Advertisement

ಪಡಿಕ್ಕಲ್‌-ನಾಯರ್‌ ಬ್ಯಾಟಿಂಗ್‌ ಹೋರಾಟ ಜಾರಿ

10:08 AM Dec 28, 2019 | sudhir |

ಮೈಸೂರು: ಹಿಮಾಚಲ ಪ್ರದೇಶ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 114 ರನ್‌ ಹಿನ್ನಡೆಗೆ ತುತ್ತಾದ ಆತಿಥೇಯ ಕರ್ನಾಟಕ, ದ್ವಿತೀಯ ಸರದಿಯಲ್ಲಿ ಭರವಸೆಯ ಬ್ಯಾಟಿಂಗ್‌ ಪ್ರದರ್ಶಿಸಿದೆ. ಮೈಸೂರು ರಣಜಿ ಪಂದ್ಯದ 3ನೇ ದಿನದಾಟದ ಅಂತ್ಯಕ್ಕೆ 3 ವಿಕೆಟಿಗೆ 191 ರನ್‌ ಗಳಿಸಿದ್ದು, 77 ರನ್‌ ಮುನ್ನಡೆಯಲ್ಲಿದೆ.

Advertisement

ದೇವದತ್ತ ಪಡಿಕ್ಕಲ್‌ ಮತ್ತು ನಾಯಕ ಕರುಣ್‌ ನಾಯರ್‌ “60 ಪ್ಲಸ್‌’ ಮೊತ್ತದೊಂದಿಗೆ ಹೋರಾಟವನ್ನು ಜಾರಿಯಲ್ಲಿರಿಸಿದ್ದಾರೆ.

ಶನಿವಾರ ಪಂದ್ಯದ ಅಂತಿಮ ದಿನವಾಗಿದ್ದು, ಡ್ರಾ ಸಾಧ್ಯತೆ ತೆರೆದುಕೊಂಡಿದೆ. ಆದರೆ ಉತ್ತಮ ಮುನ್ನಡೆ ಬಳಿಕ ಕರ್ನಾಟಕ ಬೌಲರ್‌ಗಳು ಮ್ಯಾಜಿಕ್‌ ಮಾಡಿದರೆ ಗೆಲ್ಲಲೂಬಹುದು. ಅಕಸ್ಮಾತ್‌ ತೀವ್ರ ಕುಸಿತಕ್ಕೆ ಸಿಲುಕಿದರೆ ಸೋಲಿನ ಭೀತಿಯೂ ಇಲ್ಲದಿಲ್ಲ.

ಆಘಾತಕಾರಿ ಆರಂಭ
ಕರ್ನಾಟಕದ ದ್ವಿತೀಯ ಇನ್ನಿಂಗ್ಸ್‌ ಆರಂಭ ಕೂಡ ಆಘಾತಕಾರಿಯಾಗಿತ್ತು. ಡೇಗ ನಿಶ್ಚಲ್‌ ಕೇವಲ 9 ರನ್‌ ಮಾಡಿ ನಿರ್ಗಮಿಸಿದರು. ಆಗ ಕರ್ನಾಟಕದ ಸ್ಕೋರ್‌ಬೋರ್ಡ್‌ನಲ್ಲಿ 34 ರನ್‌ ದಾಖಲಾಗಿತ್ತು. ಸ್ಕೋರ್‌ 51ಕ್ಕೆ ಏರುವಷ್ಟರಲ್ಲಿ ಮಾಯಾಂಕ್‌ ಅಗರ್ವಾಲ್‌ (34) ಪೆವಿಲಿಯನ್‌ ಸೇರಿಕೊಂಡರು. ಮತ್ತೆ 4 ರನ್‌ ಒಟ್ಟುಗೂಡುವಷ್ಟರಲ್ಲಿ ಆರ್‌. ಸಮರ್ಥ್ (0) ಕೂಡ ಆಟ ಮುಗಿಸಿದರು. ಮೂರೂ ವಿಕೆಟ್‌ ರಿಷಿ ಧವನ್‌ ಪಾಲಾದವು.

ಇಲ್ಲಿಂದ ಮುಂದೆ ಪಡಿಕ್ಕಲ್‌-ನಾಯರ್‌ ಕ್ರೀಸಿಗೆ ಅಂಟಿಕೊಂಡು ನಿಲ್ಲುವುದರೊಂದಿಗೆ ಕರ್ನಾಟಕ ಒಂದು ಹಂತದ ಅಪಾಯದಿಂದ ಪಾರಾಗಿದೆ.
ದೇವದತ್ತ ಪಡಿಕ್ಕಲ್‌ ಮತ್ತು ನಾಯಕ ಕರುಣ್‌ ನಾಯರ್‌ ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶಿಸಿ ತಂಡಕ್ಕೆ ಹೆಚ್ಚಿನ ಹಾನಿಯಾಗದಂತೆ ನೋಡಿಕೊಂಡರು. 153 ಎಸೆತ ಎದುರಿಸಿರುವ ಪಡಿಕ್ಕಲ್‌ 4 ಬೌಂಡರಿ ನೆರವಿನಿಂದ 69 ರನ್‌ ಮಾಡಿ ಆಡುತ್ತಿದ್ದಾರೆ. ನಾಯರ್‌ ಭರ್ತಿ 150 ಎಸೆತ ಎದುರಿಸಿದ್ದು, 62 ರನ್‌ ಮಾಡಿದ್ದಾರೆ (4 ಬೌಂಡರಿ). ಇವರಿಬ್ಬರ 4ನೇ ವಿಕೆಟ್‌ ಜತೆಯಾಟದಲ್ಲಿ ಈಗಾಗಲೇ 136 ರನ್‌ ಒಟ್ಟುಗೂಡಿದೆ.

Advertisement

ಧವನ್‌ ಆಲ್‌ರೌಂಡ್‌ ಶೋ
ಹಿಮಾಚಲ ಪ್ರದೇಶಕ್ಕೆ ರಿಷಿ ಧವನ್‌ ಆಲ್‌ರೌಂಡ್‌ ಆಟದ ಮೂಲಕ ನೆರವಾದರು. 73ರಿಂದ ಬ್ಯಾಟಿಂಗ್‌ ಮುಂದುವರಿಸಿದ ಅವರು 93 ರನ್‌ ಮಾಡಿ ಕೌಶಿಕ್‌ ಬಲೆಗೆ ಬಿದ್ದರು. ಸಂಭಾವ್ಯ ಶತಕದಿಂದ ವಂಚಿತರಾದರು. 141 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ, 3 ಪ್ರಚಂಡ ಸಿಕ್ಸರ್‌ ಇತ್ತು. ಬಳಿಕ ಕರ್ನಾಟಕದ ಮೂರೂ ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡರು.

ಕರ್ನಾಟಕ ಪರ ವಿ. ಕೌಶಿಕ್‌ 59ಕ್ಕೆ 4, ಪ್ರತೀಕ್‌ ಜೈನ್‌ 54ಕ್ಕೆ 3, ಅಭಿಮನ್ಯು ಮಿಥುನ್‌ 47ಕ್ಕೆ 2, ಹಾಗೂ ಜೆ. ಸುಚಿತ್‌ 52ಕ್ಕೆ 1 ವಿಕೆಟ್‌ ಉರುಳಿಸಿದರು.

ಗೆಲುವಿನತ್ತ ದಿಲ್ಲಿ
ಹೊಸದಿಲ್ಲಿ: ಇಶಾಂತ್‌ ಶರ್ಮ ಅವರ ಘಾತಕ ದಾಳಿಯ ನೆರವಿನಿಂದ ಹೈದರಾಬಾದ್‌ ಎದುರಿನ ರಣಜಿ ಪಂದ್ಯದಲ್ಲಿ ಆತಿಥೇಯ ದಿಲ್ಲಿ ಗೆಲುವಿನ ಹೊಸ್ತಿಲಿಗೆ ಬಂದು ನಿಂತಿದೆ. ಕೇವಲ 84 ರನ್‌ ಗೆಲುವಿನ ಗುರಿ ಪಡೆದಿದ್ದು, 3ನೇ ದಿನದಾಟದ ಅಂತ್ಯಕ್ಕೆ ವಿಕೆಟ್‌ ಬಷ್ಟವಿಲ್ಲದೆ 24 ರನ್‌ ಮಾಡಿದೆ.

ದಿಲ್ಲಿಯ 284ಕ್ಕೆ ಜವಾಬು ನೀಡಿದ ಹೈದರಾಬಾದ್‌ ಕೇವಲ 69 ರನ್ನಿಗೆ ಕುಸಿದು ಫಾಲೋಆನ್‌ಗೆ ತುತ್ತಾಯಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಚೇತರಿಸಿಕೊಂಡು 298 ರನ್‌ ಮಾಡಿದರೂ ಲಾಭವೇನೂ ಆಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next