Advertisement

ಭತ್ತಕ್ಕೆ ಕುತ್ತು!

11:26 PM Aug 02, 2019 | Sriram |

ಕುಂದಾಪುರ: ಮಳೆಗಾಲದಲ್ಲಿ ಪಚ್ಚೆ ಪೈರಿನಿಂದ ಕಂಗೊಳಿಸಿ ರೈತನ ಮುಖದಲ್ಲಿ ಮುಗುಳ್ನಗು ತರಿಸಬೇಕಿದ್ದ ಭತ್ತದ ಕೃಷಿ ಅಕಾಲದ ಬಿಸಿಲು, ಸಕಾಲದಲ್ಲಿ ಬರದ ಮಳೆಯಿಂದ ನಲುಗುತ್ತಿದೆ. ಜತೆಗೆ ಕಳೆ ಬಾಧೆ, ರೋಗ ಬಾಧೆ.

Advertisement

ಇದೆಲ್ಲದರೊಂದಿಗೆ ಕರಾವಳಿಯಲ್ಲಿ ಅಕ್ಟೋಬರ್‌ ಹಾಗೂ ರಾಜ್ಯದಲ್ಲಿ ಡಿಸೆಂಬರ್‌ ವೇಳೆಗೆ ನಿರೀಕ್ಷಿತ ಪ್ರಮಾಣದ ಭತ್ತದ ಉತ್ಪಾದನೆಯಾಗದಿದ್ದರೆ ಬೇಸಗೆಯಲ್ಲಿ ಅಕ್ಕಿಗೆ ಬರ ಉಂಟಾಗಲಿದೆ. ಹೇಳಿಕೇಳಿ ಕರ್ನಾಟಕ ಅಕ್ಕಿಯ ವಿಷಯದಲ್ಲಿ ಸ್ವಾವಲಂಬಿಯಲ್ಲ. ಆಂಧ್ರ ಪ್ರದೇಶ, ಉತ್ತರಭಾರತ ಸೇರಿದಂತೆ ವಿವಿಧೆಡೆಯಿಂದ ಭತ್ತ ಬೇಕು.

ಕಳೆಯಿಂದ ನಾಶ
ಕಳೆದ ಬಾರಿ ತಾಲೂಕಿನ ವಿವಿಧೆಡೆ ಸುಗ್ಗಿ ಭತ್ತದ ಬೆಳೆ ಗದ್ದೆಯಲ್ಲಿ ಕಟಾವಿನ ವೇಳೆ ರಾಗಿ ಚೆಂಡಿನಂತಹ ಕೋಳಿ ಆಹಾರದ ಮಾದರಿಯ ವಿಚಿತ್ರ ಕಳೆಗಿಡ ಕಾಣಿಸಿಕೊಂಡಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂದು ರೈತರು ಪರಿತಪಿಸುತ್ತಿದ್ದರು. ನೂರಾರು ಎಕರೆ ಗದ್ದೆಯಲ್ಲಿ ಒಂದೇ ನಮೂನೆಯ ಕಳೆಗಿಡ ಇದ್ದು ಯಾವುದೇ ಇಲಾಖೆಗಳಿಂದ ಇದಕ್ಕೆ ಇನ್ನೂ ಪರಿಹಾರ ದೊರೆತಿರಲಿಲ್ಲ. ಭತ್ತದ ಗದ್ದೆಯೋ ರಾಗಿ ಗದ್ದೆಯೋ ಎಂದು ಅನುಮಾನ ಬರುವಂತೆ ಕಳೆಗಿಡ ತುಂಬಿದ ದೃಶ್ಯ ಕಾಣುವಾಗ ರೈತನ ಶ್ರಮದ ದುಡಿಮೆ ವ್ಯರ್ಥವಾದುದಕ್ಕಾಗಿ ಕರುಳು ಚುರುಕ್‌ ಎನ್ನುತ್ತಿತ್ತು. ಈ ಕುರಿತು ಉದಯವಾಣಿ ವರದಿ ಪ್ರಕಟಿಸಿತ್ತು. ಅನಂತರ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಬಂದು ಪರಿಹಾರ ಸೂಚಿಸಿದ್ದರು.

ವರ್ಷಗಳಿಂದ
ಮೂರು ವರ್ಷಗಳ ಹಿಂದೆ ಈ ಭಾಗದಲ್ಲೆಲ್ಲಾ ಆಫ್ರಿಕಾದ ಬಸವನಹುಳದ ಬಾಧೆ ಕಾಣಿಸಿತ್ತು. ಅದನ್ನು ಹೇಗೋ ಏನೋ ಎಂದು ಸುಧಾರಿಸಿ ಏಗುವಷ್ಟರಲ್ಲಿ ಕಳೆ ಸಮಸ್ಯೆ ಕಾಣಿಸಿದೆ. ಕಳೆ ಗಿಡ ರಾಗಿ ಗಿಡದ ಮಾದರಿಯಲ್ಲಿ ತೆನೆಹೊತ್ತಂತೆ ಬಂದಿತ್ತು. ಕಳೆದ ವರ್ಷ ಇದರ ಪ್ರಮಾಣ ಹೆಚ್ಚಾಗಿತ್ತು. ಇದರಿಂದಾಗಿ ಸುಗ್ಗಿ ಬೆಳೆಯ ಮೇಲೆ ಪರಿಣಾಮ ಆಗಿದ್ದು ಕಟಾವಿಗೂ ಸಮಸ್ಯೆಯಾಗಿ, ಖಾತಿ ಬೆಳೆಗೂ ತೊಂದರೆ ಮುಂದುವರಿದಿತ್ತು. ಈ ಬಾರಿ ಅದೇ ಸಮಸ್ಯೆ ಬೇಗನೇ ಕಾಣಿಸಿಕೊಂಡಿದ್ದು ಬಿತ್ತಿದ್ದೆಲ್ಲಾ ನಾಶವಾಗಿದೆ.
ಶಂಕರನಾರಾಯಣ, ಹಾಲಾಡಿ ಸೇರಿದಂತೆ ವಂಡ್ಸೆ ಹೋಬಳಿಯಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಇದೆಲ್ಲದರ ತಲೆಬಿಸಿಯ ಮಧ್ಯೆ ತಾಲೂಕಿನ ಹಾಲಾಡಿ ಸೇರಿದಂತೆ ವಿವಿಧೆಡೆ ನೇಜಿ ಕೆಂಪಗಾಗುವ ಸಮಸ್ಯೆಯೂ ಕಾಣಿಸಿದೆ. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ನವೀನ್‌ ಮಳೆ ನಿರಂತರ ಬರದೇ ಮಣ್ಣು ಬಿಸಿಯಾಗಿ ಫಂಗಸ್‌ ಬಂದ ಕಾರಣದಿಂದ ಇರಬಹುದು ಎನ್ನುತ್ತಾರೆ.

ಅನೇಕ ಕಡೆ ತೆರಳಿ ಮಾಹಿತಿ ನೀಡಿದ್ದಾರೆ. ಯಂತ್ರ ನಾಟಿ ಮಾಡಿದ್ದರೆ ಕಳೆ ಸಮಸ್ಯೆ ಬರುವುದಿಲ್ಲ, ನೇರ ನಾಟಿ ಮಾಡಿದ್ದೇ ಸಮಸ್ಯೆಗೆ ಕಾರಣ ಎನ್ನುತ್ತಾರೆ ಕೃಷಿಕ ರಾಘವೇಂದ್ರ ಹಾಲಾಡಿ ಅವರು.

Advertisement

ಕರಾವಳಿ ಪ್ಯಾಕೇಜ್‌
ಕರಾವಳಿಯ ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭತ್ತ ಬೇಸಾಯಕ್ಕೆ ಪ್ರೋತ್ಸಾಹಕ ಕ್ರಮವಾಗಿ ರಾಜ್ಯ ಸರಕಾರವು ಮಾರ್ಚ್‌ನ ಬಜೆಟ್‌ನಲ್ಲಿ ಪ್ರತೀ ಹೆಕ್ಟೇರಿಗೆ 7,500 ರೂ., ಎಕರೆಗೆ 3,000 ರೂ.ಗಳ ಪ್ರೋತ್ಸಾಹಧನವನ್ನು “ಕರಾವಳಿ ಪ್ಯಾಕೇಜ್‌’ ಆಗಿ ನೀಡಲು ನಿರ್ಧರಿಸಿದೆ. ಕೂರಿಗೆ ಪದ್ಧತಿ ಅಥವಾ ನೇರ ಬಿತ್ತನೆ ಹಾಗೂ ಯಂತ್ರ ಬಿತ್ತನೆ ಮಾಡಿದವರಿಗೆ ಈ ಸೌಲಭ್ಯ ದೊರೆಯಲಿದೆ. ಇದಕ್ಕೆ ರೈತ ಸಂಪರ್ಕ ಕೇಂದ್ರ, ತಾಲೂಕು ಕೃಷಿ ಇಲಾಖೆಯಲ್ಲಿ ಅರ್ಜಿ ಕೊಟ್ಟರೆ ಇಲಾಖಾಧಿಕಾರಿಗಳೇ ಪರಿಶೀಲಿಸಿ ನೇರ ಖಾತೆಗೆ ಅನುದಾನ ನೀಡುತ್ತಾರೆ. 2016ರಲ್ಲಿ ಇಲಾಖೆ ಇಂತಹ ಪ್ರೋತ್ಸಾಹ ನೀಡಬೇಕೆಂದು ಪ್ರಸ್ತಾವನೆ ಸಲ್ಲಿಸಿತ್ತು.

ಕಡಿಮೆ ಬಿತ್ತನೆ
ಈ ಮುಂಗಾರಿಗೆ ಉಡುಪಿ ಜಿಲ್ಲೆಯಲ್ಲಿ 36 ಸಾವಿರ ಹೆಕ್ಟೇರ್‌ ಗುರಿ ಹಾಕಿಕೊಳ್ಳಲಾಗಿದ್ದರೂ 19,765 ಹೆಕ್ಟೇರ್‌ ಮಾತ್ರ ಬಿತ್ತನೆಯಾಗಿದೆ. 2018-19ರ ಮುಂಗಾರಿನಲ್ಲಿ 35,478 ಹೆಕ್ಟೇರ್‌ನಲ್ಲಿ 1.64 ಲಕ್ಷ ಟನ್‌ ಭತ್ತ ಬೆಳೆದಿತ್ತು. 2019-20ರಲ್ಲಿ 36 ಸಾವಿರ ಹೆಕ್ಟೇರ್‌ನಲ್ಲಿ 1.58 ಲಕ್ಷ ಟನ್‌ ಗುರಿ ಹೊಂದಲಾಗಿದ್ದು 55 ಶೇ. ಗುರಿ ಸಾಧಿಸಿದೆ. ಕುಂದಾಪುರ ತಾಲೂಕಿನಲ್ಲಿ 9,525 ಹೆಕ್ಟೇರ್‌ ಭತ್ತ ಬೆಳೆಯಲಾಗಿದ್ದು ಕಾರ್ಕಳ ತಾಲೂಕಿನಲ್ಲಿ 2,560 ಹೆಕ್ಟೇರ್‌, ಉಡುಪಿ ತಾಲೂಕಿನಲ್ಲಿ 7,680 ಹೆಕ್ಟೇರ್‌ ಬೆಳೆಯಲಾಗಿದೆ. ದ.ಕ. ಜಿಲ್ಲೆಯಲ್ಲಿ 2018-19ರಲ್ಲಿ 27,800 ಹೆ.ನಿಂದ, 2019-20ರಲ್ಲಿ 15,900 ಹೆಕ್ಟೇರ್‌ಗೆ ಇಳಿದಿದೆ.

ಮಳೆ ಕೊರತೆ
ಜುಲೈಯಲ್ಲಿ 2,064 ಮಿ.ಮೀ. ಮಳೆಯಾಗಬೇಕಿದ್ದು ಕಳೆದ ವರ್ಷ 2,512 ಮಿ.ಮೀ. ಮಳೆಯಾಗಿತ್ತು. ಈ ವರ್ಷ ಕೇವಲ 1,283 ಮಿ.ಮೀ. ಮಳೆಯಾದ ಕಾರಣ ಭತ್ತಕ್ಕೆ ತೊಂದರೆಯಾಗಿದೆ. ಸಾಧಾರಣವಾಗಿ ಜನವರಿಯಿಂದ ಮೇ ವರೆಗೆ 201.6 ಮಿ.ಮೀ. ಮಳೆಯಾಗಬೇಕಿದ್ದು ಕಳೆದ ವರ್ಷ 433.37 ಮಿ.ಮೀ. ಮಳೆಯಾಗಿತ್ತು. ಈ ವರ್ಷ ಕೇವಲ 29 ಮಿ.ಮೀ. ಮಳೆಯಾಗಿದೆ.

5 ಎಕರೆ ನಾಶ
ಕಳೆನಾಶಕ ಹಾಕಿ ನೇರಬಿತ್ತನೆ ಮಾಡಿದ 5 ಎಕರೆ ಪೂರ್ತಿ ನಾಶವಾಗಿದೆ. ವಿಜ್ಞಾನಿಗಳ ಮಾತು ನಂಬಿ ಕೆಟ್ಟೆ.
-ಸುಬ್ಬಣ್ಣ ಶೆಟ್ಟಿ ಹೇರಿಬೈಲು, ಶಂಕರನಾರಾಯಣ

ಸಮಸ್ಯೆ ಆಗದು
ಪಾರಂಪರಿಕ ಪದ್ಧತಿಯಂತೆ ಬಿತ್ತನೆಗೆ ಇನ್ನೂ 15 ದಿನಗಳ ಅವಕಾಶವಿದೆ. ಬಿಸಿಲು-ಮಳೆ ಭತ್ತಕ್ಕೆ ಪೂರಕ. ಬಿತ್ತನೆಯಾಗಿ 2-3 ತಿಂಗಳ ಅನಂತರ 2-3 ಇಂಚು ನೀರು ನಿಲ್ಲಬೇಕು. ಈಗ ತೇವಾಂಶ ಸಾಕಾಗುತ್ತದೆ. ಹಾಗಾಗಿ ಮಳೆ ಕೊರತೆಯಿಂದ ಸಮಸ್ಯೆಯಿಲ್ಲ. ನೇಜಿ ಕೆಂಪಾಗಲು ಬೇಗನೇ ಬಿತ್ತಿದ್ದು ಕಾರಣ.
-ಕೆಂಪೇಗೌಡ,
ಜಿಲ್ಲಾ ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಉಡುಪಿ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next