Advertisement

Padubidri; ಹಣ ವರ್ಗಾವಣೆಗೆ ಮೋಸದ ಮನವಿ ಪತ್ರ 27.99 ಲಕ್ಷ ರೂ. ಲಪಟಾಯಿಸಿದ ವಂಚಕರು

11:46 PM Feb 18, 2024 | Team Udayavani |

ಪಡುಬಿದ್ರಿ: ಕೆನರಾ ಬ್ಯಾಂಕ್‌ ಪಡುಬಿದ್ರಿ ಶಾಖೆಗೆ ವರುಣ್‌ ಕರ್ಕೇರ ಅವರು ಹಣ ವರ್ಗಾವಣೆಗೆ ವಾಟ್ಸ್‌ ಆ್ಯಪ್‌ ಮೂಲಕ ಮೋಸದ ಮನವಿ ಪತ್ರ ರವಾನಿಸಿ ಆ ಮೂಲಕ 27.99 ಲಕ್ಷ ರೂ.ಗಳನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ಶಾಖಾ ಇನ್‌ಚಾರ್ಜ್‌ ವ್ಯವಸ್ಥಾಪಕಿ ವೈಷ್ಣವಿ ಅವರು ಪಡುಬಿದ್ರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

ಫೆ. 17ರಂದು ವೈಷ್ಣವಿ ಅವರ ಮೊಬೈಲ್‌ಗೆ ವರುಣ್‌ ಕರ್ಕೆರ ಕರೆ ಮಾಡಿ ತಾನು ಆಸ್ಪತ್ರೆಯಲ್ಲಿದ್ದು ಹಣದ ಆವಶ್ಯಕತೆ ಇದೆ. ಚೆಕ್‌ಬುಕ್‌ ನೀಡುವಂತೆ ಕೇಳಿದ್ದ. ಅನಂತರ ಮರಳಿ ಕರೆ ಮಾಡಿ ಇದಕ್ಕೆ ಸಂಬಂಧಿಸಿದ ಮನವಿ ಪತ್ರವನ್ನು ಇ ಮೈಲ್‌ ಮುಖಾಂತರ ಕಳುಹಿಸಲು ಅಸಾಧ್ಯವಾಗಿದೆ. ವಾಟ್ಸಾಪ್‌ ಮೂಲಕ ಕಳುಹಿಸುವುದಾಗಿ ತಿಳಿಸಿದ್ದ.

ಆ ಬಳಿಕ ಅದನ್ನು ರವಾನಿಸಿದ್ದು ಘಾಟ್ಕೆ ಕರ್ಕೆರ ಪವರ್‌ ಇಂಡಸ್ಟ್ರೀಸ್‌ ಹೆಸರಿನ ಲೆಟರ್‌ ಹೆಡ್‌ನ‌ಲ್ಲಿ ಮನವಿ ಪತ್ರ ರವಾನಿಸಿದ್ದು ಅದರಲ್ಲಿ ಸೀಲ್‌ ಹಾಗೂ ಸಹಿ ಇದ್ದಿತ್ತು. ಖಾತೆ ಸಂಖ್ಯೆಯನ್ನೂ ನಮೂದಿಸಲಾಗಿತ್ತು. ಇದೇ ಪತ್ರದಲ್ಲಿ ಅಜಯ್‌ ಇರ್ಪಾಚೆ ಖಾತೆಗೆ 9,70,855 ರೂ., ಗುಡ್ಡು ಪಾಂಡೆ ಖಾತೆಗೆ 8,92,740 ರೂ., ಹರಪಾಲ್‌ ಖಾತೆಗೆ 9,35,853 ರೂ. ಗಳನ್ನು ವರ್ಗಾವಣೆ ಮಾಡುವಂತೆ ಸೂಚಿಸಲಾಗಿತ್ತು. ಹಾಗಾಗಿ ಒಟ್ಟು 27,99,448ರೂ. ಗಳನ್ನು ವರ್ಗಾವಣೆ ಮಾಡಲಾಗಿತ್ತು.

ಇದಾದ ಸ್ವಲ್ಪ ಸಮಯದ ಬಳಿಕ ಘಾಟ್ಕೆ ಕರ್ಕೇರ ಕಂಪೆನಿಯ ಆಶಾಲತಾ ಅವರು ವೈಷ್ಣವಿ ಅವರಿಗೆ ಕರೆಮಾಡಿ ಕಂಪೆನಿ ಖಾತೆಯಿಂದ ಹಣ ವರ್ಗಾವಣೆಗೊಂಡ ಬಗ್ಗೆ ಕೇಳಿದಾಗಲೇ ಮೋಸದಿಂದ ಹಣ ಲಪಟಾಯಿಸಿಕೊಂಡ ವಿಚಾರ ಬೆಳಕಿಗೆ ಬಂದಿದೆ. ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next