ನಾವೀಗ ಫಾಸ್ಟ್ ಫುಡ್ ಕಾಲದಲ್ಲಿದ್ದೇವೆ. ಹೀಗಾಗಿ ಎಲ್ಲವೂ ಫಾಸ್ಟ್ ಆಗಿ ನಡೆಯಬೇಕು ಎಂದೇ ಬಯಸುತ್ತೇವೆ. ಬೆಳಗ್ಗಿನ ತಿಂಡಿಯನ್ನು ಕ್ಷಣಾರ್ಧದಲ್ಲಿ ತಯಾರಿಸಿ, ಕೆಲವೇ ನಿಮಿಷಗಳಲ್ಲಿ ತಿಂದು ಮುಗಿಸಬೇಕು ಎಂಬ ಆಲೋಚನೆ ಇದ್ದದ್ದೆ. ಹೀಗಾಗಿ ಹೆಚ್ಚಿನವು ಫಾಸ್ಟ್ ಫುಡ್ ರೆಸಿಪಿಗಳತ್ತ ಮುಖ ಮಾಡುತ್ತಿದ್ದಾರೆ. ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಗೊತ್ತಿದ್ದರೂ ಮತ್ತೆ ಮತ್ತೆ ಇವುಗಳನ್ನೇ ತಿನ್ನುತ್ತಿದ್ದೇವೆ. ಅಲ್ಪ ಸಮಯದಲ್ಲಿ ತಯಾರಿಸಬಹುದಾದ ಪುಷ್ಕಳ ಹಾಗೂ ಆರೋಗ್ಯಕರ ದೇಶೀಯ ತಿಂಡಿ, ತಿನಿಸುಗಳು ಸಾಕಷ್ಟಿವೆ. ಅದರಲ್ಲಿ ಪಡ್ಡು ಕೂಡ ಒಂದು. ಇದಕ್ಕೆ ಇನ್ನೊಂದು ಹೆಸರು ಗುಂಡಪಾಂ (ಕರಾವಳಿ ಭಾಗದಲ್ಲಿ ಇದನ್ನು ಅಪ್ಪಾ)ಗಳೆದೂ ಕರೆಯುವುದುಂಟು.
ಹಿಂದಿನ ದಿನವೇ ಇದಕ್ಕೆ ತಯಾರಿ ಮಾಡಿಕೊಂಡರೆ ಮರು ದಿನ ಬೆಳಗ್ಗೆ ಶೀಘ್ರವಾಗಿಯೇ ತಿಂಡಿ ಮಾಡಿ ಮುಗಿಸಬಹುದು. ಪಡ್ಡುವಿನ ರುಚಿ ರಹಸ್ಯ ಅಡಗಿರುವುದು ಅದನ್ನು ಮಾಡುವ ವಿಧಾನ ಮತ್ತು ಅದಕ್ಕೆ ಹಾಕುವ ಸಾಮಗ್ರಿಗಳಿಂದ. ಇದರ ರುಚಿ ಹೆಚ್ಚಬೇಕಾದರೆ ಇನ್ನು ಕೆಲವೊಂದು ಪ್ರಯೋಗ ಮಾಡಿ ನೋಡಬಹುದು. ಇದನ್ನು ಹಲವು ಮಾದರಿಗಳಲ್ಲಿ ತಯಾರಿ ಸಬಹುದು. ಅವುಗಳೆಂದರೆ ತರಕಾರಿ ಪಡ್ಡು, ಮಸಾಲೆ ಪಡ್ಡು, ಸಿಹಿ ಪಡ್ಡು, ಅಕ್ಕಿ ಪಡ್ಡು.
ಮೂರು ಲೋಟ ಅಕ್ಕಿ, ಮುಕ್ಕಾಲು ಲೋಟ ಉದ್ದು, ಮುಕ್ಕಾಲು ಚಮಚ ಮೆಂತೆ ಕಾಳುಗಳನ್ನು ತೊಳೆದು 4- 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಬಳಿಕ ಅದನ್ನು ದೋಸೆ ಹಿಟ್ಟಿನ ಹದಕ್ಕೆ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ಅವಲಕ್ಕಿ , ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಒಂದು ಹಸಿ ಮೆಣಸು, 2 ಸಣ್ಣ ಗಾತ್ರದ ಈರುಳ್ಳಿ, 15- 20 ಕರಿ ಬೇವು, ಒಂದು ತುಂಡು ಹಸಿ ಶುಂಠಿ ಹಾಗೂ ಒಣ ಕೊಬ್ಬರಿಯನ್ನು ಸಣ್ಣಗೆ ಕತ್ತರಿ ಸಿಡಿ ಫ್ರಿಜ್ ನಲ್ಲಿಟ್ಟು ಬಿಡಿ.
ಮರುದಿನ ಬೆಳಗ್ಗೆ ಹಿಟ್ಟಿಗೆ ಈ ಎಲ್ಲ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಸಿ. ಈಗ ಪಡ್ಡು ಮಾಡಲು ಹಿಟ್ಟು ತಯಾರಿಗಿದೆ ಎಂದೇ ಅರ್ಥ. ಪಡ್ಡು ಮಾಡುವ ಕಾವಲಿಯನ್ನು ಒಲೆಯ ಮೇಲೆ ಇಟ್ಟು ಅದು ಕಾದಾಗ ತೆಂಗಿನ ಎಣ್ಣೆ ಅಥವಾ ತುಪ್ಪವನ್ನು ಸವರಿ ಹಿಟ್ಟನ್ನು ಹೊಯ್ಯಿರಿ. ಎರಡೂ ಬದಿಯನ್ನು ಸ್ವಲ್ಪ ಕೆಂಪಗಾಗುವರೆಗೆ ಕಾಯಿಸಿದರೆ ಪಡ್ಡು ಸವಿಯಲು ಸಿದ್ಧ. ಇದನ್ನು ಕೊತ್ತಂಬರಿ ಸೊಪ್ಪಿನ ಚಟ್ನಿಯೊಂದಿಗೆ ಸೇರಿಸಿ ಸವಿದರೆ ಇದರ ರುಚಿ ದುಪ್ಪಟ್ಟಾಗುತ್ತದೆ.
ಶಿವ ಸ್ಥಾವರಮಠ