Advertisement

ಪದ್ಮಾವತ್‌ಗೆ “ಸುಪ್ರೀಂ”ಜಯ: 25ರಂದು ದೇಶಾದ್ಯಂತ ಬಿಡುಗಡೆ

07:57 AM Jan 19, 2018 | Team Udayavani |

ಹೊಸದಿಲ್ಲಿ: ಕೆಲ ತಿಂಗಳುಗಳಿಂದ ನನೆಗುದಿಗೆ ಬಿದ್ದಿದ್ದ ಬಾಲಿವುಡ್‌ ಚಿತ್ರ “ಪದ್ಮಾವತ್‌’ ಮೇಲೆ ಕೆಲ ರಾಜ್ಯ ಸರಕಾರಗಳು ಹೇರಿದ್ದ ನಿಷೇಧಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದ್ದು, ಇದೇ 25ರಂದು ಚಿತ್ರ ದೇಶಾದ್ಯಂತ ಬಿಡುಗಡೆಯಾಗಲಿದೆ. 

Advertisement

ಗುಜರಾತ್‌, ರಾಜಸ್ಥಾನ, ಹರ್ಯಾಣ, ಮಧ್ಯಪ್ರದೇಶ ಸರಕಾರಗಳು ಚಿತ್ರ ನಿಷೇಧಿಸಿರುವುದರ ವಿರುದ್ಧœ “ಪದ್ಮಾವತ್‌’ ನಿರ್ಮಾಣ ಸಂಸ್ಥೆ “ವಯಾಕಾಮ್‌ 18′ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಗುರುವಾರ, ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ, “ಸೆನ್ಸಾರ್‌ ಮಂಡಳಿಯಿಂದ ಪ್ರಮಾಣ ಪತ್ರ ಪಡೆದ ಚಿತ್ರವನ್ನು ನಿಷೇಧಿಸುವ ಅಧಿಕಾರ ಯಾವ ರಾಜ್ಯ ಸರಕಾರಗಳಿಗೂ ಇಲ್ಲ’ ಎಂದಿತಲ್ಲದೆ, ಇತರ ಯಾವುದೇ ರಾಜ್ಯಗಳೂ ಚಿತ್ರ ನಿಷೇಧಕ್ಕೆ ಮುಂದಾಗಕೂಡದೆಂದು ಕಟ್ಟುನಿಟ್ಟಾಗಿ ಆದೇಶಿಸಿತು. ಅಂತೆಯೇ, ಯಾವುದೇ ಚಿತ್ರದ ವಿಚಾರವಾಗಿ ಗಲಭೆ ಉಂಟಾದರೆ, ಅದನ್ನು ನಿಭಾಯಿಸುವ ಹೊಣೆ ರಾಜ್ಯ ಸರಕಾರಗಳದ್ದು ಎಂದು ತಾಕೀತು ಮಾಡಿತು.

ಬಾಲಿವುಡ್‌ ಸಂತಸ: “ಪದ್ಮಾವತ್‌’ ಮೇಲಿದ್ದ ನಿಷೇಧಕ್ಕೆ ತಡೆಯಾಜ್ಞೆ ಸಿಕ್ಕಿರುವುದಕ್ಕೆ ಬಾಲಿವುಡ್‌ ಸಂಭ್ರಮ ವ್ಯಕ್ತಪಡಿಸಿದೆ. ನಿರ್ದೇಶಕ ಮಧುರ್‌ ಭಂಡಾರ್ಕರ್‌, ಸಾಹಿತಿ ಚೇತನ್‌ ಭಗತ್‌, ನಟರಾದ ಆಯುಷ್ಮಾನ್‌ ಖುರಾನ, ರಾಹುಲ್‌ ದೇವ್‌ ಮತ್ತಿತರರು ಈ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ, ಸೆನ್ಸಾರ್‌ ಮಂಡಳಿಯ ಮಾಜಿ ಅಧ್ಯಕ್ಷ ಪಹ್ಲಾಜ್‌ ನಿಹಲಾನಿ ಅವರೂ ಸುಪ್ರೀಂ ಕೋರ್ಟ್‌ ಆದೇಶವನ್ನು ಸ್ವಾಗತಿಸಿದ್ದಾರೆ. 

ಚಿತ್ರಮಂದಿರದಲ್ಲಿ ದಾಂಧಲೆ: ಸುಪ್ರೀಂ ತೀರ್ಪಿನ ಹೊರ ತಾಗಿ ಯೂ ಕರ್ಣಿ ಸೇನಾವು ಪ್ರತಿಭಟನೆ ಮುಂದುವರಿಸಿದೆ. ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ, ಚಿತ್ರ ಪ್ರದರ್ಶಿಸಿದರೆ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದೆ. ಬಿಹಾರದಲ್ಲಿ ಗುರುವಾರ ಸಿನಿಮಾ ಮಂದಿರ ವೊಂದರಲ್ಲಿ ದಾಂಧಲೆಯನ್ನೂ ಮಾಡಲಾಗಿದೆ. ಇನ್ನೊಂದೆಡೆ, ರಾಣಿ ಪದ್ಮಾವತಿ ಪಾತ್ರ ಮಾಡಿರುವ ದೀಪಿಕಾ ಪಡುಕೋಣೆ ತಲೆಗೆ 10 ಲಕ್ಷ ರೂ. ಬಹುಮಾನ ಘೋಷಿ ಸಿದ್ದ ಬಿಜೆಪಿ ನಾಯಕ ಸೂರಜ್‌ ಪಾಲ್‌ ಅಮು, “”ಚಿತ್ರದ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ. ಇದನ್ನು ತಪ್ಪು ಎಂದು ಪರಿಗಣಿಸಿ ನನ್ನನ್ನು ಗಲ್ಲಿಗೇರಿಸಿದರೂ ಸರಿ, ಪ್ರತಿಭಟನೆ ಕೈಬಿಡುವುದಿಲ್ಲ” ಎಂದಿದ್ದಾರೆ. 

ಮಹಾತ್ಮ ಗಾಂಧಿ, ವಿಸ್ಕಿ, ಕಾಳಿದಾಸ, ದಮಯಂತಿ
“ಪದ್ಮಾವತ್‌’ ನಿಷೇಧ ತೆರವು ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಾದ, ಪ್ರತಿವಾದದಲ್ಲಿ ಗಾಂಧಿ, ವಿಸ್ಕಿ, ಕಾಳಿದಾಸ, ನಳ-ದಮಯಂತಿ… ಇವರೆಲ್ಲರೂ ಬಂದು ಹೋದರು! ಚಿತ್ರ ನಿರ್ಮಾಣ ಸಂಸ್ಥೆ “ವಯಾಕಾಮ್‌ 18′ ಪರ, ವಕೀಲರಾದ ಹರೀಶ್‌ ಸಾಳ್ವೆ, ಮಾಜಿ ಸಾಲಿಸಿಟರ್‌ ಜನರಲ್‌ ಮುಕುಲ್‌ ರೋಹಟಗಿ ವಾದ ಮಂಡಿಸಿದರೆ, ಚಿತ್ರ ನಿಷೇಧಿಸಿದ್ದ ರಾಜ್ಯಗಳನ್ನು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪ್ರತಿನಿಧಿಸಿದ್ದರು. ಕಲಾಪ ಆರಂಭವಾಗುತ್ತಲೇ, ಸಾಳ್ವೆ ಅವರು, ಸಿನಿಮಾವು ಅಭಿವ್ಯಕ್ತಿ ಸ್ವಾತಂತ್ರ್ಯದ ಮಾಧ್ಯಮವಾಗಿದ್ದು, ಇದರಲ್ಲಿ ಒಬ್ಬ ನಟ ಚರಿತ್ರೆಯನ್ನು ಕೊಂಚ ಬದಲಿಸುವಂತೆ ನಟಿಸಿದರೆ ತಪ್ಪೇನಿಲ್ಲ ಎಂದು “ಪದ್ಮಾವತ್‌’ ಚಿತ್ರವನ್ನು ಸಮರ್ಥಿಸಿಕೊಂಡರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮೆಹ್ತಾ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಗಾಂಧೀಜಿ ಅವರು ವಿಸ್ಕಿ ಕುಡಿಯುವಂತೆ ತೋರಿಸಲು ಸಾಧ್ಯವಿಲ್ಲ ಎಂದು ವಾದಿಸಿದರು. ತಕ್ಷಣ ಅದಕ್ಕೆ ಸಾಳ್ವೆ, “”ಹಾಗೆ ಮಾಡಿದರೂ ಅದು ಚರಿತ್ರೆಗೆ ಭಂಗ ತಂದಂತೇನಲ್ಲ” ಎಂದರು. ಇದು ಉಭಯ ಪಕ್ಷಗಳ ವಕೀಲರು ವಾಗ್ವಾದಕ್ಕಿಳಿಯಲು ಕಾರಣವಾಯಿತು. ಇದೇ ವೇಳೆ ಮಾತನಾಡಿದ ಸಿಜೆಐ ದೀಪಕ್‌ ಮಿಶ್ರಾ, “ಈ ಹಿಂದೆ ಕಾಳಿದಾಸನ “ನಳ ದಮಯಂತಿ’ ನಾಟಕವೂ ವಿವಾದವಾಗಿ, ಕೆಲವು ಸಾಹಿತಿಗಳು ಅದರ ಅನುವಾದದಿಂದ ಹಿಂದೆ ಸರಿದಿದ್ದನ್ನು ಸ್ಮರಿಸಿಕೊಂಡರು. ಹಾಗೆ, ಎಲ್ಲವನ್ನೂ ಚರಿತ್ರೆಯ ದೃಷ್ಟಿಕೋನದಲ್ಲೇ ನೋಡುವುದಾದರೆ ನಮ್ಮ ದೇಶದಲ್ಲಿರುವ ಶೇ. 60ರಷ್ಟು ಕೃತಿಗಳು ಓದಲು ಅರ್ಹವಲ್ಲ ಎನಿಸಿಕೊಳ್ಳುತ್ತವೆ’ ಎಂದರು. ಜತೆಗೆ, 1994ರಲ್ಲಿ ಪೂಲನ್‌ ದೇವಿ ಜೀವನಾಧಾರಿತ ಚಿತ್ರ “ಬ್ಯಾಂಡಿಟ್‌ ಕ್ವೀನ್‌’ ಬಿಡುಗಡೆಯಾಯಿತೆಂದರೆ, ಪದ್ಮಾವತ್‌ಗೆ ಅಡ್ಡಿಯೇಕೆ ಎಂದು ಪ್ರಶ್ನಿಸಿದರು.

Advertisement

ಶ್ರೀಶ್ರೀ ಬೆಂಬಲ 
ದಿಲ್ಲಿಯಲ್ಲಿರುವ ಆರ್ಟ್‌ ಆಫ್ ಲಿವಿಂಗ್‌ ಆಶ್ರಮದಲ್ಲಿ ಪದ್ಮಾವತ್‌ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ತದನಂತರ ಮಾತನಾಡಿದ ಶ್ರೀ ಶ್ರೀ ರವಿಶಂಕರ್‌ ಗುರೂಜಿ, “”ಚಿತ್ರ ನನಗೆ ಇಷ್ಟವಾಯಿತು. ಅದರಲ್ಲಿ ಆಕ್ಷೇಪಾರ್ಹ ಅಂಶಗಳೇನೂ ಇಲ್ಲ. ರಜಪೂತರ ಘನತೆಯನ್ನು ಎತ್ತಿ ಹಿಡಿಯುವ ಈ ಸಿನಿಮಾ, ರಾಣಿ ಪದ್ಮಾವತಿಗೆ ನಿಜವಾದ ಶ್ರದ್ಧಾಂಜಲಿಯೂ ಹೌದು. ಹಾಗಾಗಿ, ಜನರು ಈ ಸಿನಿಮಾವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕು” ಎಂದಿದ್ದಾರೆ.

ಕೆಲ ರಾಜ್ಯ ಸರಕಾರಗಳ ನಿಷೇಧಕ್ಕೆ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್‌
ಕಾನೂನು ಸುವ್ಯವಸ್ಥೆ ಆಯಾ ರಾಜ್ಯ ಸರಕಾರಗಳ ಹೊಣೆ ಎಂದ ನ್ಯಾಯಪೀಠ
ಕೋರ್ಟ್‌ ಆದೇಶಕ್ಕೆ ಬಾಲಿವುಡ್‌ ಸ್ವಾಗತ

Advertisement

Udayavani is now on Telegram. Click here to join our channel and stay updated with the latest news.

Next