Advertisement

ಹಡೀಲು ಗದ್ದೆಯಲ್ಲಿ ಭತ್ತ ಬೆಳೆದು ದೀನದಲಿತರ ಸೇವೆ

11:58 PM Feb 08, 2020 | Team Udayavani |

ವಿಶೇಷ ವರದಿ-ಬೆಳ್ತಂಗಡಿ : ಕೆಥೋಲಿಕ್‌ ಪವಿತ್ರ ಧರ್ಮಸಭೆಯ ಮಂಗಳೂರು ಧರ್ಮಪ್ರಾಂತದ ಬಿಷಪರಾದ ವಂ| ಡಾ| ಪೀಟರ್‌ ಪೌಲ್‌ ಸಲ್ಡಾನ್ಹಾ ಅವರು ಲಾವಾªತೊಸಿ ಯೋಜನೆಯಡಿ ಗಿಡ ನೆಟ್ಟು ಕಾಡು ಬೆಳೆಸುವ ಹಾಗೂ ಗದ್ದೆಗಳಲ್ಲಿ ಬೇಸಾಯ ನಡೆಸಿ ಚರ್ಚ್‌ ವ್ಯಾಪ್ತಿಯ ಪ್ರತಿಯೊಬ್ಬರು ಹಸುರು ಕ್ರಾಂತಿ ಯೋಜನೆ ಕೈಗೊಳ್ಳುವಂತೆ ಕರೆ ನೀಡಿದ್ದರು. ಯೋಜನೆಯ ರೂಪವಾಗಿ ಬೆಳ್ತಂಗಡಿ ತಾಲೂಕಿನ ಮಂಜೊಟ್ಟಿಯಲ್ಲಿರುವ ಪವಿತ್ರ ಶಿಲುಬೆಗೆ ಸಮರ್ಪಿಸಿದ ಚರ್ಚ್‌ ವ್ಯಾಪ್ತಿಯಲ್ಲಿ ಹಡೀಲು ಬಿದ್ದಿರುವ ಗದ್ದೆಯಲ್ಲಿ ಬೇಸಾಯ ಮಾಡಿ ದೀನದಲಿತರ ಸೇವೆಗಾಗಿ ಮೀಸಲಿರಿಸಿದ ಕಾರ್ಯ ಮಾದರಿಯಾಗಿದೆ.

Advertisement

ಹಡೀಲು ಬಿದ್ದಿದ್ದ ಗದ್ದೆ ಹಸುರು
ಚರ್ಚ್‌ ಪಾಲನ ಪರಿಷತ್‌ನ ನಿರ್ಧಾರದಂತೆ ಯುವ ಜನರು ಚರ್ಚ್‌ ವ್ಯಾಪ್ತಿಯ ವಿವಿಧ ಕುಟುಂಬಗಳಲ್ಲಿ ಹಡೀಲು ಬಿದ್ದಿರುವ 7 ಮುಡಿ ಗದ್ದೆ ವ್ಯಾಪ್ತಿಯ ಸ್ಥಳವನ್ನು ಸ್ವತ್ಛಗೊಳಿಸಿ, ಸಮತಟ್ಟು ಮಾಡಿ, ನೇಜಿ ನೆಟ್ಟು, ಗೊಬ್ಬರ ಹಾಕಿ, ಭತ್ತ ಕೊಯ್ದು ಸುಮಾರು 57 ಕ್ವಿಂ. ಭತ್ತವನ್ನು ಪಡೆದು 38 ಕ್ವಿಂ. ಅಕ್ಕಿಯನ್ನು ಸಂಪಾದಿಸಿದ್ದಾರೆ.

2 ಕ್ವಿಂ. ಅಕ್ಕಿಯನ್ನು ಬಡವರಿಗೆ ಹಂಚಿ, ಉಳಿದ ಅಕ್ಕಿ ಮತ್ತು ಹುಲ್ಲನ್ನು ಮಾರಾಟ ಮಾಡಿ ಬಂದ ಸುಮಾರು 1 ಲಕ್ಷದ 20 ಸಾವಿರ ರೂ. ಹಣವನ್ನು ಸಂಗ್ರಹಿಸಲಾಗಿದೆ. ಈ ಹ‌ಣವನ್ನು ದೀನ ದಲಿತರ ಸೇವಾ ಕಾರ್ಯಕ್ಕಾಗಿ ಮಂಜೊಟ್ಟಿ ಚರ್ಚ್‌ ಕೊಡುಗೆಯಾಗಿ ನೀಡಿದೆ. ಹಡೀಲು ಭೂಮಿಯಲ್ಲಿ ಭತ್ತ ಬೆಳೆಯಲು ದಾನಿಗಳು ಸುಮಾರು 40 ರೂ. ಸಾವಿರ ದೇಣಿಗೆ ನೀಡುವ ಮೂಲಕ ಸಮಾಜಕ್ಕೆ ಸಂದೇಶ ನೀಡಿದ್ದಾರೆ.
ಸೇವಾ ಕಾರ್ಯದಲ್ಲಿ ಮಂಜೊಟ್ಟಿ ಚರ್ಚ್‌ನ ಪಾಲನ ಪರಿಷತ್‌, ಭಕ್ತರು, ಐ.ಸಿ.ವೈ.ಎಂ. ಹಾಗೂ ಮತ್ತಿತರ ಎಲ್ಲ ಸಂಘಟನೆಗಳು, ಕೃಷಿ ಬೇಸಾಯ ಮಾಡಲು ಸ್ಥಳ ನೀಡುವ ಮೂಲಕ ಹಿಡುವಳಿದಾರರು ಚರ್ಚ್‌ಗೆ ಸಹಕರಿಸಿದ್ದರು. ಗ್ರಾ.ಪಂ. ಮತ್ತು ಕೃಷಿ ಇಲಾಖೆಯಿಂದಲೂ ಈ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

 ದೀನದಲಿತರಿಗೆ ಕೊಡುಗೆ
ಯುವ ಸಮುದಾಯಕ್ಕೆ ಕೃಷಿ ವಿಷಯದಲ್ಲಿ ಪ್ರೇರಣೆ, ಪರಿಶ್ರಮದಲ್ಲಿ ಗಳಿಸಿದ ಆದಾಯವನ್ನು ದೀನ ದಲಿತರಿಗೆ ಕೊಡುಗೆ ನೀಡುವ ಉದ್ದೇಶದಿಂದ ಚರ್ಚ್‌ ವಿನೂತನ ಕಾರ್ಯಕ್ಕೆ ಮುಂದಾಗಿತ್ತು. ಇದಕ್ಕಾಗಿ ಉಪಾಧ್ಯಕ್ಷ ವಲೇರಿಯನ್‌ ಮೋನಿಸ್‌ ಅವರ ಸಹಕಾರದೊಂದಿಗೆ ಮಂಜೊಟ್ಟಿ ಸುತ್ತಮುತ್ತ 4.5 ಎಕ್ರೆ ಹಡೀಲು ಭೂಮಿ ಪಡೆದು ಭತ್ತ ಬೆಳೆಯಲಾಯಿತು. ನಿರೀಕ್ಷೆಯಂತೆ ಶ್ರಮದ ಫಲವಾಗಿ 1.75 ಲಕ್ಷ ರೂ. ಆದಾಯ ಗಳಿಸಿದೆ. 3 ಕ್ವಿಂಟಲ್‌ ಅಕ್ಕಿ ಹಾಗೂ ಉಳಿದ ಹಣ ದಾನದ ರೂಪದಲ್ಲಿ ನೀಡಲಾಗಿದೆ.
 - ವಂ| ಡಾ| ಪ್ರವೀಣ್‌
ಮಂಜೊಟ್ಟಿ ಚರ್ಚ್‌ ಪ್ರಧಾನ ಧರ್ಮಗುರು

ಸೇವೆಗಾಗಿ ಯಶಸ್ವಿ ಪರಿಶ್ರಮ
ಮಂಜೊಟ್ಟಿ ಕಾಡು ಪ್ರದೇಶದಲ್ಲಿ ಈ ಸಾಧನೆ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ. ಪ್ರಕೃತಿ ವಿಕೋಪ, ಅತಿವೃಷ್ಟಿ, ಕಾಡುಪ್ರಾಣಿಗಳ ತೊಂದರೆ, ಹಕ್ಕಿ, ಕ್ರಿಮಿಕೀಟಗಳ ಸಮಸ್ಯೆ ಎದುರಾದರೂ ಮುಂಜಾಗ್ರತ ಕ್ರಮ ಜತೆಗೆ ಪರಿಶ್ರಮದಿಂದ ಯಶಸ್ವಿ ಕೃಷಿ ನಡೆಸಲು ಸಾಧ್ಯವಾಗಿದೆ. ಚರ್ಚ್‌ನ 88 ಕುಟುಂಬಸ್ಥರ ಸಹಕಾರ, ಒಗ್ಗಟ್ಟಿನ ಫಲವಾಗಿ, ಯುವಜನರ ಪರಿಸರ ಪ್ರೇಮದಿಂದ 5 ತಿಂಗಳ ಅವಿರತ ಶ್ರಮದಲ್ಲಿ ದೀನದಲಿತರ ಸೇವಾಕಾರ್ಯ ನಡೆಸಿರುವುದು ಸಮಾಜಕ್ಕೊಂದು ಮಾದರಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next