ಸಿರುಗುಪ್ಪ: ರೈತರು ತಾಲೂಕಿನಾದ್ಯಂತ ಸುಮಾರು 31ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದ ಸೋನಾಮಸೂರಿ, ಆರ್ ಎನ್‌ಆರ್ 64, ನೆಲ್ಲೂರು ಸೋನಾ ತಳಿಯ ಭತ್ತದ ಬೆಳೆಯು ಈಗ ಕಟಾವಿಗೆ ಬಂದಿದ್ದು, ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಕುಸಿದಿರುವುದು ಮತ್ತು ಭತ್ತ ಖರೀದಿಗೆ ವ್ಯಾಪಾರಿಗಳು ಬರದೇ ಇರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ.
ಈಗಾಗಲೇ ಶೇ. 40ರಷ್ಟು ಭೂಮಿಯಲ್ಲಿ ಭತ್ತ ಕೊಯ್ಲು ಕಾರ್ಯ ಮುಗಿದಿದ್ದು, ರೈತರು ಕೊಯ್ಲು ಮಾಡಿದ ಭತ್ತವನ್ನು ರಾಶಿ ಹಾಕಿಕೊಂಡು ಖರೀದಿಸುವ ವ್ಯಾಪಾರಿಗಳಿಗಾಗಿ ಕಾಯುತ್ತಿದ್ದಾರೆ. ಆದರೆ ಕೇವಲ ಬೆರಳೆಣಿಕೆಯಷ್ಟು ಮಾತ್ರ ವ್ಯಾಪಾರಿಗಳು ಭತ್ತವನ್ನು ಖರೀದಿ ಮಾಡುತ್ತಿರುವುದರಿಂದ ತಾಲೂಕಿನ ಎಪಿಎಂಸಿ ಆವರಣಗಳು ಮತ್ತು ಗದ್ದೆಗಳಲ್ಲಿ ಭತ್ತದ ರಾಶಿಗಳು ಹೆಚ್ಚಾಗಿ ಕಂಡುಬರುತ್ತಿವೆ.
ಕಳೆದ ವರ್ಷ ಒಂದು ಕ್ವಿಂಟಲ್ ಸೋನಾಮಸೂರಿ ಭತ್ತ ರೂ. 2 ಸಾವಿರಕ್ಕೆ ಮಾರಾಟವಾಗಿತ್ತು. ಆದರೆ ಈ ವರ್ಷ ರೂ. 1740-1770ಕ್ಕೆ ಮಾರಾಟವಾಗುತ್ತಿದೆ. ನೆಲ್ಲೂರು ಸೋನಾ ರೂ. 1640, ಆರ್‌ಎನ್‌ಆರ್ ಭತ್ತ ರೂ. 1700-1740ಕ್ಕೆ ಸದ್ಯ ಮಾರಾಟವಾಗುತ್ತಿದೆ. ಸರ್ಕಾರವು ಎ ದರ್ಜೆಯ ಭತ್ತಕ್ಕೆ 1835 ರೂ., ಸಾಮಾನ್ಯ ಭತ್ತಕ್ಕೆ 1815 ರೂ. ಬೆಂಬಲ ಬೆಲೆ ನಿಗದಿಮಾಡಿದೆ. ಆದರೆ ಖರೀದಿದಾರರು ಮಾತ್ರ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಭತ್ತ ಖರೀದಿ ಮಾಡುತ್ತಿದ್ದಾರೆ. ಅಲ್ಲದೆ ಭತ್ತವನ್ನುಕೊಳ್ಳಲು ಪ್ರತಿವರ್ಷ ತಮಿಳುನಾಡು, ಗಂಗಾವತಿ, ಸಿಂಧನೂರು, ಕಾರಟಗಿ, ತುಮಕೂರು, ಬಳ್ಳಾರಿ, ಸಿರುಗುಪ್ಪ ಮುಂತಾದ ಕಡೆಗಳಿಂದ ಭತ್ತವನ್ನು ಖರೀದಿಸಲು ವ್ಯಾಪಾರಸ್ಥರು ಬರುತ್ತಿದ್ದರು. ಆದರೆ ಈ ವರ್ಷ ವ್ಯಾಪಾರಿಗಳು ಬರದ ಕಾರಣ
ಕೇವಲ ಸಿರುಗುಪ್ಪ ರೈಸ್‌ಮಿಲ್‌ನ ಕೆಲವರು ಮಾತ್ರ ಬರುತ್ತಿರುವುದರಿಂದ ರೈತರ ಭತ್ತಕ್ಕೆ ಬೇಡಿಕೆ ಹೆಚ್ಚಾಗುತ್ತಿಲ್ಲ. ಅಲ್ಲದೆ ಅಕ್ಕಿಯನ್ನು ವಿದೇಶಗಳಿಗೆ ರಫು¤ಮಾಡಲು ನಿರ್ಬಂಧ ಹಾಕಿರುವುದರಿಂದ ಈಗಾಗಲೇ ನುರಿಸಿರುವ ಅಕ್ಕಿಯು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿಲ್ಲ. ಇದರಿಂದಾಗಿ ಅಕ್ಕಿಗಿರಣಿಯ ಮಾಲೀಕರು ಭತ್ತ ಖರೀದಿಸಲು ಮುಂದೆ ಬರುತ್ತಿಲ್ಲ.
-ಆರ್.ಬಸವರೆಡ್ಡಿ ಕರೂರು