Advertisement

ಕರಾವಳಿಯಲ್ಲಿ ಗುರಿ ಮೀರಿದ ಸಾಧನೆಯತ್ತ ಭತ್ತ ಬೇಸಾಯ

02:47 PM Jul 30, 2020 | mahesh |

ಮಂಗಳೂರು: ಕರಾವಳಿಯಲ್ಲಿ ಕೊರೊನಾ ಆತಂಕದ ನಡುವೆ ಭತ್ತದ ಕೃಷಿ ವಿಶೇಷ ಪ್ರಗತಿ ಕಂಡಿದ್ದು, ಮುಂಗಾರು ಗುರಿಯ ಶೇ. 90ರಷ್ಟು ನಾಟಿ ಪೂರ್ಣಗೊಂಡಿದೆ. ಉತ್ತಮ ಮುಂಗಾರುಪೂರ್ವ ಮಳೆ, ಸಕಾಲದಲ್ಲಿ ಮುಂಗಾರು ಆಗಮನ ಮತ್ತು ಭತ್ತ ಬೇಸಾಯದತ್ತ ಈ ಬಾರಿ ಹೆಚ್ಚಿದ ಆಸಕ್ತಿ
ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಹಡಿಲು ಗದ್ದೆಗಳ ಬೇಸಾಯ, ಯುವಜನತೆ ಭತ್ತ ಬೇಸಾಯದತ್ತ ಆಕರ್ಷಿತರಾಗಿರುವುದು ಇದಕ್ಕೆ ಕಾರಣ.

Advertisement

ದಕ್ಷಿಣ ಕನ್ನಡದಲ್ಲಿ ವಾರ್ಷಿಕ ಒಟ್ಟು ಗುರಿ 10,260 ಹೆಕ್ಟೇರ್‌ಗಳಲ್ಲಿ ಈಗಾಗಲೇ 9,657 ಹೆಕ್ಟೇರ್‌ ಮತ್ತು ಉಡುಪಿಯಲ್ಲಿ ಒಟ್ಟು ಗುರಿ 36,000 ಹೆಕ್ಟೇರ್‌ಗಳಲ್ಲಿ 29,888 ಹೆಕ್ಟೇರ್‌ಗಳಲ್ಲಿ ನಾಟಿ ಪೂರ್ಣಗೊಂಡಿದೆ. ಕಳೆದ ಮುಂಗಾರು ಹಂಗಾಮಿನ ಈ ಅವಧಿಯಲ್ಲಿ ದ.ಕ.ದಲ್ಲಿ 6,245 ಹೆಕ್ಟೇರ್‌ ಮತ್ತು ಉಡುಪಿಯಲ್ಲಿ 22,707 ಹೆಕ್ಟೇರ್‌ ನಾಟಿ ಆಗಿತ್ತು.

ಬಿತ್ತನೆ ಬೀಜ ಖರೀದಿಯಲ್ಲೂ ಹೆಚ್ಚಳ
ಬಿತ್ತನೆ ಬೀಜಕ್ಕೂ ಈ ಬಾರಿ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ದ.ಕ.ದಲ್ಲಿ 790 ಕ್ವಿಂಟಾಲ್‌ ದಾಸ್ತಾನು ಇರಿಸಲಾಗಿದ್ದು, 768 ಕ್ವಿಂಟಾಲ್‌ ವಿತರಣೆಯಾಗಿದೆ. ಕಳೆದ ಸಾಲಿನಲ್ಲಿ 700 ಕ್ವಿಂಟಾಲ್‌ ವಿತರಿಸಲಾಗಿತ್ತು. ಎಂಒ4 ಬೀಜಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದ್ದು, ಜಿಲ್ಲೆಗೆ ಬಂದಿರುವ ಎಲ್ಲ 485 ಕ್ವಿಂಟಾಲ್‌ ಮುಗಿದಿದೆ. ಉಳಿದಂತೆ 210 ಕ್ವಿಂಟಾಲ್‌ ಜಯ ಬೀಜದಲ್ಲಿ 198.64 ಕ್ವಿಂಟಾಲ್‌, ಜ್ಯೋತಿ 94 ಕ್ವಿಂಟಾಲ್‌ನಲ್ಲಿ 85 ಕ್ವಿಂಟಾಲ್‌ ವಿತರಣೆಯಾಗಿದೆ. ಉಡುಪಿಯಲ್ಲಿ ಈ ಬಾರಿ ಒಟ್ಟು 2,588 ಕ್ವಿಂಟಾಲ್‌ ಬಿತ್ತನೆ ಬೀಜ ವಿತರಿಸಲಾಗಿದೆ. ಎಂಒ-4 ಬೀಜಕ್ಕೆ ಭಾರೀ ಬೇಡಿಕೆ ಕಂಡುಬಂದಿದ್ದು, 2,518 ಕ್ವಿಂಟಾಲ್‌ ಬೀಜವನ್ನು ರೈತರು ಪಡೆದಿದ್ದಾರೆ. ಉಳಿದಂತೆ 69.25 ಕ್ವಿಂಟಾಲ್‌ ಜ್ಯೋತಿ ಮತ್ತು 1 ಕ್ವಿಂಟಾಲ್‌ವರೆಗೆ ಜಯ ತಳಿಯ ಬೀಜ ವಿತರಿಸಲಾಗಿದೆ.

ಹಡಿಲು ಭೂಮಿ ಕೃಷಿಯಲ್ಲಿ ಪ್ರಗತಿ
ದ.ಕ.ದಲ್ಲಿ ಈ ಬಾರಿ ಪ್ರಗತಿಪರ ರೈತರು, ಸ್ವಯಂಸೇವಾ ಸಂಸ್ಥೆಗಳು ಮತ್ತು ಆಸಕ್ತ ಯುವಕರ ನೆರವಿನೊಂದಿಗೆ ಕೈಗೊಂಡಿರುವ ಹಡಿಲು ಗದ್ದೆಗಳಲ್ಲಿ ಭತ್ತ ಬೇಸಾಯ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈಗಾಗಲೇ 500 ಎಕ್ರೆ ಪ್ರದೇಶದಲ್ಲಿ ಭತ್ತ ಬೇಸಾಯ ಮಾಡಲಾಗಿದ್ದು, ಇನ್ನೂ ಹಲವಾರು ಕಡೆ ಪ್ರಗತಿಯಲ್ಲಿದೆ. ಗುರುಪುರ ಮತ್ತು ಮೂಲ್ಕಿ ಹೋಬಳಿಗಳಲ್ಲಿ ಸುಮಾರು 250 ಎಕ್ರೆಗಳಲ್ಲಿ ಕೃಷಿ ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲೂ ಸುಮಾರು 1,400 ಎಕ್ರೆ ಹಡಿಲು ಭೂಮಿ ಕೃಷಿ ಗುರಿ ಇರಿಸಿಕೊಳ್ಳಲಾಗಿದೆ.

ರೈತಸೇತು ಸಹಾಯವಾಣಿ ಕೃಷಿ ಸಮಸ್ಯೆಗಳಿದ್ದರೆ ತಿಳಿಸಿ
ರೈತರು ತಮ್ಮಲ್ಲಿದ್ದ ಹೆಚ್ಚಿನ ಬೆಳೆಗಳನ್ನು ಮಾರಾಟ ಮಾಡಿ ಈಗ ಮುಂಗಾರು ಮಳೆಯೊಂದಿಗೆ ಮತ್ತೆ ಕೃಷಿ ಕಾಯಕಕ್ಕೆ ಮರಳಿದ್ದಾರೆ. ಆದುದರಿಂದ ಇನ್ನು ಕೆಲವು ಸಮಯ ರೈತ ಸೇತು ಅಂಕಣದಲ್ಲಿ ಕೃಷಿ ಉತ್ಪನ್ನಗಳ ವಿವರ ಪ್ರಕಟವಾಗುವುದಿಲ್ಲ. ಆದರೆ ಪ್ರತಿ ಗುರುವಾರ ರೈತಸೇತು ಅಂಕಣದಲ್ಲಿ ಕೃಷಿ ಪೂರಕ ಮಾಹಿತಿ ಪ್ರಕಟವಾಗುತ್ತದೆ. ನಿಮ್ಮಲ್ಲಿಯೂ ಯಾವುದಾದರೂ ಸಂಶಯಗಳಿದ್ದರೆ, ಪರಿಣತರ ಅಭಿಪ್ರಾಯ ಅಗತ್ಯವಿದ್ದರೆ ಅದನ್ನು ಬರೆದು ಕಳುಹಿಸಬಹುದು. ತಜ್ಞರ ಬಳಿ ಸಮಾಲೋಚಿಸಿ ಅದಕ್ಕೆ ಪರಿಹಾರ ಸೂಚಿಸಲಾಗುವುದು. ಈ ರೀತಿ ಕಳುಹಿಸುವಾಗ ನಿಮ್ಮ ಹೆಸರು, ಊರು, ಸಂಪರ್ಕ ಸಂಖ್ಯೆ ನಮೂದಿಸಿ.

Advertisement

ವಾಟ್ಸಪ್‌ ಸಂಖ್ಯೆ 76187 74529


Advertisement

Udayavani is now on Telegram. Click here to join our channel and stay updated with the latest news.

Next