ಉಡುಪಿ: ಭಾರತ ಸರಕಾರ ಪೇಜಾವರ ಮಠದ ಕೀರ್ತಿಶೇಷ ಶ್ರೀವಿಶ್ವೇಶತೀರ್ಥರಿಗೆ ಕೊಡಮಾಡಿದ ಪದ್ಮವಿಭೂಷಣ (ನಿರ್ಯಾಣೋತ್ತರ) ಪ್ರಶಸ್ತಿ ಪತ್ರವನ್ನು ಉಡುಪಿಯ ಸಂಸ್ಕೃತ ಕಾಲೇಜಿನಿಂದ ರಥಬೀದಿ ಮಾರ್ಗವಾಗಿ ಭವ್ಯ ಮೆರವಣಿಗೆಯಲ್ಲಿ ತಂದು, ಕೃಷ್ಣಾರ್ಪಣಗೊಳಿಸಲಾಯಿತು.
ಹೂಗಳಿಂದ ಸರ್ವಾಲಂಕೃತಗೊಂಡಿರುವ ತೆರೆದ ವಾಹನದ ಮುಂಭಾಗದಲ್ಲಿ ಶ್ರೀ ವಿಶ್ವೇಶತೀರ್ಥರ ಭಾವಚಿತ್ರ, ಪದ್ಮವಿಭೂಷಣ ಪ್ರಶಸ್ತಿಪತ್ರದ ಪ್ರತಿ ಇಟ್ಟು, ವಿವಿಧ ಬಗೆಯ ವಾದ್ಯಘೋಷ, ಬಿರುದಾವಳಿ, ತಟ್ಟಿರಾಯ ಕುಣಿತದ ಜತೆಗೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಭವ್ಯ ಮೆರವಣಿಗೆಯ ಮಧ್ಯದಲ್ಲಿ ಶ್ರೀ ವಿಶ್ವೇಶತೀರ್ಥರ ಶಿಷ್ಯರಾದ ಶ್ರೀ ವಿಶ್ವಪ್ರಸನ್ನತೀರ್ಥರು ಹೂವಿನ ಹರಿವಾಣದಲ್ಲಿ ಪದ್ಮವಿಭೂಷಣ ಪ್ರಶಸ್ತಿಪ್ರತಿ, ಸ್ಮರಣಿಕೆಯನ್ನು ಹಿಡಿದು ಮರವಣಿಗೆಯಲ್ಲಿ ಸಾಗಿಬಂದರು.
ಸಂಸ್ಕೃತ ಕಾಲೇಜಿನಿಂದ ವಾದ್ಯಘೋಷದೊಂದಿಗೆ ಆರಂಭವಾದ ಮೆರವಣಿಗೆ ಕನಕದಾಸ ಮಾರ್ಗದ ಮೂಲಕ ರಥಬೀದಿಯನ್ನು ಪ್ರವೇಶಿಸಿತು. ಬಳಿಕ ಶ್ರೀಕೃಷ್ಣಮಠದ ಒಳಗೆ ಗರ್ಭಗುಡಿಯ ಮುಂಭಾಗದಲ್ಲಿ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಶ್ರೀಕೃಷ್ಣನಿಗೆ ಅರ್ಪಿಸಿದರು.
ಅಲ್ಲಿಂದ ನೇರವಾಗಿ ಮೆರವಣಿಗೆ ಪೇಜಾವರ ಮಠದ ಪ್ರವೇಶ ಮಾಡಿತು. ಪೇಜಾವರ ಮಠದ ಒಳಾಂಗಣದಲ್ಲಿರುವ ಶ್ರೀವಿಶ್ವೇಶತೀರ್ಥರ ಭಾವಚಿತ್ರದ ಎದುರು ಪ್ರಶಸ್ತಿ ಪತ್ರವನ್ನು ಇಟ್ಟು, ಪುಷ್ಪ ನಮನ ಸಲ್ಲಿಸಲಾಯಿತು. ಶ್ರೀ ವಿಶ್ವಪ್ರಸನ್ನತೀರ್ಥರು ಆರತಿ ಎತ್ತಿದರು. ಅಲ್ಲಿಂದ ಮಠದ ಮುಂಭಾಗದಲ್ಲಿ ನಿರ್ಮಿಸಿದ್ದ ವೇದಿಕೆಗೆ ಪ್ರಶಸ್ತಿಯನ್ನು ತಂದು, ಸ್ವಾಮೀಜಿಯವರು ಮತ್ತು ಗಣ್ಯರು ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಪೇಜಾವರ ಶ್ರೀಗಳ ಭಕ್ತರಾದ ಬೆಂಗಳೂರಿನ ಹೂಡಿ ವಿಜಯಕುಮಾರ್ ಅವರು ಶ್ರೀ ವಿಶ್ವೇಶತೀರ್ಥರ ಭಾವಚಿತ್ರಕ್ಕೆ ಬೃಹತ್ ಹೂವಿನ ಹಾರ ಸಮರ್ಪಿಸಿ, ಬಗೆಬಗೆಯ ಪುಷ್ಪಾರ್ಚನೆ ಮಾಡಿದರು. ವೇದಿಕೆಯ ಮೇಲಿದ್ದ ಯತಿ ಶ್ರೇಷ್ಠರಿಗೂ ಇದೇ ಸಂದರ್ಭದಲ್ಲಿ ಹೂವಿನ ಮಳೆ ಸುರಿಸಲಾಯಿತು.
ವೇದಿಕೆ ಕಾರ್ಯಕ್ರಮದ ನಂತರ ಉಡುಪಿಯ ನಾಗರಿಕರು ಹಾಗೂ ಶ್ರೀಮಠದ ಭಕ್ತರು ಶ್ರೀ ವಿಶ್ವೇಶತೀರ್ಥರ ಭಾವಚಿತ್ರ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಪತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಚಿತ್ರ: ಆಸ್ಟ್ರೋ ಮೋಹನ್