆದರೆ ಮತ್ಸéಗಂಧ, ಸಿಎಸ್‌ಟಿ ಎಕ್ಸ್‌ಪ್ರೆಸ್‌, ಬೆಂಗಳೂರು – ಕಾರವಾರ ಸಹಿತ ವಿವಿಧ ಪ್ರಮುಖ ರೈಲುಗಳಿಗೆ ನಿಲುಗಡೆ ನೀಡುತ್ತಿಲ್ಲ. ಈ ಬಗ್ಗೆ ವ್ಯಾಪಕ ಬೇಡಿಕೆ ಇದ್ದರೂ ರೈಲ್ವೇ ಸ್ಪಂದಿಸಿಲ್ಲ. 
 
ಪ್ರಧಾನಿಗೂ ಪತ್ರ ಬರೆಯಲಾಗಿತ್ತು. 
ಈ ಭಾಗದ ಜನರ ಬೇಡಿಕೆ ಬಗ್ಗೆ, ಬೆಳಪು – ಪಣಿಯೂರು ರೈಲು ಸ್ಟೇಷನ್‌ನಲ್ಲಿ ಮತ್ಸ Âಗಂಧ ಮತ್ತು ಬೆಂಗಳೂರು ರೈಲು ನಿಲುಗಡೆಗೆ ಅವಕಾಶ ಕಲ್ಪಿಸಿಕೊಡುವಂತೆ ಅಂದಿನ ಪ್ರಧಾನಿ ದೇವೇಗೌಡ ಅವರಿಗೆ ಸುತ್ತಲಿನ ಗ್ರಾ.ಪಂ.ಗಳು ನಿರ್ಣಯ ಕೈಗೊಂಡು ಇಲಾಖೆಗೆ ಕಳಿಸಿದ್ದವು. ಜತೆಗೆ ವಿವಿಧ ಜನಪ್ರತಿನಿಧಿಗಳಿಗೂ ಮನವಿ ಮಾಡಲಾಗಿತ್ತು¤. ಆದರೆ ಇಲಾಖೆ ವಿವಿಧ ಕಾರಣಗಳನ್ನು ನೀಡಿ ಬೇಡಿಕೆ ಮಾನ್ಯ ಮಾಡಿಲ್ಲ. 

ಸಂಪರ್ಕ ವ್ಯವಸ್ಥೆ ಇಲ್ಲ
ಬೆಳಪು ರೈಲು ನಿಲ್ದಾಣ ಸಂಪರ್ಕಿಸಲು ಅನುಕೂಲವಾಗುವಂತೆ ಇಲ್ಲಿ ಯಾವುದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ. ಪರಿಣಾಮ ರೈಲು ದರಕ್ಕಿಂತಲೂ ಹೆಚ್ಚು ರಿಕ್ಷಾ ಬಾಡಿಗೆ ತೆರಬೇಕಾಗುತ್ತದೆ. 

Advertisement

ಈಗ ಇರುವ ವ್ಯವಸ್ಥೆಗಳೇನು? 
ಪಡುಬಿದ್ರಿ ರೈಲು ನಿಲ್ದಾಣ ಬಿ ಕ್ಲಾಸ್‌ ದರ್ಜೆಯ ನಿಲ್ದಾಣ. ಸದ್ಯ ಇಲ್ಲಿ  ಟಿಕೆಟ್‌ ಕೌಂಟರ್‌, ಕ್ರಾಸಿಂಗ್‌ ವ್ಯವಸ್ಥೆ, ಶೌಚಾಲಯ, ಕುಳಿತುಕೊಳ್ಳುವ ಆಸನ, ಕುಡಿಯುವ ನೀರಿನ ವ್ಯವಸ್ಥೆಯಿದೆ. 18 ಬೋಗಿಗಳ ನಿಲುಗಡೆಗೆ ಪೂರಕವಾಗುವ ಫ್ಲಾಟ್‌ ಫಾರಂ ಇದೆ.  

ಏನೇನು ಬೇಕಾಗಿದೆ?  
ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆಯಾಗುವುದಿದ್ದಲ್ಲಿ ಅದಕ್ಕೆ ಪೂರಕವಾಗಿ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಕೌಂಟರ್‌ ಅಥವಾ ಟಿಆರ್‌ಎಸ್‌ ಸೌಲಭ್ಯ ಬೇಕಿದೆ. ಅದರೊಂದಿಗೆ ಕ್ಯಾಂಟೀನ್‌ ಸೌಲಭ್ಯ, ವಿಶ್ರಾಂತಿ ಕೊಠಡಿ, ಫ್ಲಾಟ್‌ ಫಾರಂ ವಿಸ್ತರಣೆ, ಪಾದಚಾರಿ ಮೇಲ್ಸೇತುವೆ ನಿರ್ಮಾಣವಾಗಿ ಬೇಕಿದೆ. ಮುಖ್ಯ ರಸ್ತೆಯಿಂದ ಸ್ಟೇಷನ್‌ವರೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಗಲೀಕರಣ ಸಹಿತ ಸುಸಜ್ಜಿತ ಸೌಕರ್ಯಗಳು ಸಿಗಬೇಕಿವೆೆ. 

ಹೋರಾಟ ಅನಿವಾರ್ಯ
ಬೆಳಪುವಿನಲ್ಲಿ ಎಕ್ಸ್‌ಪ್ರೆಸ್‌ ರೈಲುಗಳ ನಿಲಗಡೆಯಾಗಬೇಕೆಂಬ ಬೇಡಿಕೆ ಮಾತ್ರ ಇನ್ನೂ ಈಡೇರಿಲ್ಲ. ರೈಲು ಸ್ಟೇಷನ್‌ ಇನ್ನೂ ಕೂಡ ಮೇಲ್ದರ್ಜೆಗೇರಿಲ್ಲ. ಮೂಲ ಸೌಕರ್ಯವನ್ನೂ ಒದಗಿಸಿಲ್ಲ. ರೈಲು ಇಲಾಖೆ ನಮ್ಮ ಬೇಡಿಕೆಗಳನ್ನು ತಿರಸ್ಕರಿಸುತ್ತಲೇ ಬರುತ್ತಿದೆ. ಇದರ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದೆ.
ಡಾ| ದೇವಿಪ್ರಸಾದ್‌ ಶೆಟ್ಟಿ,
ಅಧ್ಯಕ್ಷರು, ಬೆಳಪು ಗ್ರಾಮ ಪಂಚಾಯತ್‌

ಅನುಮೋದನೆ ಬಳಿಕ ನಿರ್ಧಾರ 
ಈ ಸ್ಟೇಷನ್‌ನಲ್ಲಿ ಪ್ರತೀ ದಿನ ಪ್ಯಾಸೆಂಜರ್‌, ಡೆಮೂ ಹಾಗೂ ಪ್ರತೀ ಮಂಗಳವಾರ ಮತ್ತು ಶುಕ್ರವಾರ ವೇರಾವೆಲ್‌ – ತ್ರಿವೆಂಡ್ರಮ್‌ ಎಕ್ಸ್‌ಪ್ರೆಸ್‌ ರೈಲಿಗೆ ನಿಲುಗಡೆ ನೀಡಲಾಗುತ್ತಿದೆ. ಸೂಪರ್‌ ಫಾಸ್ಟ್‌ ರೈಲಿಗೆ ಪ್ರತೀ ನಿಲ್ದಾಣದ ನಡುವಿನ ಇಷ್ಟೇ ಅಂತರದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಿಕೊಡಬೇಕೆಂಬ ಇಲಾಖಾ ನಿರ್ದೇಶನಗಳಿವೆ. ರೈಲು ನಿಲುಗಡೆಯ ಬಗ್ಗೆ ಬೇಡಿಕೆ ಇರುವಲ್ಲಿ ಸಿಸಿಬಿಲಿಟಿ ಸರ್ವೇ ಮಾಡಿ, ರೈಲು ನಿಲುಗಡೆಯಿಂದ ಆಗುವ ಉಳಿತಾಯದ ಲೆಕ್ಕಾಚಾರ ಮಾಡಿ, ಅದರ ಬಗ್ಗೆ ವರದಿ ಸಿದ್ಧಪಡಿಸಿ ಅದನ್ನು ರೈಲು ಬೋರ್ಡ್‌ಗೆ ಅನುಮೋದನೆಗೆ ಕಳುಹಿಸಬೇಕಿದೆ. ಅಲ್ಲಿ ಅನುಮೋದನೆ ಬಳಿಕ ನಿರ್ಧಾರ ಸಾಧ್ಯವಿದೆ.  
– ಸುಧಾ ಕೃಷ್ಣಮೂರ್ತಿ, ಮೆನೇಜರ್‌ 
ಪಬ್ಲಿಕ್‌ ರಿಲೇಷನ್‌, ಕೊಂಕಣ ರೈಲ್ವೇ

– ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next