Advertisement

ಉಡುಪಿ ಜಿಲ್ಲೆಯಲ್ಲಿ ಭತ್ತದ ಕೃಷಿ: 5 ವರ್ಷದಲ್ಲೇ ಗರಿಷ್ಠ ಸಾಧನೆ

01:02 PM Oct 30, 2022 | Team Udayavani |

ಕುಂದಾಪುರ : ಉಡುಪಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಕಳೆದ 5 ವರ್ಷಗಳಲ್ಲಿ ಈ ಬಾರಿ ಗರಿಷ್ಠ ಭತ್ತದ ಬೆಳೆ ಗುರಿ ಸಾಧನೆಯಾಗಿದೆ. ಜಿಲ್ಲೆಯ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ.

Advertisement

2018 -19ರ ಸಾಲಿನಲ್ಲಿ 35,478 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆಯಲಾಗಿದ್ದರೆ, 2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 36,979 ಹೆಕ್ಟೇರ್‌ ಪ್ರದೇಶಗಳಲ್ಲಿ ಭತ್ತದ ಕೃಷಿ ಮಾಡಲಾಗಿದೆ. ಅಂದರೆ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ 1,501 ಹೆಕ್ಟೇರ್‌ ಪ್ರದೇಶಗಳಲ್ಲಿ ಭತ್ತದ ಬೆಳೆ ಹೆಚ್ಚಳವಾಗಿದೆ. ಕಳೆದ ಬಾರಿ ಸಹ 36 ಸಾವಿರ ಹೆಕ್ಟೇರ್‌ ಬೆಳೆಯಾಗಿದೆ. ಅಂದರೆ ಕಳೆದ ವರ್ಷಗಳಲ್ಲಿ ಜಿಲ್ಲೆಯಲ್ಲಿ ಮತ್ತೆ ಅಂದಾಜು ಒಂದೂವರೆ ಸಾವಿರ ಹೆಕ್ಟೇರ್‌ನಷ್ಟು ಕೃಷಿ ಪ್ರದೇಶಗಳು ಹೆಚ್ಚಳವಾಗಿವೆ. ಆದರೆ 2011-12ರಲ್ಲಿ ಜಿಲ್ಲೆಯಲ್ಲಿ 46,990 ಹೆಕ್ಟೇರ್‌ನಷ್ಟಿದ್ದು, ಆ ಬಳಿಕ ಇದು 2018ರ ವೇಳೆಗೆ 35,478 ಇಳಿಮುಖಗೊಂಡಿತ್ತು.

ಈ ವರ್ಷ ಎಷ್ಟೆಷ್ಟು ಗುರಿ ಸಾಧನೆ ?
ಜಿಲ್ಲೆಯಲ್ಲಿ ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಒಟ್ಟು 38 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಕೃಷಿ ಮಾಡುವ ಗುರಿಯನ್ನು ಹೊಂದಲಾಗಿತ್ತು. ಈ ಪೈಕಿ 36,979 ಹೆಕ್ಟೇರ್‌ನಲ್ಲಿ ಗುರಿ ಸಾಧಿಸಲಾಗಿದೆ. ಬ್ರಹ್ಮಾವರದಲ್ಲಿ ಗರಿಷ್ಠ 10,800 ಹೆಕ್ಟೇರ್‌ ಗುರಿ ಹೊಂದಲಾಗಿದ್ದು, ಈ ಪೈಕಿ 10,667 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಕುಂದಾಪುರದಲ್ಲಿಯೂ 8,400 ಹೆಕ್ಟೇರ್‌ ಗುರಿಯಿದ್ದು, ಈ ಪೈಕಿ 7,923 ಹೆಕ್ಟೇರ್‌ ಗುರಿ ಸಾಧನೆಯಾಗಿದೆ.

ವಿಶೇಷ ಪ್ಯಾಕೇಜ್‌, ಬೆಂಬಲ ಬೆಲೆ ?
2019ರಲ್ಲಿ ಸರಕಾರದ ಘೋಷಿಸಿದ್ದ ಕರಾವಳಿ ಪ್ಯಾಕೇಜ್‌ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಕಟಾವು ಮುಗಿಯುತ್ತ ಬಂದರೂ ಬೆಂಬಲ ಬೆಲೆಯಡಿ ಭತ್ತದ ಖರೀದಿ ಕೇಂದ್ರವನ್ನು ಇನ್ನೂ ಆರಂಭಿಸಿಲ್ಲ. ಮಳೆಯಿಂದ ಹಾನಿಯಾದವರಿಗೆ ಬೆಳೆ ಹಾನಿ ಪರಿಹಾರ ಅರೆಬರೆ ವಿತರಣೆಯಾಗಿದೆ. ಕಾಡು ಪ್ರಾಣಿಗಳಿಂದ ಉಪಟಳ ಹೆಚ್ಚುತ್ತಿದ್ದು, ಇದಕ್ಕೂ ಸರಿಯಾದ ಪರಿಹಾರ ಸಿಗುತ್ತಿಲ್ಲ. ಖಾಸಗಿ ಕಟಾವು ಯಂತ್ರಗಳ ಬಾಡಿಗೆ ದರವೂ ದುಬಾರಿಯಾಗಿದೆ. ಹೀಗೆ ಒಂದಷ್ಟು ಅಡೆತಡೆಗಳ ನಡುವೆಯೂ ಕೃಷಿ ಹೆಚ್ಚಾಗಿರುವುದು ಆಶಾದಾಯಕವಾಗಿದ್ದರೂ ಕೃಷಿಗೆ ಇನ್ನಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಸರಕಾರ ರೈತರಿಗೆ ಬೆಂಬಲವಾಗಿ ನಿಲ್ಲಬೇಕಿದೆ.

ಕಾರಣಗಳೇನು?
- ಬೇರೆ ಬೇರೆ ಕಡೆಗಳಲ್ಲಿ ಉದ್ಯೋಗದಲ್ಲಿದ್ದವರು ಕೊರೊನಾದ ಅನಂತರ ಊರಿಗೆ ಮರಳಿ ಕೃಷಿಯಲ್ಲಿ ತೊಡಗಿರುವುದು.
- ಉಡುಪಿಯಲ್ಲಿ ಶಾಸಕ ರಘುಪತಿ ಭಟ್‌ ನೇತೃತ್ವದಲ್ಲಿ ಕೇದಾರೋತ್ಥಾನ ಟ್ರಸ್ಟ್‌ನಿಂದ ಹಡಿಲು ಭೂಮಿ ಕೃಷಿ ಅಭಿಯಾನ ಆರಂಭಿಸಿದ್ದು, ಆ ಬಳಿಕ ಜಿಲ್ಲೆಯ ವಿವಿಧೆಡೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪಡುಕೋಣೆಯಲ್ಲಿ ಡಿವೈಎಫ್‌ಐ ಘಟಕ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಹಳ್ಳಿ-ಹಳ್ಳಿಗಳಲ್ಲಿ ಹಡಿಲು ಗದ್ದೆಗಳಲ್ಲಿ ಭತ್ತದ ಬೆಳೆಯಲು ಮುಂದಾಗಿರುವುದು.
- ವರ್ಷವಿಡೀ ಉತ್ತಮ ಮಳೆ ಸಹ ಪ್ರಮುಖ ಕಾರಣ. ಕೆಲವು ವೇಳೆ ಮಳೆ ವರದಾನವಾಗಿದ್ದರೆ, ಕೆಲವೊಮ್ಮೆ ಶಾಪವಾಗಿಯೂ ಪರಿಣಮಿಸಿದೆ.

Advertisement

ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಅಂದಾಜು ಒಂದೂವರೆ ಸಾವಿರ ಹೆಕ್ಟೇರ್‌ ಭತ್ತದ ಕೃಷಿ ಹೆಚ್ಚಳವಾಗಿದೆ. ಇದಕ್ಕೆ ಬೇರೆ ಬೇರೆ ಕಡೆ ನಡೆದ ಹಡಿಲು ಭೂಮಿ ಕೃಷಿ ಅಭಿಯಾನ, ಕೊರೊನಾದಿಂದ ಊರಿಗೆ ಬಂದವರು ಕೃಷಿ ಬಗ್ಗೆ ಒಲವು ತೋರಿರುವುದು ಬಹುಮುಖ್ಯ ಕಾರಣ.
– ಕೆಂಪೇಗೌಡ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಉಡುಪಿ

ಇದನ್ನೂ ಓದಿ : ಅಪಘಾತಗೊಂಡ ಟ್ಯಾಂಕರ್ ನಲ್ಲಿ ಪೆಟ್ರೋಲ್ ತೆಗೆಯುವ ವೇಳೆ ಟ್ಯಾಂಕರ್ ಸ್ಫೋಟ: ನಾಲ್ವರು ಸಜೀವ ದಹನ

– ಪ್ರಶಾಂತ್ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next