Advertisement

ಕೊಯ್ಲು ಮುಗಿದರೂ ತೆರೆಯದ ಖರೀದಿ ಕೇಂದ್ರ

02:36 PM Apr 14, 2022 | Team Udayavani |

ಸಿರುಗುಪ್ಪ: ತಾಲೂಕಿನಲ್ಲಿ ಬೇಸಿಗೆ ಹಂಗಾಮಿನಲ್ಲಿ ಸುಮಾರು 28 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿದೆ. ಈ ಬಾರಿ ಬಂಪರ್‌ ಭತ್ತದ ಬೆಳೆ ಬಂದಿದ್ದು, ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ.

Advertisement

ಈಗಾಗಲೆ ತುಂಗಭದ್ರಾ ನದಿ ಪಾತ್ರದ ಮತ್ತು ತುಂಗಭದ್ರಾ ಜಲಾಶಯದ ಎಲ್‌ಎಲ್‌ಸಿ ಕಾಲುವೆಯ ಕೆಲವು ರೈತರು ಈಗಾಗಲೆ ಭತ್ತ ಕಟಾವು ಮಾಡಿದ್ದು, ಒಂದು ಎಕರೆಗೆ 40 ರಿಂದ 50 ಚೀಲ (70ಕೆಜಿ) ಉತ್ತಮ ಇಳುವರಿ ಬಂದಿದೆ. ಕಳೆದ ವರ್ಷದ ಮುಂಗಾರಿನಲ್ಲಿ ಅಕಾಲಿಕ ಮಳೆ ಬಂದಿದ್ದರಿಂದ ಮತ್ತು ಮಾರುಕಟ್ಟೆಯಲ್ಲಿ ಭತ್ತಕ್ಕೆ ಉತ್ತಮ ಬೆಲೆ ದೊರೆತಿರಲಿಲ್ಲ. ಆದರೆ ಬೇಸಿಗೆ ಹಂಗಾಮಿನಲ್ಲಿ ಬೆಳೆದ ಭತ್ತಕ್ಕೆ ರೋಗ ರುಜಿನಗಳ ಕಾಟ ಕಡಿಮೆ ಇದ್ದು, ಕಡಿಮೆ ಖರ್ಚಿನಲ್ಲಿ ಉತ್ತಮ ಬೆಳೆ ಬೆಳೆದಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ.

ಭತ್ತ ಕೊಯ್ಲು ಪ್ರಾರಂಭಕ್ಕೆ ಮುನ್ನವೆ ತಾಲೂಕಿನಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿದರೆ ರೈತರಿಗೆ ಆರಂಭದಲ್ಲಿಯೇ ಭತ್ತಕ್ಕೆ ಉತ್ತಮ ಬೆಲೆ ದೊರೆಯುತ್ತಿತ್ತು. ಆದರೆ ಭತ್ತ ಕಟಾವು ಕಾರ್ಯ ಶೇ.30 ರಷ್ಟು ಪೂರ್ಣಗೊಂಡರೂ ಭತ್ತ ಖರೀದಿ ಕೇಂದ್ರ ಪ್ರಾರಂಭವಾಗದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ಈಗಾಗಲೇ ತಾಲೂಕಿನಾದ್ಯಂತ ಶೇ.30 ರಷ್ಟು ಭತ್ತದ ಕಟಾವು ಮಾಡಲಾಗಿದೆ. ನಾಲ್ಕೈದು ವರ್ಷಗಳಿಂದ ಒಂದೇ ಬೆಳೆ ಬೆಳೆದಿರುವುದರಿಂದ ಭೂಮಿ ಉತ್ತಮ ಫಲವತ್ತತೆ ಇರುವ ಕಾರಣ ಎಕರೆಗೆ 40 ರಿಂದ 50 ಚೀಲ ಭತ್ತದ ಇಳುವರಿ ಬರುತ್ತಿದೆ. ಆದರೆ ಸರ್ಕಾರ ಖರೀದಿ ಕೇಂದ್ರ ಪ್ರಾರಂಭಿಸದೇ ಇರುವುದರಿಂದ ಭತ್ತದ ವ್ಯಾಪಾರ ಕುಂಠಿತಗೊಂಡಿದೆ.

ವ್ಯಾಪಾರ ಕುಂಠಿತಗೊಂಡಿರುವುದರಿಂದ ರೈತರು ಭತ್ತವನ್ನು ಒಣಗಿಸಿ ಚೀಲಕ್ಕೆ ತುಂಬಿ ರಾಶಿ ಹಾಕುವ ಕಾರ್ಯದಲ್ಲಿ ಮಗ್ನರಾಗಿದ್ದು, ವ್ಯಾಪಾರಿಗಳಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಗಂಗಾ ಕಾವೇರಿ ಭತ್ತ ಒಂದು ಕ್ವಿಂಟಾಲ್‌ಗೆ 1550 ರೂ. ಮತ್ತು ಆರ್.ಎನ್.ಆರ್‌. ಭತ್ತಕ್ಕೆ 1650 ರಿಂದ 1700 ರೂ. ಬೆಲೆ ನಿಗ ದಿಪಡಿಸಿದ್ದಾರೆ. ಇದರಿಂದಾಗಿ ಒಂದು ಕ್ವಿಂಟಾಲ್‌ಗೆ 200 ರೂ. ಕಡಿಮೆಯಾಗಿದ್ದು, ರೈತರು ತಮ್ಮ ಭತ್ತ ಮಾರಾಟ ಮಾಡಲು ಮುಂದಾಗುತ್ತಿಲ್ಲ. ಆದ್ದರಿಂದ ಕೂಡಲೆ ಜಿಲ್ಲಾಡಳಿತ ತಾಲೂಕಿನ ಕರೂರು, ಸಿರಿಗೇರಿ, ಹಚ್ಚೊಳ್ಳಿ ಮತ್ತು ತೆಕ್ಕಲಕೋಟೆ, ಸಿರುಗುಪ್ಪದಲ್ಲಿ ಭತ್ತ ಖರೀದಿ ಕೇಂದ್ರ ಪ್ರಾರಂಭಿಸುವಂತೆ ರೈತರಿಂದ ಒತ್ತಾಯ ಕೇಳಿಬರುತ್ತಿದೆ.

Advertisement

ಸದ್ಯ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್‌ ಭತ್ತದ ದರ 200 ರೂ. ಕಡಿಮೆಯಾಗಿದ್ದು, ಸರ್ಕಾರ ಖರೀದಿ ಕೇಂದ್ರವನ್ನು ಪ್ರಾರಂಭಿಸಿದರೆ ರೈತರಿಗೆ ಉತ್ತಮ ದರ ದೊರೆಯುತ್ತದೆ. ಇನ್ನಾದರೂ ಸರ್ಕಾರ ರಾಜ್ಯಾದ್ಯಂತ ಖರೀದಿ ಕೇಂದ್ರಗಳನ್ನು ತೆರೆಯಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯ (ಪ್ರೊ| ನಂಜುಂಡಸ್ವಾಮಿ ಬಣ) ರಾಜ್ಯ ಕಾರ್ಯಾಧ್ಯಕ್ಷ ಆರ್‌. ಮಾಧವರೆಡ್ಡಿ ಒತ್ತಾಯಿಸಿದ್ದಾರೆ.

ಬೇಸಿಗೆ ಹಂಗಾಮಿನಲ್ಲಿ ಬೆಳೆದ ಭತ್ತ ಖರೀದಿಸಲು ಸರ್ಕಾರದಿಂದ ಯಾವುದೇ ಆದೇಶ ಬಂದಿರುವುದಿಲ್ಲವೆಂದು ಸಹಾಯಕ ಕೃಷಿ ನಿರ್ದೇಶಕ ನಜೀರ್‌ ಅಹಮ್ಮದ್‌ ತಿಳಿಸಿದ್ದಾರೆ. ಇಲ್ಲಿಯವರೆಗೆ ಬೇಸಿಗೆ ಭತ್ತ ಖರೀದಿಗೆ ಸರ್ಕಾರ ಯಾವುದೇ ಆದೇಶ ನೀಡಿಲ್ಲ, ಇದರಿಂದಾಗಿ ಸದ್ಯ ಖರೀದಿ ಕೇಂದ್ರದಲ್ಲಿ ಭತ್ತ ಖರೀದಿಸುತ್ತಿಲ್ಲ ಎಂದು ಎಫ್‌.ಸಿ. ಗೋದಾಮು ವ್ಯವಸ್ಥಾಪಕ ಬಸವರಾಜ್‌ ತಿಳಿಸಿದ್ದಾರೆ.

-ಆರ್.ಬಸವರೆಡ್ಡಿ ಕರೂರು.

Advertisement

Udayavani is now on Telegram. Click here to join our channel and stay updated with the latest news.

Next