Advertisement

Padma Awards: ಗ್ರಾಮೀಣ ಸಾಧಕರ ಮುಕುಟಕ್ಕೆ ಪದ್ಮ ಗೌರವದ ಗರಿ

12:47 AM Jan 27, 2024 | Team Udayavani |

ಕಳೆದ ಕೆಲವು ವರ್ಷಗಳಿಂದೀಚೆಗೆ ಕೇಂದ್ರ ಸರಕಾರ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಿ, ನೈಜ ಸಾಧಕರಿಗೆ, ಅರ್ಹರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತ ಬಂದಿದೆ. ದೇಶದ ಗಣರಾಜ್ಯೋತ್ಸವದ ಅಮೃತ ಮಹೋತ್ಸವದ ಶುಭಸಂದರ್ಭದಲ್ಲಂತೂ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದೇಶದ ಮೂಲೆಮೂಲೆಗಳಲ್ಲಿ ಎಲೆಮರೆಯ ಕಾಯಿಯಂತೆ ತಮ್ಮದೇ ಆದ ರೀತಿಯಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುತ್ತ ಬಂದಿರುವ ಹಿರಿಯರನ್ನು ಗುರುತಿಸಿ, ಅವರಿಗೆ ಪದ್ಮ ಪ್ರಶಸ್ತಿಯನ್ನು ಘೋಷಿಸಿರುವುದು ಸ್ತುತ್ಯರ್ಹ.

Advertisement

ಈ ಬಾರಿ ಐವರಿಗೆ ಪದ್ಮವಿಭೂಷಣ, 17 ಮಂದಿಗೆ ಪದ್ಮಭೂಷಣ ಮತ್ತು 110 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಈ ಪೈಕಿ ಬಹುತೇಕ ವ್ಯಕ್ತಿಗಳ ಹೆಸರು ಸೀಮಿತ ವ್ಯಾಪ್ತಿಯ ಜನರನ್ನು ಹೊರತುಪಡಿಸಿದಂತೆ ದೇಶದ ಬಹುತೇಕ ಜನರಿಗೆ ಅಪರಿಚಿತ ಎನ್ನಬಹುದು. ಅಷ್ಟು ಮಾತ್ರವಲ್ಲದೆ ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಎಲ್ಲ ಮಾಹಿತಿಗಳನ್ನು ನಮ್ಮ ಅಂಗೈಯ ಮುಂದಿಡುವ ಅಂತರ್ಜಾಲದಲ್ಲಿ ಜಾಲಾಡಿದರೂ ಮಾಹಿತಿ ಲಭಿಸದಂತಹ ಗ್ರಾಮೀಣ ಸಾಧಕರನ್ನು ಕೇಂದ್ರ ಸರಕಾರ ಗುರುತಿಸಿದೆ. ಅದೆಲ್ಲೋ ದಟ್ಟ ಕಾನನದ ನಡುವೆ ಸಮಾಜಸೇವಾ ಕಾರ್ಯದಲ್ಲಿ ನಿರತರಾಗಿರುವ ಬುಡಕಟ್ಟು ಸಮುದಾಯದವರತ್ತ ಸರಕಾರ ಬೆಳಕು ಚೆಲ್ಲಿದೆ.

ಈಗಾಗಲೇ ವಿಭಿನ್ನ ಕ್ಷೇತ್ರಗಳಲ್ಲಿ ಜನಪ್ರಿಯರಾಗಿರುವವರ ಸಾಧನೆಯನ್ನೂ ಗುರುತಿಸುವ ಕಾರ್ಯವನ್ನು ಸರಕಾರ ಇದೇ ವೇಳೆ ಮಾಡಿದೆ. ವಿವಿಧ ಪ್ರಕಾರಗಳನ್ನು ಒಳಗೊಂಡಿರುವ ಕಲಾ ಕ್ಷೇತ್ರಕ್ಕೆ ಗರಿಷ್ಠ ಸಂಖ್ಯೆಯ ಪ್ರಶಸ್ತಿಗಳು ಲಭಿಸಿವೆ. ಇಲ್ಲೂ ಜನಪ್ರಿಯತೆಗಿಂತ, ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಎಲೆಮರೆಯ ಕಾಯಿಗಳಿಗೇ ಮಣೆ ಹಾಕಲಾಗಿರುವುದು ವಿಶೇಷ.

ಕೇಂದ್ರ ಸರಕಾರ ಬಿಹಾರದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ನಾಯಕರಾಗಿದ್ದ ದಿ| ಕರ್ಪೂರಿ ಠಾಕೂರ್‌ ಅವರ ಜನ್ಮಶತಮಾನೋತ್ಸವದ ಮುನ್ನಾ ದಿನವೇ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿಯನ್ನು ಘೋಷಿಸಿ, ದೇಶದ ಜನತೆಗೆ ಅಚ್ಚರಿಯನ್ನುಂಟು ಮಾಡಿತ್ತು. ಈಗ ಪದ್ಮ ಪ್ರಶಸ್ತಿ ಘೋಷಣೆಯ ಸಂದರ್ಭದಲ್ಲೂ ಇಂತಹುದೇ ಅಚ್ಚರಿಯ ಆಯ್ಕೆಗಳನ್ನು ಸರಕಾರ ಮಾಡಿದೆ. ಸಮಾಜಸೇವೆ, ಕೃಷಿ, ಪರಿಸರ, ಗಿಡಮೂಲಿಕೆ, ಜಾನಪದ… ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಅಪರಿಚಿತ ಸಾಧಕರ ಹೆಸರೇ ಪದ್ಮ ಪ್ರಶಸ್ತಿ ಪಟ್ಟಿಯಲ್ಲಿ ಕಾಣಸಿಗುತ್ತದೆ. ಇವರೆಲ್ಲರ ಹಿನ್ನೆಲೆಯತ್ತ ದೃಷ್ಟಿ ಹಾಯಿಸಿದಾಗ ಇಂಥವರೂ ನಮ್ಮ ನಡುವೆ ಇದ್ದಾರಲ್ಲ ಎಂದು ಅನಿಸುವುದು ಸಹಜ. ಹಾಗೆಂದು ಇವರ ಸಾಧನೆ ತುಲನಾತೀತ.

ಧರ್ಮ, ಜಾತಿ, ರಾಜಕೀಯ ಒತ್ತಡ, ವಶೀಲಿಬಾಜಿ, ಶಿಫಾರಸುಗಳೆಲ್ಲವನ್ನೂ ಮೆಟ್ಟಿನಿಂತು ಗಣ್ಯಾತಿಗಣ್ಯರ ಜತೆಜತೆಯಲ್ಲಿ ದೇಶದ ಯಾವುದೋ ಒಂದು ಮೂಲೆಯ ಕುಗ್ರಾಮಗಳಲ್ಲಿ ಪ್ರಚಾರ ಬಯಸದೆ ತಮ್ಮ ಪಾಡಿಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ, ಗೌರವಿಸುವ ಸರಕಾರದ ಈ ಕೈಂಕರ್ಯ ಎಲ್ಲ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆಗೂ ಮಾದರಿ. ಪಶಸ್ತಿಯನ್ನು ಅರಸಿಕೊಂಡು ಹೋಗುವುದಕ್ಕಿಂತ ಪ್ರಶಸ್ತಿಯೇ ಸಾಧಕರನ್ನು ಅರಸಿಕೊಂಡು ಬಂದಾಗಲೇ ಆ ಪ್ರಶಸ್ತಿಗೂ, ಸಾಧಕನಿಗೂ ಗೌರವ, ಘನತೆ. ಜತೆಯಲ್ಲಿ ಇಂತಹ ಆಯ್ಕೆ ಪ್ರಕ್ರಿಯೆ, ಜನಸಾಮಾನ್ಯರಲ್ಲೂ ಸಾಧನೆಯ ಬೀಜ ಮೊಳಕೆಯೊಡೆಯುವಂತೆ ಮಾಡುತ್ತದೆ. ಪ್ರಶಸ್ತಿಗಳ ಮಹತ್ವ, ಘನತೆಯ ಬಗೆಗೆ ಅಪಸ್ವರ ಕೇಳಿಬರುತ್ತಿರುವಾಗಲೇ ಸರಕಾರ ಇಂತಹ ಮಾದರಿ ಆಯ್ಕೆ ಪ್ರಕ್ರಿಯೆಗೆ ನಾಂದಿ ಹಾಡಿ ಅದನ್ನು ಮುಂದುವರಿಸಿ ಕೊಂಡು ಬಂದಿರುವುದು ಹೆಮ್ಮೆಯ ವಿಷಯ. ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿಗೆ ಭಾಜನರಾಗಿರುವ ಸಾಧಕರಿಗೆ ಅಭಿನಂದನೆಗಳನ್ನು ಸಲ್ಲಿಸುವ ಜತೆಜತೆಯಲ್ಲಿ ಇಂತಹ ನೈಜ ಸಾಧಕರ ಆಯ್ಕೆಗಾಗಿ ಸರಕಾರಕ್ಕೂ ಶಹಭಾಸ್‌ ಸಲ್ಲಲೇಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next