Advertisement

ಲಾರಿ ಏರದ ಭತ್ತ, ಕಂಗಾಲಾದ ರೈತ

09:35 PM Jan 01, 2020 | Team Udayavani |

ನಂಜನಗೂಡು: ತಾಲೂಕಿನ ಭತ್ತದ ವ್ಯಾಪಾರಿಗಳು ಮತ್ತು ಭತ್ತ ಲಾರಿಗೆ ಲೋಡ್‌ ಮಾಡುವ ಕೂಲಿಯಾಳುಗಳ ನಡುವೆ ಕೂಲಿ ವಿಷಯಕ್ಕಾಗಿ ಹಗ್ಗಜಗ್ಗಾಟ ನಡೆದು 2 ದಿನವಾದರೂ ವಿವಾದ ಬಗೆ ಹರಿದಿಲ್ಲ. ಹೀಗಾಗಿ ಭತ್ತ ಲಾರಿಗೆ ಲೋಡ್‌ ಆಗದೇ ರೈತರು ಕಂಗಾಲಾಗಿದ್ದಾರೆ.

Advertisement

ಭತ್ತ ತಾಲೂಕಿನ ಪ್ರಮುಖ ಬೆಳೆ: ಕಬಿನಿ, ನುಗು ಹಾಗೂ ಹುಲ್ಲಳ್ಳಿ, ರಾಂಪುರ ನಾಲೆಗಳು ಹರಿಯುವ ಈ ತಾಲೂಕಿನ ಪ್ರಮುಖ ಬೆಳೆ ಭತ್ತ. ಈ ಬಾರಿ ಮಳೆ ಉತ್ತಮವಾಗಿ ಸುರಿದಿರುವುದರಿಂದ ಸುಮಾರು 750 ಲಕ್ಷ ಕ್ವಿಂಟಲ್‌ ಭಥದ ಇಳುವರಿ ನೀರಿಕ್ಷಿಸಲಾಗಿದೆ. ತಾಲೂಕಿನ ಅನ್ನದಾತರು ಬೆಳೆದ ಬಹುತೇಕ ಭತ್ತ ನೆರೆ ರಾಜ್ಯ ಕೇರಳಕ್ಕೆ ರವಾನೆಯಾಗುತ್ತದೆ. ಇದೀಗ ಬತ್ತದ ಕಟಾವು ಆರಂಭವಾಗಿದ್ದು, ಸುಮಾರು 40,000 ಕ್ವಿಂಟಲ್‌ ಭತ್ತ ಈಗಾಗಲೇ ನೆರೆಯ ರಾಜ್ಯಕ್ಕೆ ಮಾರಾಟವಾಗಿದೆ. ಉಳಿದಿದ್ದು ಮಾರಾಟಕ್ಕೆ ಅಣಿಯಾಗುತ್ತಿದ್ದು, ಮಾರುಕಟ್ಟೆಗೆ ಬರಲಾರಂಭಿಸಿದೆ.

ಮನೆಗೆ ಬಾರದ ಭತ್ತ: ನಮ್ಮ ಹಿರಿಯರು ಗದ್ದೆಯಲ್ಲಿ ಬೆಳೆದ ಭತ್ತದ ಫ‌ಸಲನ್ನು ಮನೆಗೆ ತಂದು ಪೂಜೆ ಮಾಡಿ, ಮಾರಾಟ ಮಾಡುತ್ತಿದ್ದರು. ಜತೆಗೆ ಬೆಳೆ ಮಾರಾಟವಾದ ಬಳಿಕ ಹಣಪಡೆಯುತ್ತಿದ್ದರು. ಆದರೆ ಈಗ ಎಲ್ಲವೂ ಬದಲಾಗಿದ್ದು, ಬೆಳೆ ಬೆಳೆಯುವುದಕ್ಕಿಂತ ಮುಂಚೆಯೇ ರೈತ ಹಣಪಡೆದುಕೊಳ್ಳುತ್ತಾನೆ. ಹಣ ಪಡೆಯದಿದ್ದರೆ, ಭತ್ತ ಕಟಾವಾಗಿ, ರಾಶಿಯಾಗುತ್ತಿರುವಾಗಲೇ ವ್ಯಾಪಾರಿಗಳು ರೈತರೊಂದಿಗೆ ಮಾತನಾಡಿ ವ್ಯಾಪಾರ ಕದುರಿಸುತ್ತಾರೆ. ವರ್ತಕರು, ಲಾರಿ ಹಾಗೂ ಕೂಲಿಯಾಳುಗಳನ್ನು ಗದ್ದೆಗೆ ತರಿಸಿಕೊಂಡು ಅಲ್ಲಿಂದಲೇ ಭತ್ತ ತುಂಬಿಸಿಕೊಂಡು ಹೊರರಾಜ್ಯಗಳಿಗೆ ಸಾಗಿಸಿಬಿಡುತ್ತಾರೆ.

ಕಡಿಮೆ ಲಾಭ: ಸದ್ಯ ಒಂದು ಮೂಟೆ ಭತ್ತ ಲಾರಿಗೆ ತುಂಬಿಸಲು 15 ರೂ. ಹಾಗೂ 6 ಜನರ ತಂಡಕ್ಕೆ 800 ರೂ.ಗಳನ್ನು ಊಟಕ್ಕೆಂದು ನೀಡಲಾಗುತ್ತಿದೆ. ಜತೆಗೆ ಎಪಿಎಂಸಿಯಿಂದ ಅನುಮತಿ ಸೇರಿ ಇತರೆ ಖರ್ಚುಗಳಿಗೆ ಹಣ ತೊಡಗಿಸಬೇಕು. ಹೀಗಾಗಿ ನಮ್ಮ ಲಾಭ ಕಡಿಮೆಯಾಗಿದೆ ಎಂದು ಭತ್ತದ ವ್ಯಾಪಾರಿಗಳ ಸಂಘಟನೆ ಅಧ್ಯಕ್ಷ ಸರ್ವೇಶ್‌ ಬೇಸರ ವ್ಯಕ್ತಪಡಿಸಿದರು.

ಕಳೆದ ಐದು ವರ್ಷಗಳಿಂದ ನಮ್ಮ ಕೂಲಿ ಹೆಚ್ಚಳವಾಗಿಲ್ಲ. ಕೂಲಿ ಹೆಚ್ಚಿಸದೇ ಭತ್ತ ತುಂಬುವದಿಲ್ಲ ಎನ್ನುತ್ತಾರೆ ಕೂಲಿಯಾಳುಗಳು. ಮೂಟೆಗೆ 15 ಇರುವುದನ್ನು 30 ರೂ.ಗಳಿಗೆ ಹೆಚ್ಚಿಸಬೇಕು. ಊಟದ ಹಣ 1,000 ರೂ. ನೀಡಬೇಕು. ಆಗ ಮಾತ್ರ ಲಾರಿಗೆ ಭತ್ತ ತುಂಬಿಸುತ್ತೇವೆ ಎಂದು ಅಸಂಘಟಿತ ಈ ಕಾರ್ಮಿಕರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ವಿವಾದ ಈವರೆಗೂ ಬಗೆ ಹರಿದಿಲ್ಲ.

Advertisement

ಪ್ರತಿದಿನ ತಾಲೂಕಿನಿಂದ 100ಕ್ಕೂ ಹೆಚ್ಚು ಲಾರಿಗಳು ಭತ್ತ ತುಂಬಿಕೊಂಡು ಕೇರಳದತ್ತ ಹೋಗುತ್ತವೆ. ಆದರೆ ವಿವಾದದಿಂದ ಎರಡು ದಿನಗಳಿಂದ ಭತ್ತ ಸಾಗಣೆಯಾಗಿಲ್ಲ. ಭತ್ತ ಕಾಯ್ದುಕೊಳುವುದೇ ನಮಗೆ ತಲೆ ಬಿಸಿಯಾಗಿದೆ ಎಂದು ರೈತ ಶಂಕರಪ್ಪ ನಿಟ್ಟುಸಿರು ಬಿಟ್ಟರು. ಮನೆಯಲ್ಲಿ ಶೇಖರಿಸಲು ಸ್ಥಳವಿಲ್ಲ ಎಪಿಎಂಸಿಗೆ ತಂದರೆ ಬಾಡಿಗೆ ಕೊಡಬೇಕು. ನಮ್ಮ ಪರಿಸ್ಥಿತಿಯನ್ನು ಯಾರು ಕೇಳುತ್ತಿಲ್ಲ ಎಂದು ಅಲವತ್ತುಕೊಂಡರು.

ದರ ಕುಸಿತ, ರೈತ ಕಂಗಾಲು: ಭತ್ತದ ಕಟಾವು ಆರಂಭವಾಗುವಾಗ ಬತ್ತ ಪ್ರತಿ ಕ್ವಿಂಟಲ್‌ಗೆ 2,400 ರೂ. ಇದ್ದಿದ್ದು, ಈಗ 2,100 ಕ್ಕಿಳಿದು 300 ರೂ. ಕುಸಿತಗೊಂಡಿದೆ. ಪ್ರತಿ ಬಾರಿ ಭತ್ತದ ಕಟಾವು ಆರಂಭವಾದ ಕೆಲವೇ ದಿನಗಳಲ್ಲಿ ದರ ಕುಸಿತ ಕಂಡು, ರೈತನ ಕೈನಿಂದ ಭತ್ತ ಹೋದ ಕೆಲವೇ ದಿನಗಳಲ್ಲಿ ಏರಿಕೆಯಾಗುತ್ತದೆ. ಅದರಿಂದಾಗಿ ಅನ್ನದಾತನ ನಷ್ಟ ಹೆಚ್ಚುತ್ತಿದೆ. ಸರ್ಕಾರ ಇತ್ತ ಗಮನ ಹರಿಸಿ, ರೈತರಿಗೆ ದರ ಎರಿಕೆಯಾಗುವವರಿಗೂ ಉಚಿತ ಗೋಡೌನ್‌ ಹಾಗೂ ಮುಂಗಡ ಹಣ ನೀಡಿದಲ್ಲಿ ರೈತ ತನಗಾಗುತ್ತಿರುವ ಹಾನಿ ತಪ್ಪಿಸಿಕೋಳ್ಳಬಹುದು ಎನ್ನುತ್ತಾರೆ ರೈತರು.

ಅಷ್ಟು ಕೂಲಿ ಕೊಡಲು ಸಾಧ್ಯವಿಲ್ಲ: 25 ರೂ. ಮೂಟೆಗೆ ಊಟಕ್ಕೆ 1000 ರೂ. ನೀಡಿದರೆ ಭತ್ತ ಲಾರಿಗೆ ತುಂಬಿಸಲು ನಾವು ಸಿದ್ಧ ಎಂದು ಕಾರ್ಮಿಕರಾದ ರವಿ , ಕುಮಾರ್‌, ಬಸವರಾಜು, ನಾಗೇಶ, ಸಿದ್ಧರಾಜು ಗೋವಿಂದ, ಚಿಕ್ಕ ಹೇಳಿದ್ದಾರೆ. ಆದರೆ ವ್ಯಾಪಾರಿಗಳಾದ ರಮೇಶ, ಶಿವಣ್ಣ, ರಾಮು, ಅರುಣಿ ಕುಮಾರ್‌, ಸುರೇಶ ಬಾಬು ಪ್ರಕಾಶ ಹಾಗೂ ಅಧ್ಯಕ್ಷ ಸರ್ವೇಶ್‌, ಅವರು ಕೇಳಿದಷ್ಟು ಕೊಡಲಾಗುವುದಿಲ್ಲ. ಅವರಂತೆಯಾದರೆ, ಒಂದು ಲಾರಿಗೆ 10,000ಕ್ಕೂ ಹೆಚ್ಚು ಖರ್ಚಾಗುತ್ತದೆ. ಪ್ರತಿ ಲಾರಿಗೆ 5 ಲಕ್ಷ ಬಂಡವಾಳ ಹಾಕುವ ನಮಗೆ ಈ ಸಿಗುತ್ತಿರುವ ಲಾಭವೇ ಕಡಿಮೆ. ಹೀಗಿರುವಾಗ ಕೂಲಿ ಹೆಚ್ಚಳ ಸಾಧ್ಯವೇ ಇಲ್ಲ? ಮೂಟೆಗೆ 3 ರೂ. ಬೇಕಾದರೆ ಹೆಚ್ಚಿಸುತ್ತೇವೆ ಎಂದರು.

2 ದಿನವಾದರೂ ಬಗೆಹರಿಯದ ವಿವಾದ: ವ್ಯಾಪಾರಿಗಳು ಮತ್ತು ಕೂಲಿಯಾಳುಗಳ ನಡುವೆ ಕೂಲಿ ದರ ಏರಿಕೆ ವಿಷಯವಾಗಿ ಹಗ್ಗಜಗ್ಗಾಟ ಆರಂಭವಾಗಿ ವಿವಾದಕ್ಕೆ ತಿರುಗಿತು. ಹೀಗಾಗಿ ಎರಡು ದಿನಗಳಿಂದ ಕೂಲಿ ಕಾರಣದಿಂದಾಗಿ ಭತ್ತ ಲಾರಿಗೆ ಲೋಡ್‌ ಮಾಡಿಲ್ಲ. ಎಪಿಎಂಸಿ ಮಾರುಕಟ್ಟೆಯಲ್ಲಿ ಒಟ್ಟು 60 ವ್ಯಾಪಾರಿಗಳಿದ್ದು, 250ಕ್ಕೂ ಹೆಚ್ಚು ಕಾರ್ಮಿಕರು ನಡುವೆ ಸೋಮವಾರದಿಂದಲೂ ವಿವಾದ ನಡೆಯುತ್ತಿದ್ದು, ಈವರೆಗೂ ಪರಿಹಾರವಾಗಿಲ್ಲ.

ವಿವಾದಕ್ಕೆ ಕಾರಣ?
ಸದ್ಯದ ಕೂಲಿ
1 ಮೂಟೆ ಭತ್ತಕ್ಕೆ 15 ರೂ.
6 ಜನ ಕಾರ್ಮಿಕರ ತಂಡಕ್ಕೆ ಊಟಕ್ಕೆ 800 ರೂ.

ಬೇಡಿ ಇಟ್ಟಿರುವುದು
1 ಮೂಟೆ ಭತ್ತ ಲಾರಿ ತುಂಬಿಸಲು 30 ರೂ.
6 ಜನ ಕಾರ್ಮಿಕರ ತಂಡಕ್ಕೆ ಊಟಕ್ಕಾಗಿ 1000 ರೂ.

ಕೂಲಿಯಾಳುಗಳು ಯಾರೊಬ್ಬರೂ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿಲ್ಲ. ಹೀಗಾಗಿ ಈ ವಿಷಯಕ್ಕೂ ನಮಗೂ ಸಂಬಂಧವಿಲ್ಲ.
-ಶಾಂತಕುಮಾರಿ, ಎಪಿಎಂಸಿ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next