Advertisement

ಅವಿಭಜಿತ ದ.ಕ.ದಲ್ಲಿ ಭತ್ತ ಖರೀದಿ ಆರಂಭವಾಗಿಲ್ಲ,ಆಗುವುದೂ ಇಲ್ಲ!

02:40 AM Jan 05, 2022 | Team Udayavani |

ಉಡುಪಿ: ರಾಜ್ಯದಲ್ಲಿ ಹೊಸ ವರ್ಷದ ಮೊದಲ ದಿನದಿಂದ ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಪ್ರಕ್ರಿಯೆ ಅರಂಭವಾಗಿದೆ. ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಚಾಲನೆ ಸಿಕ್ಕಿಲ್ಲ ಮತ್ತು ವ್ಯವಸ್ಥೆ ಇದೇ ರೀತಿ ಇದ್ದರೆ ಮುಂದಿನ 10 ವರ್ಷಗಳಲ್ಲಿಯೂ ಖರೀದಿ ಅಸಾಧ್ಯ!

Advertisement

ಬೆಂಬಲ ಬೆಲೆ ಯೋಜನೆಯಡಿ ಸಾಮಾನ್ಯ ಭತ್ತಕ್ಕೆ 1,940 ರೂ. ಹಾಗೂ ಗ್ರೇಡ್‌-ಎಗೆ 1,960 ರೂ. ನೀಡಿ ರೈತರಿಂದ ಖರೀದಿಸಲಾಗುತ್ತದೆ. ಇದಕ್ಕೆ ರಾಜ್ಯ ಸರಕಾರದಿಂದ ಯಾವುದೇ ಪ್ರೋತ್ಸಾಹ ಧನ ಇಲ್ಲ. ಜ. 1ರಿಂದ ಮಾರ್ಚ್‌ 31ರ ವರೆಗೆ ಖರೀದಿ ನಡೆಯಲಿದೆ. ಆದರೆ ಅವಿಭಜಿತ ದ.ಕ. ಜಿಲ್ಲೆಯ ರೈತರು ವಿವಿಧ ಕಾರಣಗಳಿಂದ ನೋಂದಣಿ ಮಾಡಿಕೊಂಡಿಲ್ಲ.

ಅಂಗೀಕಾರವೇ ಸಿಕ್ಕಿಲ್ಲ
ಸ್ಥಳೀಯ ಭತ್ತ ಖರೀದಿಸಿ ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಕುಚ್ಚಲಕ್ಕಿ ವಿತರಿಸಲು ಅವಕಾಶ ಕೋರಿ ರಾಜ್ಯದಿಂದ ಕೇಂದ್ರಕ್ಕೆಪ್ರಸ್ತಾವನೆ ಕಳುಹಿಸಲಾಗಿದೆ. ಅನುಮತಿಸಿಗದಿರುವುದರಿಂದ ಸರಕಾರಿ ವ್ಯವಸ್ಥೆಯಡಿ ಭತ್ತ ಖರೀದಿ ಸಾಧ್ಯವಾಗುತ್ತಿಲ್ಲ. ಇದರಿಂದ ಪಡಿತರ ವ್ಯವಸ್ಥೆಯಲ್ಲೂ ಸ್ಥಳೀಯ ಕುಚ್ಚಲಕ್ಕಿ ವಿತರಣೆ ಸಾಧ್ಯವಿಲ್ಲ.

ನಿರ್ಲಕ್ಷ್ಯವೇ ಕಾರಣ
ಸ್ಥಳೀಯ ಭತ್ತ ಖರೀದಿಗೆ ಅವಕಾಶ ಸಿಗದೆ ಇರುವುದಕ್ಕೆ ಕಾರ್ಯಾಂಗ ಮತ್ತು ಶಾಸಕಾಂಗದ ನಿರ್ಲಕ್ಷ್ಯವೇ ಕಾರಣ. ಅನೇಕ ವರ್ಷದಿಂದ ಈ ಸಮಸ್ಯೆ ಇದ್ದರೂ ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳಿಗೆ, ಸರಕಾರಕ್ಕೆ ಸ್ಪಷ್ಟವಾಗಿ ವಿವರಣೆ ನೀಡುವ ಗೋಜಿಗೆ ಹೋಗಿಲ್ಲ. ಅಂತೆಯೇ ಜನಪ್ರತಿನಿಧಿಗಳು ಕೂಡ ತಮಗೆ ಮಾಹಿತಿ ಇದ್ದರೂ ವಿಶೇಷ ಆಸಕ್ತಿ ತೋರದೆ ಇರುವುದರಿಂದ ಭತ್ತ ಖರೀದಿ ಆಗುತ್ತಿಲ್ಲ. ರೈತರು ಅನಿವಾರ್ಯ ವಾಗಿ ಖಾಸಗಿ ಮಿಲ್‌ಗ‌ಳಿಗೆ ಭತ್ತ ನೀಡುತ್ತಿದ್ದಾರೆ.

ಇದನ್ನೂ ಓದಿ:ದೇಶದಲ್ಲಿ ಹೆಚ್ಚಲಿದೆ ಆನ್‌ಲೈನ್‌ ಖರೀದಿ : 2025ರ ವೇಳೆಗೆ ಶೇ.17ಕ್ಕೆ ಏರಿಕೆ ಸಾಧ್ಯತೆ

Advertisement

ನೋಂದಣಿಗೆ ಹಿಂಜರಿಕೆ ಯಾಕೆ?
– ಮೊದಲನೆಯದಾಗಿ ಅಲ್ಲಿ ಸ್ಥಳೀಯವಾಗಿ ಬೆಳೆಯುವ ಭತ್ತ (ಕುಚ್ಚಲು ಅಕ್ಕಿಯಾಗಿಸುವ ಭತ್ತ)ವನ್ನು ಖರೀದಿಸುವುದೇ ಇಲ್ಲ.
– ಖರೀದಿ ಪ್ರಕ್ರಿಯೆ ಆರಂಭವಾಗುವುದು ಜನವರಿ ಯಲ್ಲಿ. ಆದರೆ ಅವಿಭಜಿತ ದ.ಕ.ದಲ್ಲಿ ಅಕ್ಟೋಬರ್‌, ನವೆಂಬರ್‌ನಲ್ಲಿ ಕೊçಲು ಮುಗಿದಿರುತ್ತದೆ. ಜನವರಿ ತನಕ ಕಾಯುವುದು ಕಷ್ಟ. ನೋಂದಣಿ ಮಾಡಿ ಭತ್ತವನ್ನು ಮನೆಯಲ್ಲೇ ಇಟ್ಟುಕೊಂಡರೆ ಕೊನೆಗೆ ಹಾಗೇ ಉಳಿದರೆ ಮತ್ತೇನು ಮಾಡುವುದು ಎಂಬ ಆತಂಕ.

ಭತ್ತ ಖರೀದಿಗೆ ಇರುವ ಸಮಸ್ಯೆಯನ್ನು ಅನೇಕ ಬಾರಿ ಸರಕಾರದ ಗಮನಕ್ಕೆ ತಂದಿದ್ದೇವೆ. ಜನಪ್ರತಿನಿಧಿಗಳೊಂದಿಗೂ ಚರ್ಚಿಸಿದ್ದೇವೆ. ಆದರೆ ರೈತರಿಗೆ ಅನುಕೂಲವಾಗುವ ನಿರ್ಧಾರ ಸರಕಾರದಿಂದ ಆಗಿಲ್ಲ. ಕುಚ್ಚಲಕ್ಕಿಯ ಎಂ-4 ಹಾಗೂ ಜ್ಯೋತಿ ತಳಿಯ ಬಿತ್ತನೆ ಬೀಜವನ್ನು ಸರಕಾರವೇ ನೀಡುತ್ತದೆ. ಭತ್ತ ಖರೀದಿ ಮಾತ್ರ ಮಾಡುತ್ತಿಲ್ಲ.
– ನವೀನ್‌ಚಂದ್ರ ಜೈನ್‌, ಭಾರತೀಯ ಕಿಸಾನ್‌ ಸಂಘದ ಜಿಲ್ಲಾಧ್ಯಕ್ಷ

ಸ್ಥಳೀಯ ಭತ್ತ (ಕೆಂಪು ಅಕ್ಕಿಯದ್ದು) ಖರೀದಿಗೆ ಅವಕಾಶ ಕೋರಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅನುಮತಿ ನೀಡದಿರುವುದರಿಂದ ಖರೀದಿ ಅರಂಭವಾಗಿಲ್ಲ; ರೈತರು ನೋಂದಣಿಯನ್ನೂ ಮಾಡಿಕೊಂಡಿಲ್ಲ.
– ಅನುರಾಧಾ, ಜಿಲ್ಲಾ ವ್ಯವಸ್ಥಾಪಕಿ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ದ.ಕ., ಉಡುಪಿ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next