ವರದಿ : ಕೆ. ನಿಂಗಜ್ಜ
ಗಂಗಾವತಿ: ಹಿಂಗಾರು ಭತ್ತ ಬೆಳೆದ ರೈತರ ಬದುಕನ್ನು ಕೊರೊನಾ ಲಾಕ್‌ಡೌನ್ ಮತ್ತು ಅಕಾಲಿಕ ಮಳೆ ಸಂಪೂರ್ಣ ಮುಳುಗಿಸಿದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಾಗಿ ಭತ್ತವನ್ನು ಬೆಳೆಯಲಾಗುತ್ತಿದೆ. ಸದ್ಯ ಕೊರೊನಾ ಲಾಕ್‌ಡೌನ್ ಮತ್ತು ಮಳೆಯ ಕಾರಣ ಭತ್ತ ಖರೀದಿ ಮಾಡಲು ವ್ಯಾಪಾರಸ್ಥರು ಮುಂದೆ ಬರುತ್ತಿಲ್ಲ. ಸ್ವತಃ ರೈತರೇ ಭತ್ತ ಮಾರಾಟಕ್ಕೆ ನಗರಕ್ಕೆ ಆಗಮಿಸಿದರೆ ಪೊಲೀಸರ ಲಾಠಿ ಏಟು ತಿನ್ನಬೇಕಾಗುತ್ತದೆ. ಇದರಿಂದಾಗಿ ಭತ್ತದ ರಾಶಿಗಳು ರಸ್ತೆ ಮೇಲೆ, ಗದ್ದೆಗಳಲ್ಲಿ, ದೇಗುಲ ಮುಂದಿನ ಪ್ರಾಂಗಣದಲ್ಲಿ ಒಂದು ತಿಂಗಳಿಂದ ಹಾಗೇ ಇವೆ. ದಲಾಲಿ ಅಂಗಡಿಗಳ ಗುಮಾಸ್ತರು ಭತ್ತ ಖರೀದಿ ಮಾಡಲು ಬಂದರೂ ಕಡಿಮೆ ದರಕ್ಕೆ ಕೇಳುತ್ತಿದ್ದಾರೆ.
ಸದ್ಯ (75ಕೆಜಿ) ಕ್ವಿಂಟಲ್ ಭತ್ತಕ್ಕೆ 1150-1250 ರೂ. ದರ ಇದ್ದು, ರೈತರು ಮಾಡಿದ ಖರ್ಚಿಗೆ ಈ ದರ ಯಾವುದಕ್ಕೂ ಸಾಲುವುದಿಲ್ಲ. ಆದ್ದರಿಂದ ಭತ್ತಕ್ಕೆ ಇನ್ನಷ್ಟು ದರ ಬರಲಿ ಎಂದು ರಾಶಿ ಹಾಕಿ ಕಾಯುತ್ತಿದ್ದಾರೆ. ಈ ಮಧ್ಯೆ ಅಕಾಲಿಕ ಮಳೆಗೆ ಹಾಕಿದ್ದ ಭತ್ತದ ರಾಶಿಗಳು ನೀರಿನಲ್ಲಿ ತೋಯ್ದು ಹೋಗಿ ರೈತರಿಗೆ ದಿಕ್ಕು ತೋಚದಂತಾಗಿದೆ.
ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ರೈತರಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಹೇಳುವ ಸರಕಾರ ಎಪಿಎಂಸಿ ಹಾಗೂ ದಲಾಲಿ ಅಂಗಡಿಗಳನ್ನು ಮುಚ್ಚಲು ಸೂಚನೆ ನೀಡಿದೆ. ಗೊಬ್ಬರದಂಗಡಿ ಮಾತ್ರ ತೆರೆದು ರೈತರಿಗೆ ಬೇಕಾಗುವ ತರಕಾರಿ, ಹೂವು, ಹಣ್ಣು, ಭತ್ತ ಖರೀದಿ ಮಾಡುವ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ. ಇದರಿಂದ ರೈತರ ಬದುಕು ಸಂಕಷ್ಟದಲ್ಲಿದೆ. ಮುಂದಿನ ಮುಂಗಾರು ಹಂಗಾಮಿನಲ್ಲಿ ಭತ್ತ ನಾಟಿ ಮಾಡಲು ಇನ್ನೆರೆಡು ತಿಂಗಳಲ್ಲಿ ಭತ್ತದ ಬೀಜ ಹಾಕುವ ಸಂದರ್ಭವಿದ್ದು, ರಸಗೊಬ್ಬರ ಮತ್ತು ಕ್ರಿಮಿನಾಶಕ ದರ ದುಪ್ಪಟ್ಟಾಗಿದೆ. ಕೊರೊನಾ ಲಾಕ್‌ಡೌನ್ ನಿಯಮಗಳ ಗೊಂದಲದಿಂದಾಗಿ ಎಪಿಎಂಸಿ ವರ್ತಕರು ಭತ್ತ ಖರೀದಿ ಮಾಡಲು ಮನೆಯಿಂದ ಹೊರಗೆ ಬರುತ್ತಿಲ್ಲ.
ಇನ್ನೂ ಲಾಕ್ ಡೌನ್‌ನಿಂದಾಗಿ ಮದುವೆ, ಜಾತ್ರೆ ಸೇರಿ ಜನ ಸೇರುವ, ದಾಸೋಹ ನಡೆಯುವ ಯಾವ ಕಾರ್ಯಕ್ರಮಗಳಿಲ್ಲ. ಖಾನಾವಳಿ ರೆಸಾರ್ಟ್‌ಗಳು ಬಂದ್ ಆಗಿದ್ದು, ಅಕ್ಕಿಗೆ ಬೇಡಿಕೆಯಿಲ್ಲವಾಗಿದೆ. ಇದರಿಂದಾಗಿ ವ್ಯಾಪಾರಿಗಳು ಭತ್ತ ಖರೀದಿಗೆ ಮುಂದೆ ಬರುತ್ತಿಲ್ಲ. ಕೊರೊನಾ ಸಂಕಷ್ಟ ಸಂದರ್ಭದಲ್ಲಿ ರೈತರ ಭತ್ತವನ್ನು ಖರೀದಿ ಮಾಡಲು ಆರಂಭಿಸಿರುವ ಭತ್ತ ಖರೀದಿ ಕೇಂದ್ರಗಳ ನಿಯಮಗಳಲ್ಲಿ ಬದಲಾವಣೆ ಮಾಡಬೇಕು. ಬೆಂಬಲ ಬೆಲೆ ಹೆಚ್ಚು ಮಾಡಬೇಕಿದೆ. ರಸಗೊಬ್ಬರ ದರ ಇಳಿಕೆಯಾಗಬೇಕು. ಇದರಿಂದ ಮಾತ್ರ ರೈತರನ್ನು ಕಷ್ಟದಿಂದ ದೂರ ಮಾಡಲು ಸಾಧ್ಯ.