Advertisement
ವಿರೂಪವಾದ ಹೆದ್ದಾರಿ ಕಾರ್ಕಳದಿಂದ ಪಡುಬಿದ್ರೆ ಸಾಗುವ ಸುಮಾರು 29 ಕಿ.ಮೀ ಉದ್ದದ ರಸ್ತೆಯನ್ನು ಎರಡೂ ಬದಿಯಲ್ಲಿ ಅಗೆಯಲಾಗಿದೆ. ರಸ್ತೆಯ ಎರಡೂ ಅಂಚು ಅಗೆದಿರುವುದು ಸಣ್ಣ ವಾಹನಗಳಿಗೆ ಸಮಸ್ಯೆಯಾಗಿದೆ. ರಸ್ತೆಯ ಎರಡೂ ಬದಿ 30 ರಿಂದ 40 ಅಡಿಗಳಷ್ಟು ಜಾಗವಿದ್ದರೂ ಕೇಬಲ್ ಅಳವಡಿಸುವವರು ರಸ್ತೆ ಬದಿಯಲ್ಲೇ ಗುಂಡಿ ತೋಡಿದ್ದಾರೆ.
ಈ ರಾಜ್ಯ ಹೆದ್ದಾರಿಯನ್ನು 1 ಕೇಶಿಪ್ ವತಿಯಿಂದ 5 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ಇನ್ನೂ ಕೂಡ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿಲ್ಲ. ಆದರೂ ರಸ್ತೆಯ ಅಂಚುಗಳನ್ನು ಅಗೆಯುತ್ತಿರುವ ಕೇಬಲ್ ಅಳವಡಿಕೆಯ ಗುತ್ತಿಗೆದಾರ ಅವೈಜ್ಞಾನಿಕ ಕಾಮಗಾರಿ ಮಾಡುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ.
ಕೇಬಲ್ ಅಳವಡಿಸುವ ನೆಪದಲ್ಲಿ ಕೆಲವೊಂದು ಕಡೆಯಲ್ಲಿ ರಸ್ತೆಯ ಪಕ್ಕದಲ್ಲೇ ಅಗೆದರೆ ಇನ್ನೂ ಕೆಲವೆಡೆ ಮಳೆ ನೀರು ಹರಿದುಹೋಗುವ ಚರಂಡಿ ಅಗೆದು ಹಾಕಲಾಗಿದೆ. ಕೆಲವು ಕಡೆ ಮಣ್ಣು ಹಾಕಿದ್ದರಿಂದ ಚರಂಡಿ ಮುಚ್ಚಿ ಹೋಗಿದೆ. ನಿರಂತರ ಅಪಘಾತ
ರಸ್ತೆ ಅಂಚಿನುದ್ದಕ್ಕೂ ಅಗೆದದ್ದರಿಂದ ರಾತ್ರಿ ಅಂಚು ಕಾಣದೆ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೊಳಗಾಗುತ್ತಿದ್ದಾರೆ. ರಸ್ತೆ ಇಡೀ ಧೂಳು ಹಾರುತ್ತಿದ್ದು ಪಾದಚಾರಿಗಳು ನಡೆಯುವುದು ಕಷ್ಟಕರವಾಗಿದೆ. ಆದರೂ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿಲ್ಲ.
Related Articles
ಯಾವುದೋ ಕೇಬಲ್ ಅಳವಡಿಕೆಯ ನೆಪದಲ್ಲಿ ಸುಂದರ ರಸ್ತೆಯನ್ನು ಅಗೆಯಲಾಗುತ್ತಿದೆ. ರಸ್ತೆ ಅಗೆಯುವಿಕೆಯ ಬಗ್ಗೆ ಒಪ್ಪಿಗೆ ಪತ್ರವಿಲ್ಲದೇ ಕಾಮಗಾರಿ ನಡೆಯುತ್ತಿದೆ. ರಸ್ತೆಯಂಚು ಅಗೆದಿರುವುದರಿಂದ ರಸ್ತೆ ಕೆಲವು ಕಡೆಗಳಲ್ಲಿ ಬಿರುಕು ಬಿಟ್ಟಿದೆ.
-ನಿತ್ಯಾನಂದ ಬೆಳ್ಮಣ್
Advertisement