Advertisement

ಪಡುಬಿದ್ರಿಯಲ್ಲಿ ಉಡುಪಿಗೆ ಬಸ್‌ ಹತ್ತುವುದೇ ತ್ರಾಸ

12:01 PM Apr 24, 2022 | Team Udayavani |

ಪಡುಬಿದ್ರಿ: ಸದ್ಯದ ಸ್ಥಿತಿಯಲ್ಲಿ ಪಡುಬಿದ್ರಿಯಿಂದ ಉಡುಪಿಗೆ ಬಸ್‌ ಹತ್ತುವುದೇ ಸಾರ್ವಜನಿಕರಿಗೆ ಬಲು ದೊಡ್ಡ ಸಮರವಾಗಿ ಬಿಟ್ಟಿದೆ. ಬಸ್‌ ತಂಗುದಾಣಗಳಿದ್ದರೂ ಬಸ್‌ಗಳು ಸರ್ವಿಸ್‌ ರಸ್ತೆಯಲ್ಲಿ ಸಾಗಿಬರದ ಸ್ಥಿತಿ ಪಡುಬಿದ್ರಿಯಲ್ಲಿದೆ. ಈಗ ಅಂಚನ್‌ ಆಯುರ್ವೇದಿಕ್‌ ಕ್ಲಿನಿಕ್‌ ಬಳಿ ಹೆದ್ದಾರಿ ಬಿಟ್ಟು ಸರ್ವೀಸ್‌ ರಸ್ತೆಯಲ್ಲಿ ಬಂದು ನಿಲ್ಲುವ ಉಡುಪಿ ಬಸ್‌ಗಳಿಂದಾಗಿ ಜನರ ಸರ್ವಿಸ್‌ ರಸ್ತೆಯಲ್ಲಿನ ಸಾಮಾನ್ಯ ಓಡಾಟಗಳಿಗೆ ಅಡಚಣೆಯಾಗುತ್ತಿದೆ. ಎಲ್ಲೆಂದರಲ್ಲಿ ಹಠಾತ್ತನೇ ಸಾಗಿ ಬರುವ ವಾಹನಗಳಿಂದ ಪಾದಚಾರಿಗಳು ಬಹಳಷ್ಟು ತೊಂದರೆಯನ್ನು ಅನುಭವಿಸುವಂತಾಗಿದೆ.

Advertisement

ರಾಜ್ಯ ಹೆದ್ದಾರಿ ಸಂಖ್ಯೆ 1ರ ಪಕ್ಕ ಹೆದ್ದಾರಿಗೆ ಹೊಂದಿ ಕೊಂಡು ಒಳಚರಂಡಿ ನಿರ್ಮಾಣದ ಕಾಮಗಾರಿ ಯನ್ನು ನಡೆಸಿರುವ ಹೆದ್ದಾರಿ ಗುತ್ತಿಗೆದಾರ ನವಯುಗ ಕಂಪೆನಿಯು ರಾಜ್ಯ ಹೆದ್ದಾರಿಗೆ ಒಂದಿನಿತೂ ಡಾಮರು ಹಾಕಲು ತಯಾರಿಲ್ಲ. ಇಲಾಖಾ ಹೊಂದಾಣಿಕೆಯಿಂದ ಇದು ಅಸಾಧ್ಯವಾಗಿದ್ದು ಒಳಚರಂಡಿ ಪಕ್ಕ ಗುಂಡಿ ನಿರ್ಮಾಣವಾಗಿದೆ. ವಾಹನಗಳೂ ಇಲ್ಲಿ ನಿಧಾನ ಗತಿಯಿಂದಲೇ ಸಾಗಬೇಕಾಗಿದೆ. ಹೆದ್ದಾರಿ ವಾಹನ ಸಂಚಾರವನ್ನು ಯಾರೂ ತಡೆಯುವಂತಿಲ್ಲ. ಇದರ ನಡುವೆ ಉಡುಪಿ ಬಸ್‌ ಹಿಡಿಯುವ ಧಾವಂತದಲ್ಲಿನ ಜನತೆ ಎದ್ದೂ ಬಿದ್ದು, ಮೈಯೆಲ್ಲ ಕಣ್ಣಾಗಿಸಿ ಉಡುಪಿ ಬಸ್‌ ನಿಲ್ದಾಣಕ್ಕೆ ಬರಬೇಕಿದೆ.

ಎಪ್ರಿಲ್‌ ಕಾಮಗಾರಿ ಮೇಗೆ ಪೂರ್ಣ

ಒಂದು ದಿನದ ಹಿಂದೆಯಷ್ಟೇ ಮಂಗಳೂರು ಕಡೆ ಯಿಂದ ಬರುವ ಸರ್ವಿಸ್‌ ರಸ್ತೆಗೆ ಹೊಂದಿಕೊಂಡಿದ್ದ ನೆರಳಿನಾಶ್ರಯಕ್ಕೆ ಬಹು ಉಪಯೋಗಿಯಾಗಿದ್ದ ಮಾವಿನ ಮರವನ್ನು ಕಡಿದುರುಳಿಸಲಾಗಿದೆ.

ಹೆದ್ದಾರಿ ಪಕ್ಕ ಇದ್ದ ಹಳೆಕಾಲದ ವಿದ್ಯುತ್‌ ಕಂಬವೊಂದನ್ನೂ ಸರ್ವೀಸ್‌ ರಸ್ತೆ ಮಗ್ಗುಲಿಗೆ ಬದಲಾಯಿಸಲಾಗಿದೆ. ಈಚೆಗೆ ಜನತೆಯ ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ನವಯುಗ ಕಂಪೆನಿಯು ಎಪ್ರಿಲ್‌ ಅಂತ್ಯಕ್ಕೆ ಸರ್ವಿಸ್‌ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಹೇಳಿತ್ತು. ಆದರೆ ಇದೀಗ ಮೇ ಅಂತ್ಯದೊಳಗಾಗಿ ಈ ಕಾಮಗಾರಿಯು ಪೂರ್ಣ ಗೊಳ್ಳಲಿರುವುದಾಗಿ ಈ ಮಂದಿ ಹೇಳುತ್ತಿದ್ದಾರೆ.

Advertisement

ಹೆದ್ದಾರಿ ಕಾಮಗಾರಿಯ ಯೋಜನಾ ವರದಿ ಯಲ್ಲಿ ನಮೂದಿಸಲಾಗಿದ್ದ ಕಾಮಗಾರಿಯನ್ನು ಬದಲಾವಣೆಗೊಳಿಸಿ ಅವೈಜ್ಞಾನಿಕವಾಗಿ ಪಡುಬಿದ್ರಿಯ ಹೆದ್ದಾರಿ ಕಾಮಗಾರಿಗಳು ನಡೆದಿರುವುದರಿಂದ ಈ ಎಲ್ಲ ಅಚಾತುರ್ಯ ಗಳಾಗಿವೆ. ಪಡುಬಿದ್ರಿ ಪೊಲೀಸ್‌ ಠಾಣಾ ಸಿಬಂದಿ, ಗೃಹರಕ್ಷಕ ದಳದವರ ಸಹಕಾರವು ಸಂಚಾರದ ನಿರ್ವಹಣೆಗಾಗಿ ಬಹಳಷ್ಟು ಇದ್ದರೂ ಕೆಲವೊಮ್ಮೆ ಅವರನ್ನೇ ನಿರ್ಲಕ್ಷಿಸಿ ವಾಹನ ಸವಾರರು ‘ಕ್ಯಾರೇ ಇಲ್ಲದಂತೆ’ ಸಾಗುತ್ತಾರೆ. ಇದರ ಸಂಪೂರ್ಣ ತೊಂದರೆಗಳನ್ನು ಇಲ್ಲಿನ ಪ್ರಯಾಣಿಕರು, ಇಲ್ಲಿನ ಪೇಟೆ ವ್ಯವಹಾರಗಳಿಗೆ ಧಾವಿಸುವ ಗ್ರಾಹಕರು ಮತ್ತು ಹತ್ತಿರದ ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳು ಅನುಭವಿಸುವಂತಾಗಿದೆ.

ಸಭೆ ಕರೆದು ಅಂತಿಮ ರೂಪ

ಪಡುಬಿದ್ರಿಯ ಪ್ರಮುಖ ಜಂಕ್ಷನ್‌ ಸಮಸ್ಯೆಯ ಪರಿಹಾರಕ್ಕೆ ಎರಡನೇ ಬಾರಿ ಈ ತಿಂಗಳೊಳಗಾಗಿ ರಿಕ್ಷಾ, ಕಾರು ಹಾಗೂ ಟೆಂಪೋ ಚಾಲಕ ಮಾಲಕರ ಸಭೆಯನ್ನು ಕರೆಯಲಾಗುವುದು. ಈ ಸಭೆಯಲ್ಲಿ ಸೂಕ್ತವಾದ ಅಂತಿಮ ರೂಪುರೇಖೆಯನ್ನು ನೀಡಿ ಎಲ್ಲರಿಗೂ ಸೂಕ್ತ ತಂಗುದಾಣದ ವ್ಯವಸ್ಥೆ, ಬಸ್‌ ನಿಲ್ದಾಣಗಳಲ್ಲೇ ಮಂಗಳೂರು, ಉಡುಪಿ ಮತ್ತು ಕಾರ್ಕಳ ಬಸ್‌ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು. ಆಗ ತನ್ನಿಂತಾನೇ ಪಡುಬಿದ್ರಿಯ ಜಂಕ್ಷನ್‌ ಸಮಸ್ಯೆ ನೀಗಲಿದೆ. ರವಿ ಶೆಟ್ಟಿ ಪಾದೆಬೆಟ್ಟು, ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷ

ಹೆದ್ದಾರಿಗೆ ಸಿಗ್ನಲ್‌ ಲೈಟ್‌ ಕಷ್ಟ

ಪಡುಬಿದ್ರಿಯಲ್ಲಿ ಹೆದ್ದಾರಿಗೆ ಸಿಗ್ನಲ್‌ ಲೈಟ್‌ ಅಳವಡಿಕೆಗೆ ಕಷ್ಟವಾಗಬಹುದು. ರಾಜ್ಯ ಹೆದ್ದಾರಿಗಾದರೂ ಅಳವಡಿಕೆ ಸಾಧ್ಯವಿದೆ. ಆದರೆ ಇಲ್ಲಿನ ಸರ್ವೀಸ್‌ ರಸ್ತೆ ಕಾಮಗಾರಿಯು ಮುಗಿದು ಬಸ್‌ ಸಂಚಾರ ಸರ್ವೀಸ್‌ ರಸ್ತೆಯಲ್ಲಿ ಸಾಗುವಂತಾದಾಗ ಜಂಕ್ಷನ್‌ ಸಮಸ್ಯೆಯೂ ಪರಿಹಾರವಾಗಬಹುದು. –ಅಶೋಕ್‌ ಕುಮಾರ್‌ ಪಡುಬಿದ್ರಿ ಪಿಎಸ್‌

ಆರಾಮ

Advertisement

Udayavani is now on Telegram. Click here to join our channel and stay updated with the latest news.

Next