Advertisement

ತುಳಸೀ ವನದೊಳು ಪದ್ಮಶ್ರೀ

10:08 AM Feb 22, 2020 | mahesh |

ತುಳಸೀ ಗೌಡರ ಬದುಕಿನಲ್ಲಿ ತೀವ್ರ ನೋವಿನ ಹಾದಿ ಎದುರಾದಾಗ ಅವರಿಗೆ ನೆರಳಾದುದು ಹಸಿರು ಗಿಡಗಳು. ನಿಸ್ವಾರ್ಥವಾಗಿ ಹಸಿರು ಸಿರಿಯನ್ನು ಪ್ರೀತಿಸಿದ ಅವರು ನಿಜಕ್ಕೂ ವನಸುಮ. ಈ ವನಸುಮದ ಕಂಪನ್ನು ಆರಿಸಿಕೊಂಡು ಪ್ರಶಸ್ತಿ ಅವರ ಮನೆಬಾಗಿಲಿಗೆ ಬಂದಿದೆ. ಅವರ ಸ್ಫೂರ್ತಿದಾಯಕ ಬದುಕಿನತ್ತ ಒಂದು ನೋಟ…

Advertisement

ನವಿಲಿಗೆ ಹೇಗೆ ತನ್ನ ಬೆನ್ನಿನ ಹಿಂದಿನ ಬಣ್ಣ, ಬಣ್ಣದ ಗರಿ ಕಾಣಿಸುವುದಿಲ್ಲವೋ ಅದೇ ರೀತಿ ಈ ಅಜ್ಜಮ್ಮಂಗೂ ತಾನು ಮಾಡುತ್ತಿರುವ ಹಸಿರು ಸೇವೆ ಬಹಳ ದೊಡ್ಡದು ಎಂದು ಕಾಣಿಸುತ್ತಲೇ ಇರಲಿಲ್ಲ. ಮೊನ್ನೆ ಪದ್ಮಶ್ರೀ ಪ್ರಶಸ್ತಿ ಪಡೆದ ಅಂಕೋಲಾ ಹೊನ್ನಳ್ಳಿಯ ತುಳಸಿ ಗೌಡರು ಈವರೆಗೆ ನೆಟ್ಟ ಗಿಡಗಳ ಸಂಖ್ಯೆ ಎಷ್ಟು ಲಕ್ಷ ಎಂದು ಅವರಿಗೆ ಗೊತ್ತಿರಲಿಲ್ಲ. ತನ್ನ ಕಾಯಕ ಎಂಬಂತೆ ಅವರು ಗಿಡಗಳನ್ನು ನೆಟ್ಟು ಬೆಳೆಸಿದ್ದರು. ಪ್ರಶಸ್ತಿ ಬಂದಾಗ ತಮ್ಮ ಬಗ್ಗೆ ತಾವೇ ಅಚ್ಚರಿ ಪಡುವಂತಾಯಿತು.

“”ನೆಟ್ಟ ಗಿಡಗಳ ಸಂಖ್ಯೆ ಎಷ್ಟು ಲಕ್ಷ ದಾಟಿದೆ ಎಂಬುದು ಮುಖ್ಯವಲ್ಲ. ನೆಟ್ಟ ಗಿಡಗಳ ಲಾಲನೆ, ಪೋಷಣೆಯ ಲಕ್ಷ್ಯ ಎಷ್ಟು ವಹಿಸಿದ್ದೇನೆ ಎನ್ನುವುದು ಮುಖ್ಯ” ಎಂದು ಅವರು ತಮ್ಮವರೊಡನೆ ಹೇಳುತ್ತಿರುತ್ತಾರೆ. ಈ ಮಾತು ಎಷ್ಟೊಂದು ಮುಖ್ಯ ಎನಿಸುತ್ತದೆ. ವಿಶ್ವ ಪರಿಸರ ದಿನಾಚರಣೆಯಂದು “ಕೋಟಿ ವೃಕ್ಷ ಆಂದೋಲನ’ ಎಂಬ ಸುದ್ದಿ ಜೋರಾಗಿ ಕೇಳುತ್ತೇವೆ. ಆದರೆ, ನಿಜಕ್ಕೂ ಕೋಟಿ ವೃಕ್ಷಗಳು ಬೆಳೆದವೆ? ಫ್ಯಾಷನ್‌ ಪರಿಸರವಾದಿಗಳಿಗೆ ತುಳಸಿ ಗೌಡರ ಈ ಮಾತು ಸಂದೇಶವೂ ಹೌದು, ಎಚ್ಚರಿಕೆಯೂ ಹೌದು.

ತುಳಸೀಗೌಡರು ಎರಡು ವರ್ಷದ ಪುಟಾಣಿ ಆಗಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಹೆಣ್ಣಿನ ಜವಾಬ್ದಾರಿ ಎಂದರೆ ಹಿಂದಿನ ಕಾಲದಲಿ ಕಷ್ಟವೆಂದೇ ನಂಬಿಕೆ ಅಲ್ಲವೆ. ಆದ್ದರಿಂದ ತುಳಸೀ ಅವರದ್ದು ಬಾಲ್ಯವಿವಾಹ ನಡೆಯಿತು. ಆದರೆ ಗಂಡ ಗೋವಿಂದ ಗೌಡರು ಬಹುಬೇಗನೇ ತೀರಿಕೊಂಡಾಗ ತುಳಸೀ ಮಗ ಸುಬ್ರಾಯ ಗೌಡನನ್ನು ಸಾಕುವ ಜವಾಬ್ದಾರಿಯನ್ನೂ ಹೊರಬೇಕಾಯಿತು. ಆಗ ತಮ್ಮ ಬದುಕಿನ ನೋವು, ವೇದನೆ ಕಳೆಯಲು ಸ್ನೇಹಸಂಕಲೆ ಆದದ್ದು ಕಾಡಿನ ಸಹವಾಸ. ತಾಯಿಯೊಂದಿಗೆ ಬಾಲ್ಯದಲ್ಲೇ ಕಾಡು ಹತ್ತಿ, ಬೆಟ್ಟ ಸುತ್ತಿದ ಅನುಭವ ಇದ್ದ ಕಾರಣ ಕಾಡಿನ ನಿಗೂಢ ಕತ್ತಲೆಯಲ್ಲಿ ಬೆಳಕು ಕಾಣಿಸಿತು, ಮತ್ತು ಆ ಬೆಳಕು ಒಂದು ನೆಮ್ಮದಿಯ ಹಾದಿಯನ್ನೇ ತೋರಿಸಿತು. ಪಶ್ಚಿಮಘಟ್ಟದ ಮಾಸ್ತಿಕಟ್ಟ ಅರಣ್ಯ ವಲಯದ ಅಗಸೂರು ಸಸ್ಯಪಾಲನಾ ಕ್ಷೇತ್ರದಲ್ಲಿ ಆಗಿನ ಅರಣ್ಯ ಸಂರಕ್ಷಣಾಧಿಕಾರಿ ಎಲ್ಲಪ್ಪ ರೆಡ್ಡಿಯವರ ಮೂಲಕ ಕೂಲಿ ಕೆಲಸ ಲಭಿಸಿತ್ತು. ಒಂದು ರೂಪಾಯಿ 25 ಪೈಸೆ ದಿನ ಕೂಲಿ ಸಂಬಳದಲ್ಲಿ ಬೀಜಗಳನ್ನು ಸಂಗ್ರಹ ಮಾಡಿ ಗಿಡ ಮಾಡುವ ಇವರ ಅಂದಿನ ಸೇವೆ ಯಾವ ರೀತಿ ಬೆಳೆದು ಬಂತು ಎಂದರೆ ಇಂದು ಅರಣ್ಯ ಅಧಿಕಾರಿಗಳು, ವಿಶ್ವವಿದ್ಯಾನಿಲಯದ ಡಾಕ್ಟರೇಟ್‌ ಪಡೆದವರು ಕೂಡ ಇವರಿಂದ ಮಾಹಿತಿ, ಅರಿವು, ಜ್ಞಾನ ಪಡೆಯುವಷ್ಟು ! ಗಿಡ ಬೆಳೆಸುವುದು ಅಂದರೆ ದೇವರು ನನಗೆ ನೀಡಿರುವ ವಿಶೇಷ ಜವಾಬ್ದಾರಿ ಎಂದು ಸಂಕಲ್ಪ ಮಾಡಿರುವ ತುಳಸಿಯವರ ಕಾರ್ಯತತ್ಪರತೆ, ಪ್ರಾಮಾಣಿಕತೆ, ಪ್ರಬುದ್ಧತೆ, ಕರ್ತವ್ಯ ಪರಾಯಣತೆಯಿಂದಾಗಿ ಇಂದು ಅರಣ್ಯ ವಿಶ್ವಕೋಶ ಆಗಿದ್ದಾರೆ.

ಯಾವ ಮರದ ಬೀಜ ಯಾವಾಗ ಎಲ್ಲಿ ಬೆಳೆಯಬೇಕು? ಯಾವ ಬೀಜ ಯಾವಾಗ ನಾಟಿಗೆ ಸೂಕ್ತ? ಯಾವ ಸಮಯದಲ್ಲಿ ಎಲ್ಲಿ ಬಿತ್ತಬೇಕು ಎಂಬುದನ್ನು ಕಲಿಯುತ್ತ ವರ್ಷಕ್ಕೆ 30 ಸಾವಿರಕ್ಕಿಂತಲೂ ಹೆಚ್ಚು ಗಿಡಗಳನ್ನು ನೆಟ್ಟು ಈ ಭೂಮಂಡಲದ ಹಸಿರು ಹೊದಿಕೆಯನ್ನು ವಿಸ್ತಾರಗೊಳಿಸುತ್ತ ಬರುತ್ತಿ¨ªಾರೆ. ಹೊನ್ನೆ, ತಾರಿ, ನಂದಿ ಮತ್ತಿ, ಕಿಂಡಲ, ಭರಣಿ, ಸೀಮೆ ಬಿದಿರು, ಗೇರು, ಮುರುಗಲು, ಕೋಕರಿ, ಸಾಗುವಾನಿ, ಬಿಲಕಂಬಿ, ಹೆದ್ದಿ, ತಾರೆ, ನೇರಳೆ… ಹೇಗೆ ಕೈಬೆರಳು ಮಡಚುತ್ತ ಮರಗಳ ಹೆಸರು ಹೇಳುವ ಇವರು 300ಕ್ಕೂ ಹೆಚ್ಚು ಅಡವಿ ಮರಗಳ ಮಾಹಿತಿ ಹೇಳುತ್ತಾ ಹೋಗುತ್ತಾರೆ. ಮರ, ಗಿಡಗಳಲ್ಲಿ ಮಕ್ಕಳ ಪ್ರೀತಿಯನ್ನು ಕಾಣುತ್ತಾ, ಮಕ್ಕಳಲ್ಲಿ ಮರಗಿಡಗಳ ಪ್ರೀತಿಯನ್ನು ಕಾಣುತ್ತಾ ಮುಗ್ಧರಾಗುತ್ತಾರೆ. ಮರ, ಗಿಡಗಳು ಮತ್ತು ಮಕ್ಕಳನ್ನು ನಾವು ಹೇಗೆ ಪೋಷಿಸುತ್ತೇವೋ ಅದೇ ರೀತಿ ಅವುಗಳು ಬೆಳೆಯುತ್ತವೆ ಎಂಬ ಇವರ ಪ್ರಾಯೋಗಿಕ ಮಾತು ಕಟುಸತ್ಯ. ಬಡತನವಾಗಲಿ, ಹಸಿವೆಯಾಗಲಿ, ಅವಮಾನವಾಗಲಿ ತುಳಸಿಯವರನ್ನು ಇದು ಕುಗ್ಗಿಸಲಿಲ್ಲ. ನೆಟ್ಟಂತಹ ಒಂದೊಂದು ಗಿಡವೂ ಮೆಟ್ಟಿಲೇರಿಸಿ ಪಟ್ಟಕ್ಕೆ ಕೂರಿಸಿ ಬೆಟ್ಟಕ್ಕೆ ಹೊದಿಕೆಯಾಗುತ್ತಿದ್ದಂತೆಯೇ ಇವರ ಸ್ವರ-ಕರಗಳು ಅಗೋಚರವಾಗಿ ಭೂಮಾತೆಯ ಕಕ್ಷೆಗೆ ರಕ್ಷೆಗಳಾದವು. ಮನೆಮಕ್ಕಳಂತೆಯೇ ತಾನು ನೆಟ್ಟ ಗಿಡಗಳು ಬೃಹತ್‌ ಮರಗಳಾಗಿ ಬೆಳೆದುನಿಂತ ತುಳಸೀವನದಲ್ಲಿ ಹಳಸಿಹೋದುದನ್ನು ಮರೆತು ಉಳಿಸಿಕೊಂಡದ್ದನ್ನು ಮೊರೆತು ತನ್ನ ಕಾಯವೇ ಮರಗಳ ಪಾಯವೆಂದು ನಿಸ್ವಾರ್ಥ ಸೇವೆ ಮಾಡುತ್ತ ಬಂದವರು. ಗಿಡನೆಟ್ಟು ಪಾಲನೆ, ಪೋಷಣೆಯ ಸಮಯದಲ್ಲಿ ಕೆಲವೊಮ್ಮೆ ಇವರಿಗೆ ಆಗಿರುವ ಮಾನಸಿಕ ಹಿಂಸೆಗಳ ಬಗ್ಗೆ ಇವರ ಮಗ ಸುಬ್ರಾಯ ಗೌಡರು ಸತ್ಯ ವಿಚಾರಗಳನ್ನು ಹೇಳಲು ಮರೆಯಲಿಲ್ಲ. ಯಾರಾದರೂ ಗಿಡಗಳಿಗೆ ನೋವು ಉಂಟುಮಾಡಿದ್ದು ಗೊತ್ತಾದರೆ ತತ್‌ಕ್ಷಣ ಅಲ್ಲಿಗೆ ಹೋಗಿ ಅಯ್ಯೋ, ಎಷ್ಟು ನೋವಾಯಿತು ಎಷ್ಟು ವೇದನೆ ಅನುಭವಿಸಿತೋ ಎಂದು ಗಿಡಗಳ ವೇದನೆಗೆ ಕಿವಿಯಾಗಿ ನೊಂದ, ಬೆಂದ ಗಿಡಗಳನ್ನು ಎತ್ತಿ ತಬ್ಬಿ ಬದುಕುವಂತೆ ಕಾರ್ಯನಿರ್ವಹಿಸುವ ಈ ತುಳಸೀ ವನದೇವತೆಯ ಹಸಿರು ಪ್ರೀತಿ ಆಕಾಶದಷ್ಟು ಎತ್ತರ.

Advertisement

ಗಿಡ, ಮರಗಳೊಂದಿಗೆ ಸದಾ ಮಾತಾಡುವ, ಅವುಗಳ ರೋದನ, ವೇದನೆಗೆ ಸ್ಪಂದಿಸುವ ಇವರು ಬಡತನದಲ್ಲಿ ಇದ್ದರೂ ತಾನು ನೆಟ್ಟ ಲಕ್ಷಾಂತರ ಗಿಡ, ಮರಗಳ ನೆಮ್ಮದಿಯನ್ನು ಕಾಣುತ್ತಾ ಹಸಿರು-ಹಸನಿನ ಸಿರಿತನದ ಚೌಕಟ್ಟು ಕಟ್ಟಿಕೊಂಡಿದ್ದಾರೆ. ನಿರೀಕ್ಷೆಯೇ ಮಾಡಿರದ ಪದ್ಮಶ್ರೀ ಪ್ರಶಸ್ತಿ ಬಂದಿರುವುದರ ಬಗ್ಗೆ ಇವರಲ್ಲಿ ಕೇಳಿದಾಗ “ಏನೋ ಒಂದಿಷ್ಟು ಮಾಡಿದ್ದೇನೆ. ಇನ್ನೂ ಒಂದಷ್ಟು ಮಾಡಲು ಇದೆ, ಪ್ರಕೃತಿ ಸೇವೆಗೆ ಅಂತ್ಯವಿಲ್ಲ ಅದು ನಿರಂತರ. ಪದ್ಮಶ್ರೀ ಪ್ರಶಸ್ತಿಯ ಸಂಭ್ರಮಕ್ಕಿಂತ ನಾಡಿನ ಎಲ್ಲರೂ ಸ್ವಇಚ್ಚೆಯಿಂದ ಯಾರ ಒತ್ತಾಯಕ್ಕೂ ಕಾಯದೇ, ನಮ್ಮ ಭವಿಷ್ಯದ ಭದ್ರತೆಯ ಉದ್ದೇಶ ಇಟ್ಟುಕೊಂಡು ಗಿಡನೆಟ್ಟು ಪೋಷಿಸಿದರೆ ಅದಕ್ಕಿಂತ ದೊಡ್ಡ ಸಂಭ್ರಮ ಬೇರೆ ಇಲ್ಲ’ ಎನ್ನುತ್ತಾರೆ.

ದಿನೇಶ ಹೊಳ್ಳ

Advertisement

Udayavani is now on Telegram. Click here to join our channel and stay updated with the latest news.

Next