ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಕಳೆದ ಕೆಲವು ದಿನಗಳಿಂದ ಅರಣ್ಯಕ್ಕೆ ಬೆಂಕಿ ತಗಲುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಮಂಗಳವಾರ ಪಡೀಲ್ ಪರಿಸರದ ಎರಡು ಕಡೆ ಅರಣ್ಯಕ್ಕೆ ಬೆಂಕಿ ಬಿದ್ದಿದ್ದು, ಸುತ್ತಲಿನ ಪ್ರದೇಶಗಳಲ್ಲಿ ಕೆಲ ಕಾಲ ಆತಂಕಕ್ಕೆ ಕಾರಣವಾಯಿತು.
ಪಡೀಲಿನ ದರ್ಬಾರ್ ಗುಡ್ಡೆ ಮತ್ತು ಕರ್ಮಾರ್ ಬಳಿಯ ಪರಿಸರದಲ್ಲಿ ಮಧ್ಯಾಹ್ನ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಅಧಿಕಾರಿಗಳು ರಾತ್ರಿ ವೇಳೆ ಬಹುತೇಕ ಬೆಂಕಿ ಆರಿಸುವಲ್ಲಿ ಸಫಲರಾಗಿದ್ದಾರೆ.
ದರ್ಬಾರ್ ಗುಡ್ಡೆಯಲ್ಲಿ ಬೆಳಗ್ಗೆ ಸುಮಾರು 11ಕ್ಕೆ, ಕರ್ಮಾರ್ ಬಳಿ ಮಧ್ಯಾಹ್ನ ಬಳಿಕ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಅರಣ್ಯದಲ್ಲಿರುವ ಕುರುಚಲು ಗಿಡ, ಹುಲ್ಲು, ಕೆಲವೊಂದು ತೆಂಗಿನ ಮರಗಳು ಬೆಂಕಿಗೆ ಆಹುತಿಯಾಗಿವೆ. ಅಕ್ಕಪಕ್ಕದಲ್ಲಿ ಹೆಚ್ಚಿನ ಮನೆ ಇಲ್ಲದ ಕಾರಣ ದೊಡ್ಡ ಮಟ್ಟಿನ ಅನಾಹುತ ಸಂಭವಿಸಿಲ್ಲ. ಕಳೆದ ಕೆಲವು ದಿನಗಳ ಹಿಂದೆ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿತ್ತು.
ಸ್ಥಳೀಯ ಮನಪಾ ಸದಸ್ಯೆ ಚಂದ್ರಾವತಿ ವಿಶ್ವನಾಥ್ ಪ್ರತಿಕ್ರಿಯಿಸಿ, “ಪಡೀಲ್ ಪರಿಸರದ ಅರಣ್ಯಕ್ಕೆ ಬೆಂಕಿ ತಗಲಿದ್ದು, ಮಧ್ಯಾಹ್ನದಿಂದ ರಾತ್ರಿಯವರೆಗೆ ಅಗ್ನಿಶಾಮಖ ದಳದ ಅಧಿಕಾರಿಗಳು ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಮಧ್ಯಾಹ್ನ ಗಾಳಿಯ ವೇಗ ಹೆಚ್ಚಿದ್ದ ಕಾರಣ ಮತ್ತಷ್ಟು ಕಡೆ ಬೆಂಕಿ ಹರಡುತ್ತಿತ್ತು. ಇದರಿಂದಾಗಿ ಬೆಂಕಿ ನಿಯಂತ್ರಣ ಕಷ್ಟವಾಯಿತು. ಸಾರ್ವಜನಿಕರು ಕೂಡ ಬೆಂಕಿ ನಂದಿಸಲು ಸಹಕರಿಸಿದ್ದಾರೆ’ ಎಂದರು.