Advertisement
ಹೌದು, ಧೋನಿ ಪ್ರತಿಭಾವಂತ, ಯಶಸ್ಸು ಧೋನಿ ಬೆನ್ನಟ್ಟಿಕೊಂಡು ಬಂದಿವೆ. ತಾಳ್ಮೆ ಎನ್ನುವ ಅಸ್ತ್ರವನ್ನೇ ಮುಂದಿಟ್ಟಿರುವ ಧೋನಿ ಮುಟ್ಟಿದ್ದೆಲ್ಲ ಚಿನ್ನ. ಕೂಲ್ ಕ್ಯಾಪ್ಟನ್‌ಗೆ ಸಿಟ್ಟುಬರುವುದೇ ಅಪರೂಪ. ಎಂತಹ ಒತ್ತಡವನ್ನಾದರೂ ಧೋನಿ ಬಹಳ ನಾಜೂಕಾಗಿ ನಿಭಾಯಿಸುತ್ತಾರೆ. ಅಷ್ಟು ಸಲೀಸಾಗಿ ಕಠಿಣ ಸಂದರ್ಭ ನಿರ್ವಹಿಸುವುದು ಕಷ್ಟ. ಆದರೆ ಧೋನಿಗೆ ಅದು ನೀರು ಕುಡಿದಷ್ಟೇ ಸುಲಭ. ತಂಡದ ಹಿರಿಯ ಆಟಗಾರ ಆಗಿರಲಿ ಅಥವಾ ಕಿರಿಯ ಆಟಗಾರ ಆಗಿರಲಿ, ಯಾರ ಹತ್ತಿರ ಎಷ್ಟು ಪ್ರತಿಭೆ ಇದೆ. ಅದನ್ನು ಹೇಗೆ, ಯಾವಸಂದರ್ಭದಲ್ಲಿ ಹೊರಗೆ ತೆಗೆಯಬೇಕು ಎನ್ನುವ ಕಲೆ ಧೋನಿಗೆ ರಕ್ತದಲ್ಲೇ ಕರಗತ. ಹೀಗಾಗಿಯೇ ಅಭಿಮಾನಿಗಳು ಧೋನಿಯನ್ನು “ಕೂಲ್
ಕ್ಯಾಪ್ಟನ್’ ಎಂದು ಕೆರೆಯುವುದು. ಅಂತಹ ನಾಯಕ ಜೀವನದುದ್ದಕ್ಕೂ ಶಿಸ್ತನ್ನು ಅಳವಡಿಸಿಕೊಂಡಿದ್ದರು, ಅಭ್ಯಾಸಕ್ಕೆ ಆಟಗಾರರು ತಡವಾಗಿ ಬಂದಾಗ ಅದನ್ನು ತುಂಬಾ ಸ್ವಾರಸ್ಯಕರ ರೀತಿಯಲ್ಲಿ ನಿರ್ವಹಿಸುತ್ತಿದ್ದರು. ಈ ಬಗ್ಗೆ ಭಾರತ ಕ್ರಿಕೆಟ್‌ನ ಮಾನಸಿಕ ನಿರ್ವಹಣಾ ಕೋಚ್ ಪ್ಯಾಡಿ ಅಪ್ಟನ್ ತಮ್ಮ ಪುಸ್ತಕ “ಬೇರ್‌ಫೋಟ್’ನಲ್ಲಿ ಬಿಚ್ಚಿಟ್ಟಿದ್ದಾರೆ.
ಅಪ್ಟನ್ ಹೇಳಿದ್ದು ಹೀಗೆ, ನಾನು ಮಾನಸಿಕ ನಿರ್ವಹಣಾ ಕೋಚ್ ಆಗಿ ಭಾರತ ತಂಡವನ್ನು ಕೂಡಿಕೊಂಡಿದ್ದಾಗ ಅನಿಲ್ ಕುಂಬ್ಳೆ ಟೆಸ್ಟ್ ತಂಡದ ನಾಯಕರಾಗಿದ್ದರು. ಧೋನಿ ಏಕದಿನ ತಂಡವನ್ನು ಮುನ್ನಡೆಸುತ್ತಿದ್ದರು. ಆಗ ತಂಡದಲ್ಲಿ ಹಲವಾರು ಬದಲಾವಣೆ ಮಾಡಿಕೊಳ್ಳಲಾಯಿತು. ಅಭ್ಯಾಸಕ್ಕೆ ಹಾಗೂ ತಂಡದ ಸಭೆಗಳಿಗೆ ತಡವಾಗಿ ಬಂದವರಿಗೆ ಶಿಕ್ಷೆಯ ಪ್ರಮಾಣ 10 ಸಾವಿರ ರೂ. ದಂಡ ಹಾಕಲು ನಿರ್ಧರಿಸಲಾಯಿತು. ಟೆಸ್ಟ್ ತಂಡದ ನಾಯಕ ಅನಿಲ್ ಕುಂಬ್ಳೆ ಹಾಗೂ ಎಂ.ಎಸ್.ಧೋನಿ ಇದನ್ನು ಪಾಲಿಸಿದರು. ಧೋನಿ ಭಾರತ ತಂಡ ನಾಯಕರಾಗಿದ್ದ ಸಂದರ್ಭದಲ್ಲಿ ಆಟಗಾರರು ಕಡ್ಡಾಯವಾಗಿ ಅಭ್ಯಾಸಕ್ಕೆ ಸಮಯಕ್ಕೆ ಸರಿಯಾಗಿ ಆಗಮಿಸಬೇಕಿತ್ತು. ಆಟಗಾರರು ಅಭ್ಯಾಸಕ್ಕೆ ತಡವಾಗಿ ಬಂದಾಗ ಧೋನಿ ಸಿಟ್ಟಿನಿಂದ ಕೂಗುತ್ತಿರಲಿಲ್ಲ. ಬದಲಿಗೆ 10 ಸಾವಿರ ರೂಪಾಯಿ ಶಿಕ್ಷೆಯನ್ನು ಮರು ಮಾತಿಲ್ಲದೆ ಒಪ್ಪಬೇಕಾಗಿತ್ತು. ಹೀಗಾಗಿ ಯಾರೂ ತಡ ಮಾಡುತ್ತಿರಲಿಲ್ಲ ಎಂದು ಅಪ್ಟನ್ ವಿವರಿಸಿದ್ದಾರೆ.