Advertisement

ಭತ್ತ ಕೃಷಿ : ಯಂತ್ರ ಬಳಕೆ ರಹದಾರಿ ಸಾಗಾಟ ವೆಚ್ಚ ದುಬಾರಿ

10:22 PM Oct 26, 2019 | mahesh |

ಈಗ ಕಾಲ ಬದಲಾಗಿದೆ. ರೈತನ ಕೊಟ್ಟಿಗೆಯಲ್ಲಿ ಎತ್ತುಗಳಿಲ್ಲ. ಉಳುಮೆಗಾಗಿ ಬಳಸುತ್ತಿದ್ದ ನೇಗಿಲುಗಳು ಮೂಲೆ ಸೇರಿವೆ. ಭತ್ತದ ನೇಜಿ ನಾಟಿ ಮಾಡುವ ಜನರೂ ಇಲ್ಲ. ಹಾಗಾಗಿ ಅನಿವಾರ್ಯವಾಗಿ ಯಂತ್ರಗಳನ್ನು ಬಳಕೆ ಮಾಡಲು ಮುಂದಾಗಿದ್ದಾರೆ ಹಳ್ಳಿಯ ರೈತರು.

Advertisement

ಒಂದೆಡೆ ಸಾಂಪ್ರದಾಯಿಕ ಭತ್ತದ ಕೃಷಿಕ ಅನಿವಾರ್ಯವಾಗಿ ಯಾಂತ್ರೀಕೃತ ಕೃಷಿಯೆಡೆಗೆ ಪರಿವರ್ತನೆ ಹೊಂದುತ್ತಿದ್ದಾನೆ. ಆದರೆ ಯಂತ್ರದ ಬಳಕೆಯ ಸಂದರ್ಭದಲ್ಲಿ ಹೆಚ್ಚುವರಿಯಾಗುತ್ತಿರುವ ಸಾಗಾಟ ವೆಚ್ಚ ನಿಭಾಯಿಸುವುದು ರೈತನಿಗೆ ಸವಾಲಾಗಿದೆ.

ಎತ್ತು ನೇಗಿಲುಗಳನ್ನೇ ನಂಬಿ ಬದುಕುತ್ತಿದ್ದ ಹಳ್ಳಿಯ ಕೃಷಿಕರ ಹೊಲ ಗದ್ದೆಗಳಲ್ಲಿ ಇಂದು ಯಂತ್ರಗಳ ಭರಾಟೆ ಕೇಳಿ ಬರುತ್ತಿದೆ. ಕೂಲಿಯಾಳುಗಳ ಕೊರತೆ, ಅಕಾಲಿಕ ಮಳೆಯ ಮಧ್ಯೆ ಯಂತ್ರಗಳ ಬಳಕೆ ಅತ್ಯಂತ ಪ್ರಯೋಜನಕಾರಿಯೂ ಹೌದು. ಗದ್ದೆಯ ಉಳುಮೆ, ನೇಜಿ ನಾಟಿಯಿಂದ ಹಿಡಿದು ಭತ್ತದ ಕೊಯ್ಲಿನ ತನಕ ಯಂತ್ರಗಳೇ ರೈತನಿಗೆ ಆಧಾರವಾಗುತ್ತಿದೆ.

ಹಿಂದಿನ ಕಥೆ
ಜಿಲ್ಲೆಯಲ್ಲಿ ಏಣೇಲು ಮತ್ತು ಸುಗ್ಗಿ ಬೆಳೆಯನ್ನು ಹೆಚ್ಚಾಗಿ ಬೆಳೆಯುವ ರೈತ ಮುಂಜಾನೆಯಿಂದ ತನ್ನ ಎತ್ತುಗಳ ಮೂಲಕವೇ ಉಳುಮೆ ಮಾಡಿ ಗದ್ದೆಯನ್ನು ಹದ ಮಾಡುತ್ತಿದ್ದರು. ಅದಕ್ಕಿಂತ ಮೊದಲೇ ನೇಜಿ ತಯಾರಿ ಕೆಲಸವೂ ನಡೆಯುತ್ತಿತ್ತು. ಹಳ್ಳಿಯ ಮನೆ ಮಂದಿ ಸೇರಿಕೊಂಡು ನೇಜಿ ನಾಟಿ ಮಾಡುವ, ನೇಜಿ ನಾಟಿ ಮಾಡುವಾಗ ಹಾಡುತ್ತಿದ್ದ ಪಾಡªನ ಹಾಗೂ ತಮಾಷೆಯ ಆಟಗಳ ಸಂಭ್ರಮ ಈಗಿಲ್ಲವಾದರೂ ಒಂದಷ್ಟು ರೈತರು ಭತ್ತ ಬೆಳೆಯುವುದನ್ನು ಬಿಟ್ಟಿಲ್ಲ. ಈಗ ಕಾಲ ಬದಲಾಗಿದೆ. ರೈತನ ಕೊಟ್ಟಿಗೆಯಲ್ಲಿ ಎತ್ತುಗಳಿಲ್ಲ. ಉಳುಮೆಗಾಗಿ ಬಳಸುತ್ತಿದ್ದ ನೇಗಿಲುಗಳು ಮೂಲೆ ಸೇರಿವೆ. ಭತ್ತದ ನೇಜಿ ನಾಟಿ ಮಾಡುವ ಜನರೂ ಇಲ್ಲ. ಹಾಗಾಗಿ ಅನಿವಾರ್ಯವಾಗಿ ಯಂತ್ರಗಳನ್ನು ಬಳಕೆ ಮಾಡಲು ಮುಂದಾಗಿದ್ದಾರೆ ಹಳ್ಳಿಯ ರೈತರು.

ಸಾಗಾಟ ದುಬಾರಿ
ಯಂತ್ರಧಾರಾ ಕೇಂದ್ರಗಳಿಂದ ಬಾಡಿಗೆ ಆಧಾರದಲ್ಲಿ ಯಂತ್ರಗಳನ್ನು ಬಳಕೆ ಮಾಡುವ ರೈತನಿಗೆ ಈ ಯಂತ್ರಗಳ ಬಾಡಿಗೆ ದರಕ್ಕಿಂತಲೂ ಅದರ ಸಾಗಾಟದ ದರವೇ ದುಬಾರಿಯಾಗುತ್ತಿದೆ. ಸಾಮಾನ್ಯವಾಗಿ ಯಂತ್ರಧಾರಾ ಕೇಂದ್ರಗಳಿಂದ ಕಿಲೋ ಮೀಟರ್‌ ದೂರದ ಹಳ್ಳಿಗಳಿಗೆ ಈ ಯಂತ್ರಗಳನ್ನು ಟೆಂಪೋ ಅಥವಾ ಲಾರಿಗಳಲ್ಲಿ ಸಾಗಿಸಲಾಗುತ್ತದೆ. ನೇಜಿ ನಾಟಿ ಯಂತ್ರಗಳನ್ನು ಟೆಂಪೋ ಮೂಲಕ ಸಾಗಿಸಲಾದರೆ, ಭತ್ತದ ಕಟಾವು ಮಾಡುವ ಹಾರ್ವೆಸ್ಟರ್‌ ಯಂತ್ರಕ್ಕೆ ಲಾರಿಯೇ ಅನಿವಾರ್ಯ. ಈ ಲಾರಿ ಮತ್ತು ಟೆಂಪೋ ಬಾಡಿಗೆಯನ್ನು ರೈತನೇ ನೀಡಬೇಕಾಗಿದ್ದು, ರೈತನ ಮೇಲೆ 4ರಿಂದ 6 ಸಾವಿರ ರೂ. ಭಾರ ಬೀಳುತ್ತಿದೆ. ಹಾಗಾಗಿ ಈ ದುಬಾರಿ ದರವನ್ನು ನೀಡುವುದೇ ರೈತನ ಪಾಲಿಗೆ ಸಮಸ್ಯೆಯಾಗಿ ಕಾಡುತ್ತಿದೆ. ಇದರ ಜತೆಗೆ ತೋಟಗಳ ಮಧ್ಯೆ ಇರುವ ಗದ್ದೆಗಳಿಗೆ ಯಂತ್ರಗಳನ್ನು ತಲುಪಿಸುವುದೂ ಸವಾಲಿನ ಕೆಲಸವಾಗಿದೆ.

Advertisement

ಪರಿಹಾರ ದೊರೆತರೆ ಅನುಕೂಲ
ಭತ್ತದ ಕೃಷಿಗೆ ಈಗ ಕೆಲಸಗಾರರು ಸಿಗುತ್ತಿಲ್ಲ, ಜತೆಗೆ ಅಕಾಲಿಕ ಮಳೆಯೂ ಬೇರೆ. ಹಾಗಾಗಿ ಯಂತ್ರಗಳಿಂದಲೇ ಕೃಷಿ ಚಟುವಟಿಕೆ ನಡೆಸಬೇಕಾಗಿರುವುದು ಅನಿವಾರ್ಯವಾಗಿದೆ. ಭತ್ತದ ಕೃಷಿ ಕೆಲಸಗಳು ಯಂತ್ರಗಳಿಂದ ವೇಗವಾಗಿ ಸಾಗುತ್ತದೆ. ಆದರೆ ಈ ಯಂತ್ರಗಳ ಬಾಡಿಗೆ ದರಕ್ಕಿಂತಲೂ ಹೆಚ್ಚಾಗಿ ಇದನ್ನು ಸಾಗಾಟ ಮಾಡುವ ಬಾಡಿಗೆ ದರ ಸಮಸ್ಯೆಯಾಗುತ್ತಿವೆ. ಯಂತ್ರಗಳ ಸಾಗಾಟ ದರದ ವಿಚಾರದಲ್ಲಿ ಪರಿಹಾರ ದೊರೆತರೆ ಎಲ್ಲ ರೈತರಿಗೂ ಅನುಕೂಲ ಎನ್ನುತ್ತಾರೆ ಭತ್ತದ ಕೃಷಿಕ ರಾಮಣ್ಣ ಗೌಡ ಪಾಲೆತ್ತಾಡಿ.

ಯಂತ್ರಧಾರಾ ಕೇಂದ್ರ
ಹೋಬಳಿಗೊಂದರಂತೆ ಆರಂಭಿಸಲಾದ ಯಂತ್ರಧಾರಾ ಕೇಂದ್ರದಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಬಹುತೇಕ ಯಂತ್ರಗಳು ಲಭ್ಯವಿದೆ. ಈ ಯಂತ್ರಧಾರಾ ಕೇಂದ್ರಗಳ ಉಸ್ತುವಾರಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಸೇರಿದೆ. ಎಲ್ಲೋ ದೂರದಲ್ಲಿದ್ದ ಯಂತ್ರಗಳು ಈಗ ರೈತನ ಅಂಗಳಕ್ಕೆ ಬರುವ ನಿಟ್ಟಿನಲ್ಲಿ ಪ್ರಯತ್ನ ಯಶಸ್ವಿಯಾಗಿದೆ. ಹಳ್ಳಿಯಲ್ಲಿ ಕೃಷಿ ಕೂಲಿಕಾರರ ಕೊರತೆ ಕಾಡುತ್ತಿದ್ದು, ಅದರ ಬದಲಿಗೆ ಯಂತ್ರಗಳು ರೈತನ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.

ಭತ್ತದ ಗದ್ದೆಗಳ ಉಳುಮೆಗೆ ಟ್ರ್ಯಾಕ್ಟರ್‌, ನೇಜಿ ನಾಟಿಗೂ ಯಂತ್ರ, ಭತ್ತ ಪೈರು ಕಟಾವಿಗೂ ಹಾರ್ವೆಸ್ಟರ್‌ ಬಂದಿರುವ ಕಾರಣ ರೈತನ ಶ್ರಮ ವಿನಿಯೋಗ ಕಡಿಮೆಯಾಗಿದೆ. ಸಾಮಾನ್ಯವಾಗಿ ಶ್ರಮ ವಿನಿಮಯದ ಮೂಲಕ ರೈತ ಎಕ್ರೆ ಪ್ರದೇಶದಲ್ಲಿನ ಭತ್ತದ ಕೊಯ್ಲಿಗೆ ನೀಡಲಾಗುತ್ತಿರುವ ದಿನಗಳ ಬದಲಿಗೆ ಈಗ ಗಂಟೆಗಳ ಲೆಕ್ಕದಲ್ಲಿಯೇ ಯಂತ್ರಗಳ ಮೂಲಕ ಪೈರು ಕಟಾವು ಮಾಡುತ್ತಾನೆ.

-  ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next