Advertisement
ಕರಾವಳಿ ಜಿಲ್ಲೆಯ ಸಾಂಪ್ರದಾಯಿಕ ಭತ್ತದ ಕೃಷಿಯೂ ಇಂದು ಸಂಪೂರ್ಣ ಯಾಂತ್ರೀಕರಣದತ್ತ ಹೊರಳಿದೆ. ಗದ್ದೆ ಉಳುಮೆಯಿಂದ ಹಿಡಿದು ನೇಜಿ ನಾಟಿ, ಕೊಯ್ಲು, ಭತ್ತದ ಹುಲ್ಲು ಸಂಗ್ರಹದವರೆಗೂ ಯಂತ್ರದ ಬಳಕೆ ಕಾಣಿಸಿಕೊಳ್ಳುತ್ತಿದೆ ಮತ್ತು ಇದು ಅನಿವಾರ್ಯತೆ ಎನ್ನುವಂತೆ ಆಗಿದೆ.ಕಳೆದ 10 ವರ್ಷಗಳಿಂದ ಜಿಲ್ಲೆಯ ಹಳ್ಳಿಗಳತ್ತ ಭತ್ತದ ಕೃಷಿಗೆ ಯಂತ್ರಗಳು ದಾಪುಗಾಲಿಟ್ಟರೂ ನೇಜಿ ನಾಟಿ ಮತ್ತು ಪೈರು ಕೊಯ್ಲಿಗೆ ಯಂತ್ರ ಬಳಕೆ ಮಾಡುತ್ತಿದ್ದ ರೈತರು ಇದೀಗ ಕೊಯ್ಲಿನ ಅನಂತರ ಬೈಹುಲ್ಲು ಸಂಗ್ರಹ ವ್ಯವಸ್ಥೆಯ ತನಕವೂ ಯಂತ್ರಗಳನ್ನೇ ಬಳಕೆ ಮಾಡಲು ಮುಂದಾಗಿದ್ದಾರೆ.
ಮನುಷ್ಯನ ಶ್ರಮ ಹಾಗೂ ಎತ್ತುಗಳ ಶ್ರಮದ ಮೂಲಕ ಭತ್ತದ ಗದ್ದೆಗಳನ್ನು ಸಾಂಪ್ರದಾಯಿಕವಾಗಿ ಇತ್ತೀಚಿಗಿನ ತನಕ ಕಾಪಾಡಿಕೊಂಡು ಬರುತ್ತಿದ್ದ ರೈತರು ಅದೇ ಮಾದರಿಯನ್ನು ಮುಂದುವರೆಸಿದ್ದರು. ಸುಗ್ಗಿ, ಏಣೇಲು ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದ ರೈತವರ್ಗದ ಕೆಲವರು ನೀರಾವರಿ ಹೆಚ್ಚಳ ಇದ್ದ ಗದ್ದೆಗಳಲ್ಲಿ ಕೊಳಕೆ ಬೆಳೆಗೂ ಆದ್ಯತೆ ನೀಡಿದ್ದರು. ಇದಕ್ಕೆ ಪೂರಕವಾಗಿ ಶ್ರಮ ವಿನಿಮಯ ವ್ಯವಸ್ಥೆಯೂ ಗ್ರಾಮೀಣ ಭಾಗಗಳಲ್ಲಿ ಪೂರಕವಾಗಿತ್ತು.
ಆಧುನಿಕತೆಯ ಗಾಳಿ ಕಡಿಮೆ ಇದ್ದ ದಿನಗಳಲ್ಲಿ ಮುಂಜಾನೆ 4 ಗಂಟೆಗೆ ಎದ್ದು, ತಮ್ಮ ಎತ್ತುಗಳನ್ನು ಬಳಸಿಕೊಂಡು ಉಳಮೆ ನಡೆಸುತ್ತಿದ್ದರು. ಉಳುಮೆ ಮಾಡಿದ ಗದ್ದೆಯ ಒಂದು ಭಾಗದಲ್ಲಿ ನೇಜಿ ತಯಾರು ಮಾಡಿಕೊಳ್ಳುತ್ತಿದ್ದರು. ಒಂದೊಂದು ಗದ್ದೆಯನ್ನು ಕನಿಷ್ಠ 15-20 ದಿನಗಳಲ್ಲಿ 4ರಿಂದ 5 ಸಾಲು ಉಳುಮೆ ಮಾಡಿದ ಅನಂತರ ನೇಜಿ ನಾಟಿ ಮಾಡಲಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಸಹಕಾರ ತಣ್ತೀವೇ ಪ್ರಮುಖವಾಗಿತ್ತು. ಹಳ್ಳಿಯಲ್ಲಿ ಬಹುತೇಕ ಕುಟುಂಬಗಳಲ್ಲಿ ಭತ್ತದ ಗದ್ದೆಗಳಿದ್ದ ಕಾರಣ ಪ್ರತಿಯೊಂದು ಕುಟುಂಬವೂ ಪರಸ್ಪರ ಸಹಕಾರದೊಂದಿಗೆ ಕೃಷಿ ಕೆಲಸಗಳಿಗೆ ಮುಂದಾಗುತ್ತಿದ್ದವು. ಈ ಭತ್ತದ ಕೃಷಿಗೆ ಹಳ್ಳಿಗಳಲ್ಲಿ ಕಾರ್ಮಿಕರ ಕೊರತೆಯೇ ಕಾಣದ ದಿನಗಳವು ಅದಾಗಿದ್ದವು.
Related Articles
Advertisement
ಹಳ್ಳಿಯ ಬಹುತೇಕ ಭತ್ತದ ಗದ್ದೆಗಳು ಇಂದು ಅಡಕೆ ಬೆಳೆಯುವ ತಾಣಗಳಾಗಿವೆ. ಅಲ್ಲಲ್ಲಿ ಉಳಿದ ಭತ್ತದ ಗದ್ದೆಗಳಿಗೆ ಕಾರ್ಮಿಕರ ಕೊರತೆ, ಸಹಕಾರ ತಣ್ತೀ ಎಂಬುವುದು ಹಳ್ಳಿಯಲ್ಲೂ ಕಾಣುತ್ತಿಲ್ಲ. ಹಾಗಾಗಿ ಭತ್ತ ಬೆಳೆಯಲೇಬೇಕೆಂಬ ಹಟತೊಟ್ಟ ರೈತ ವರ್ಗ ಸಂಪೂರ್ಣವಾಗಿ ಯಾಂತ್ರೀಕೃತ ಬದುಕಿಗೆ ಶರಣಾಗಿದ್ದಾರೆ. ನೇಜಿಯನ್ನು ಪಾತಿಗಳಲ್ಲಿ ತಯಾರು ಮಾಡುವುದು ಮಾತ್ರ ಈಗಿನ ರೈತರ ಕೆಲಸ. ನೇಜಿ ನಾಟಿ, ಬೆಳೆ ಕೊಯ್ಲು, ಉಳಮೆ ಕೊನೆಗೆ ಬೈಹುಲ್ಲು ಸಂಗ್ರಹವೂ ಯಂತ್ರಗಳಿಂದಲೇ ಸಾಧ್ಯವಾಗುವುದರಿಂದ ರೈತರಿಗೆ ಕಾರ್ಮಿಕ ಕೊರತೆಯ ಸಮಸ್ಯೆಯಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತಿದೆ.
ಯಂತ್ರಧಾರಾ ನೆರವುರಾಜ್ಯ ಸರಕಾರ ನೀಡಿದ ಯಂತ್ರಧಾರಾದ ಕೊಡುಗೆ ರೈತರ ಪಾಲಿಗೆ ಆಪಾರ ಬೆಂಬಲ ನೀಡಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಯಂತ್ರಧಾರಾ ಜಿಲ್ಲೆಯ ಪ್ರತಿ ಹೋಬಳಿ ಮಟ್ಟದಲ್ಲಿ ಕೇಂದ್ರಗಳನ್ನು ಹೊಂದಿದೆ. ಸ್ಥಳೀಯ ರೈತರಿಗೆ ಬಾಡಿಗೆ ರೂಪದಲ್ಲಿ ಯಂತ್ರಗಳನ್ನು ನೀಡುತ್ತಿದ್ದು, ಭತ್ತದ ಕೃಷಿ ಉಳಿಸಿಕೊಳ್ಳುವಲ್ಲಿ ಇದು ಹೆಚ್ಚು ನೆರವು ನೀಡುತ್ತಿದೆ. ಇದರ ಜತೆ ಖಾಸಗಿಯಾಗಿ ಯಂತ್ರಗಳನ್ನು ಬಾಡಿಗೆ ನೀಡುವ ಸಾಯ ಕಂಪೆನಿಯೂ ರೈತರ ಅನುಕೂಲದಲ್ಲಿ ದೊಡ್ಡ ಪಾತ್ರ ಪಡೆಯುತ್ತಿವೆ. ಸಮರ್ಪಕವಾದ ರೀತಿಯಲ್ಲಿ ಯಂತ್ರಗಳನ್ನು ರೈತರ ಕೃಷಿ ಕೆಲಸಗಳಿಗೆ ಪೂರೈಕೆ ಮಾಡುವ ಮೂಲಕ ಸಂಸ್ಥೆಗಳು ರೈತರ ಮಿತ್ರನಾಗಿ ಕೆಲಸ ಮಾಡುತ್ತಿರುವುದು ಭತ್ತದ ಕೃಷಿ ಉಳಿಸುವಲ್ಲಿ ನಮಗೆ ಸಹಕಾರಿಯಾಗುತ್ತಿದೆ ಎನ್ನುತ್ತಾರೆ ಬಜತ್ತೂರಿನ ಭತ್ತದ ಕೃಷಿಕ ರಾಮಣ್ಣ ಗೌಡ. ರಾಜೇಶ್ ಪಟ್ಟೆ, ಪುತ್ತೂರು