Advertisement

ಪಡ್ಡು ಹೋಟೆಲ್‌

12:43 PM Oct 01, 2018 | |

ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಪ್ರಯಾಣಿಸುವಾಗ ಹಿರಿಯೂರು-ಚಿತ್ರದುರ್ಗ ಮಧ್ಯ ಭಾಗದ ಐಮಂಗಲ ಗ್ರಾಮ ಸಿಗುತ್ತದೆ. ಕಿಟಕಿಯ ಹೊರಗಡೆ ತಲೆ ಹಾಕಿದರೆ ಒಂದು ಸಾಧಾರಣ ಹೋಟೆಲ್‌ ಕಾಣುತ್ತದೆ. ಅದರ ಹೆಸರು ದೀಪಾ ಪಡ್ಡು ಹೋಟೆಲ್‌.ಹೋಟೆಲ್‌ ಚಿಕ್ಕದಾದರೂ ಅದರ ಹಿರಿಮೆ ದೊಡ್ಡದು. ಏಕೆಂದರೆ, ಅಲ್ಲಿ ಸಿಗುವ ಪಡ್ಡು, ಪೂರಿ, ಪಲಾವ್‌ ಬಹಳ ಫೇಮಸ್ಸು. ಚಿತ್ರದುರ್ಗ, ದಾವಣಗೆರೆ ಕಡೆಗೆ ಪ್ರಯಾಣ ಮಾಡುವವರಲ್ಲಿ ಬಹುತೇಕರು ಇಲ್ಲಿ  ತಿಂದೇ ಹೋಗುತ್ತಾರೆ.  

Advertisement

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಹೋಟೆಲ್‌ ಎಂದರೆ ಇದ್ಯಾವುದೋ ಹೈವೇ ಹೋಟೆಲ್‌ ಇರಬೇಕು. ಅಲ್ಲಿ ಪ್ರತಿ ತಿಂಡಿಗೂ  ನೂರಾರು ರೂ.ಗಳ ಬೆಲೆ ಇರುತ್ತದೆ ಎನ್ನುವ ಭಾವನೆ ಬೇಡ. ಇದು ಮನೆ ತಿಂಡಿಯನ್ನೇ ನೆನಪಿಸುವ ರುಚಿ, ಶುಚಿಯ ಹೋಟೆಲ್‌. ಯಾವುದೇ ತಿಂಡಿಯ ಬೆಲೆ 20 ರೂ. ಮೀರುವುದಿಲ್ಲ. ಪತಿ, ಪತ್ನಿ, ಅಳಿಯ, ಮಗಳು ಸೇರಿಕೊಂಡು ಹೋಟೆಲ್‌ ನಡೆಸುತ್ತಿದ್ದಾರೆ.

ಮೈಸೂರಿನ ಮಹದೇವಪ್ಪ ಭಟ್ಟರು  ನಾಲ್ಕು ದಶಕಗಳ ಹಿಂದೆ ಮೈಸೂರಿನಿಂದ ಚಿತ್ರದುರ್ಗ ಜಿಲ್ಲೆಗೆ ಹೋಟೆಲ್‌ನಲ್ಲಿ ಸಪ್ಲಯರ್‌ ಕೆಲಸಕ್ಕಾಗಿ ಚಿತ್ರದುರ್ಗಕ್ಕೆ ಆಗಮಿಸಿದರು. ಆಗ ಅವರಿಗೆ ಆಶ್ರಯ ನೀಡಿದ್ದು ಐಮಂಗಲದ ಬಸ್‌ಸ್ಟ್ಯಾಂಡ್‌ ಹೋಟೆಲ್‌. ಅಲ್ಲಿ ಅನುಭವ ಪಡೆದ ನಂತರ ಸ್ವಂತಕ್ಕೆ ಒಂದು ಮನೆ ಮಾಡಿ ಅಲ್ಲಿ ಪಡ್ಡು ಹೋಟೆಲ್‌ ಆರಂಭಿಸಿದರು. ಹೀಗೆ 22 ವರ್ಷಗಳ ಕಾಲ ನಿರಂತರವಾಗಿ ಸ್ವತ್ಛತೆ, ರುಚಿಯಿಂದಾಗಿ ಹೋಟೆಲ್‌ ಯಶಸ್ವಿಯಾಯಿತು. ನಂತರ ಹೋಟೆಲ್‌ ಮಾರಬೇಕಾಗಿ ಬಂತು. 


ಅವರಿಂದ ಹೋಟೆಲ್‌ ಖರೀದಿಸಿದವರು ಐಮಂಗಲದವರೇ ಆದ ಸಿದ್ದೇಶ್ವರ. ಅವರು ಸ್ಪಲ್ಪ ದಿನ ಅನ್ನಪೂರ್ಣೆàಶ್ವರಿ ಎನ್ನುವ ಹೆಸರಿನಲ್ಲೇ ಹೋಟೆಲ್‌ ನಡೆಸಿದರು. ನಂತರ ಪುತ್ರಿ ದೀಪಾಳ ಹೆಸರನ್ನೇ ಹೋಟೆಲಿಗೆ ಇಟ್ಟರು. ಅಂದಿನಿಂದ ಪಡ್ಡು, ಪೂರಿ, ಪಲಾವ್‌, ಇಡ್ಲಿ ತಿಂಡಿ ಹೋಟೆಲ್‌ ಮಾಡುತ್ತಾ ಸಾಗಿದ್ದಾರೆ.  ನಿತ್ಯ ಮೂರು ಸಾವಿರಕ್ಕೂ ಹೆಚ್ಚಿನ ವಹಿವಾಟು ನಡೆಯುತ್ತದೆ.   ಕಡಿಮೆ ದರ ಇಟ್ಟರೂ ನಷ್ಟ ಎಂದೂ ಕಾಡಿಲ್ಲ ಎನ್ನುತ್ತಾರೆ ಸಿದ್ಧೇಶ್ವರ್‌.

ಪಡ್ಡು  ಘಮ, ಘಮ 
ಅಕ್ಕಿ, ಉದ್ದಿನಬೇಳೆ, ಮೆಂತ್ಯ, ಕಡಲೇಬೇಳೆ, ತೊಗರಿಬೇಳೆ, ಟೊಮೆಟೊ, ಈರುಳ್ಳಿ, ಕರಿಬೇವು, ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ ಚೆನ್ನಾಗಿ ನುಣ್ಣಗೆ ರುಬ್ಬಿ ಹದದಿಂದ ರುಚಿಕರವಾಗಿ ಮಾಡುವ ಇಲ್ಲಿನ ಪಡ್ಡು ನೋಡಿದ ಕೂಡಲೇ ಬಾಯಲ್ಲಿ ನೀರೂರುತ್ತದೆ. ಪಡ್ಡಿನ ಜೊತೆಯಲ್ಲಿ ಕಾಯಿಚಟ್ನಿ, ಹುರಿಗಡಲೆ, ಶೇಂಗಾ ಚಟ್ನಿ  ಇರುತ್ತದೆ. ಬೆಳಗ್ಗೆ 7 ರಿಂದ 12 ಗಂಟೆ ತನಕ ಪಡ್ಡು ಸಿಗುತ್ತದೆ. ಆನಂತರ ಹೋಟೆಲ್‌ ತೆರೆದಿರುವುದಿಲ್ಲ. ಒಂದೊಮ್ಮೆ ಪಡ್ಡು ಮಾಡದಿದ್ದ ದಿನದಲ್ಲಿ ಪೂರಿ, ಅವರೆ ಕಾಳಿನ ಸಾಗು ಮಾಡಲಾಗುತ್ತದೆ. ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಪಡ್ಡು ಸೇರಿದಂತೆ ಇತರೆ ತಿಂಡಿಗಾಗಿ ಕಾಯುವವರೇ ಹೆಚ್ಚು. ಬೆಳಗಿನ ತಿಂಡಿಗೆ ಸಾಮಾನ್ಯವಾಗಿ ಪಡ್ಡು ಅನ್ನು ಮಾಡುತ್ತಾರೆ. 
ಪಡ್ಡು ರುಚಿಯಲ್ಲಿ ಇದಕ್ಕೆ ಸಾಟಿಯಾದ ತಿಂಡಿ ಮತ್ತೂಂದಿಲ್ಲ. ಒಮ್ಮೆ ಈ ಪಡ್ಡು ತಿಂದರೆ ಇನ್ನೊಮ್ಮೆ ತಿನ್ನಬೇಕು ಅನ್ನುವ ಹಂಬಲ ಶುರುವಾಗುತ್ತದೆ. ರೋಸ್ಟ್‌ ಪಡ್ಡುವಿ ಸ್ವಾದ ಬಹಳ ಚೆನ್ನಾಗಿರುತ್ತದೆ. ಹಾಗೆಯೇ, ಹಬೆಯಾಡುವ ಪಡ್ಡಿನ ರುಚಿ ನೋಡಿದರೊಮ್ಮೆ ಮರೆಲು ಸಾಧ್ಯವಿಲ್ಲ. 

Advertisement

ಹೋಟೆಲ್‌ ಎಲ್ಲಿದೆ? 
ಚಿತ್ರದುರ್ಗದಿಂದ 22 ಕಿಲೋ ಮೀಟರ್‌ ದೂರದಲ್ಲಿ ಈ ಹೋಟೆಲ್‌ ಇದೆ. ಬೆಂಗಳೂರು ಕಡೆಯಿಂದ ಹಿರಿಯೂರು ಮಾರ್ಗವಾಗಿ 18 ಕಿ.ಮೀ. ಬಂದರೆ ಐಮಂಗಲ ಸಿಗುತ್ತದೆ.  ಹಿರಿಯೂರು ಸಮೀಪದ ಗುಯಿಲಾಳು ಗ್ರಾಮದ ಬಳಿ  ಹೆದ್ದಾರಿ ಟೋಲ್‌ ಸಂಗ್ರಹ ಕೇಂದ್ರವಿದೆ. ಅಲ್ಲಿಂದ  ಚಿತ್ರದುರ್ಗಕ್ಕೆ ಹೋಗುವ ಮಾರ್ಗದಲ್ಲಿ ಮೂರು-ನಾಲ್ಕು ನಿಮಿಷ ಪಯಣಿಸಿದರೆ ಈ ಪಡ್ಡು ಹೋಟೆಲ್‌ ಸಿಗುತ್ತದೆ.  -9480798954

ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next